ಹಿರಿಯ ಸುದ್ದಿ ನಿರೂಪಕಿ ಸರಳಾ ಮಹೇಶ್ವರಿ ನಿಧನ
Thursday, February 12, 2026
ಭಾರತೀಯ ದೂರದರ್ಶನದ ಹಿರಿಯ ಸುದ್ದಿ ನಿರೂಪಕಿ ಸರಳಾ ಮಹೇಶ್ವರಿ ಅವರು ನಿಧನರಾಗಿದ್ದಾರೆ. ಅವರಿಗೆ 71 ವರ್ಷ ವಯಸ್ಸಾಗಿತ್ತು.
1980ರ ದಶಕದಲ್ಲಿ ಡಿಡಿ ನ್ಯೂಸ್‌ನ ಅತ್ಯಂತ ಪರಿಚಿತ ಮತ್ತು ವಿಶ್ವಾಸಾರ್ಹ ಮುಖಗಳಲ್ಲಿ ಒಬ್ಬರಾಗಿದ್ದ ಅವರು ಸೌಮ್ಯ ಧ್ವನಿ, ನಿಖರ ಉಚ್ಚಾರಣೆ ಮತ್ತು ಘನತೆಯ ಪ್ರಸ್ತುತಿಯಿಂದ ಹೆಸರುವಾಸಿಯಾಗಿದ್ದರು. ಹಿಂದಿ ಭಾಷೆಯಲ್ಲಿ ಪಿ.ಹೆಚ್.ಡಿ ಪದವಿ ಪಡೆದಿದ್ದ ಇವರು, ದೆಹಲಿಯ ಪ್ರತಿಷ್ಠಿತ ಹಂಸರಾಜ್ ಕಾಲೇಜಿನಲ್ಲಿ ಉಪನ್ಯಾಸಕರಾಗಿಯೂ ಸೇವೆ ಸಲ್ಲಿಸಿದ್ದರು.
1991ರಲ್ಲಿ ರಾಜೀವ್ ಗಾಂಧಿಯವರನ್ನು ಹಂತಕರು ಹತ್ಯೆಗೈದಿದ್ದಾಗ, ಇದೇ ಸರಳಾ ಅವರು ಇಡೀ ದೇಶಕ್ಕೆ ಈ ನೋವಿನ ಸುದ್ದಿ ಓದಿ ಹೇಳಿದ್ದರು. ಅಲ್ಲದೇ ಸ್ಥಳಕ್ಕೇ ಧಾವಿಸಿ, ರಾಜೀವ್ ಹತ್ಯೆ ವರದಿಯನ್ನು ಜನರ ಮುಂದಿಟ್ಟಿದ್ದರು. 1997ರಲ್ಲಿ ನೊಬೇಲ್ ಪ್ರಶಸ್ತಿ ಪುರಸ್ಕೃತೆ ಮದರ್ ಥೆರೆಸಾ ಕೊನೆಯುಸಿರೆಳೆದಾಗಲೂ ಪಶ್ಚಿಮ ಬಂಗಾಳಕ್ಕೆ ತೆರಳಿ, ಅಂತ್ಯ ಸಂಸ್ಕಾರವನ್ನು ವರದಿ ಮಾಡಿದ್ದರು.