ರಸ್ತೆ ಅಪಘಾತ; ಗಾಯಾಳು ವಿದ್ಯಾರ್ಥಿ ಚಿಕಿತ್ಸೆ ಫಲಿಸದೆ ಸಾವು
Friday, February 13, 2026
ಮೂಡುಬಿದಿರೆಯ ಬನ್ನಡ್ಕದಲ್ಲಿ ಗುರುವಾರ ರಾತ್ರಿ ನಡೆದ ಕಾರು ಹಾಗೂ ಬೈಕ್ ನಡುವೆ ನಡೆದ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಪಿಯುಸಿ ವಿದ್ಯಾರ್ಥಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.
ಮೃತರನ್ನು ಮಾರ್ಪಾಡಿ ಗ್ರಾಮದ ಕೋಟೆಬಾಗಿಲಿನ ಸದಾನಂದ ಸುವರ್ಣ ರಾಜಶ್ರೀ ದಂಪತಿಯ ಪುತ್ರ ಶ್ರವಣ್ ಎಂದು ಗುರುತಿಸಲಾಗಿದೆ.
ಕಾಮಗಾರಿ ಹಂತದಲ್ಲಿರುವ ಕಾರ್ಕಳ ಮೂಡುಬಿದಿರೆ ರಾಷ್ಟ್ರೀಯ ಹೆದ್ದಾರಿಯ ಬನ್ನಡ್ಕ ದೈವಸ್ಥಾನದ ಸಮೀಪ ಈ ದುರ್ಘಟನೆ ಸಂಭವಿಸಿದೆ. ಕಂಟೆOಟ್ ಕ್ರಿಯೇಟರ್ ಸೂರಜ್ ಅಂಚನ್ ಅವರೊಂದಿಗೆ ಶ್ರವಣ್ ಸಹ ಸವಾರರಾಗಿದ್ದರು ಎನ್ನಲಾಗಿದೆ.
ಕಾರ್ಕಳ ಕಡೆಯಿಂದ ವೇಗವಾಗಿ ಬಂದ ಕಾರು ಬೈಕ್‌ಗೆ ಢಿಕ್ಕಿ ಹೊಡೆದಿದ್ದು, ಢಿಕ್ಕಿಯ ತೀವ್ರತೆಗೆ ಇಬ್ಬರೂ ಗಂಭೀರವಾಗಿ ಗಾಯಗೊಂಡಿದ್ದರು. ಮೊದಲು ಮೂಡುಬಿದಿರೆಯ ಆಸ್ಪತ್ರೆಗೆ ದಾಖಲಿಸಿ, ನಂತರ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ವರ್ಗಾಯಿಸಲಾಯಿತು. ಆದರೆ ಶ್ರವಣ್ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ.