-->
ಆಗುಂಬೆ ಒಡಲಿಗೆ ಅಭಿವೃದ್ಧಿ ಹೆಸರಿನಲ್ಲಿ ಕೊಡಲಿಯೇಟು..!

ಆಗುಂಬೆ ಒಡಲಿಗೆ ಅಭಿವೃದ್ಧಿ ಹೆಸರಿನಲ್ಲಿ ಕೊಡಲಿಯೇಟು..!


ಕರಾವಳಿ ಹಾಗೂ ಮಲೆನಾಡು ಸಂಪರ್ಕಿಸುವ ಕೊಂಡಿ ಆಗುಂಬೆ ಘಾಟ್. ಇಲ್ಲಿನ ಅಪಾಯಕಾರಿ ತಿರುವುಗಳಿಗೆ ಮುಕ್ತಿ ನೀಡಬೇಕೆಂಬ ದಶಕಗಳ ಕೂಗಿಗೆ ಇದೀಗ ಕೇಂದ್ರ ಸರ್ಕಾರ ಸ್ಪಂದಿಸಿದ್ದು, ಅಪಾಯಕಾರಿ ತಿರುವುಗಳನ್ನು ಮೇಲ್ದರ್ಜೆಗೇರಿಸುವ ಹಾಗೂ ಸುರಂಗ ಮಾರ್ಗ ನಿರ್ಮಿಸುವ ಬಗ್ಗೆ ಸಾಧಕ ಬಾಧಕಗಳನ್ನು ಪರಿಶೀಲಿಸಲು ಚಾಲನೆ ನೀಡಲಾಗಿದೆ. ಆಗುಂಬೆಯ ಒಡಲಲ್ಲಿ ಸುರಂಗ ನಿರ್ಮಿಸಿದರೆ ಜೀವ ಸಂಕುಲ ಹಾಗೂ ಸಸ್ಯರಾಶಿಯೇ ನಾಶವಾಗಲಿದೆ ಎಂದು ಇದೀಗ ಪರಿಸರವಾದಿಗಳು ಈ ಯೋಜನೆಗೆ ಅಪಸ್ವರವೆತ್ತಿದ್ದಾರೆ. 


ಆಗುಂಬೆ ಘಾಟಿ ಮೂಲಕ ಹಾದುಹೋಗುವ ರಾಷ್ಟ್ರೀಯ ಹೆದ್ದಾರಿ 169ಎ ರಸ್ತೆಯನ್ನು ಕಿ.ಮೀ. 30.75ರಿಂದ 51.60ರವರೆಗೆ ದ್ವಿಪಥ ರಸ್ತೆ, ಎರಡೂ ಬದಿ ಪಾದಚಾರಿ ಮಾರ್ಗ ಸಹಿತ ವಿಸ್ತರಿಸಲು ಕಾರ್ಯ ಸಾಧ್ಯತಾ ಅಧ್ಯಯನ, ವಿವರವಾದ ಯೋಜನಾ ವರದಿ (ಡಿಪಿಆರ್), ಸಮೀಕ್ಷೆ ಮತ್ತು ಭೂ ಯೋಜನೆ ತಯಾರಿಕೆಗೆ ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ ಟೆಂಡರ್ ಆಹ್ವಾನಿಸಿದೆ. ಇದಕ್ಕಾಗಿ 2.33 ಕೋಟಿ ರೂ. ಮೀಸಲಿಟ್ಟಿದ್ದು, 6 ತಿಂಗಳ ಒಳಗೆ ವಿಸ್ತೃತ ಯೋಜನಾ ವರದಿ ಸಿದ್ಧಪಡಿಸಲು ಸೂಚಿಸಿದೆ.ಡಿಪಿಆರ್ ವ್ಯಾಪ್ತಿಯು ನಿರ್ದಿಷ್ಟ ಸುರಂಗ ವಿನ್ಯಾಸ ತಜ್ಞರು ಮತ್ತು ಹಿರಿಯ ಭೂ ಭೌತಶಾಸಜ್ಞರ ತೊಡಗಿಸಿಕೊಳ್ಳುವಿಕೆಯನ್ನು ಒಳಗೊಂಡಿದೆ. ಆಗುಂಬೆ ಘಾಟಿಯಲ್ಲಿ ಸುರಂಗ ಮಾರ್ಗ ನಿರ್ಮಾಣದ ಆಯ್ಕೆಯ ಕಾರ್ಯ ಸಾಧ್ಯತೆ ಪರೀಕ್ಷೆ, ವಿವರವಾದ ಭೂ ತಾಂತ್ರಿಕತೆ ಪರಿಶೀಲನೆಗೆ ಅವಕಾಶ ಕಲ್ಪಿಸಲಾಗಿದೆ.

ಪಶ್ಚಿಮ ಘಟ್ಟದ ಆಗುಂಬೆ ದಕ್ಷಿಣದ ಚಿರಾಪುಂಜಿ ಎಂದೇ ಪ್ರಸಿದ್ಧಿ. ವಿಶಿಷ್ಟ ಪ್ರಬೇಧದ ಪ್ರಾಣಿ, ಪಕ್ಷಿ ಸಂಕುಲ, ಹರಿಯುವ ನದಿ ತೊರೆ ಸುಂದರ ಜಲಪಾತಗಳು ಮಾತ್ರವಲ್ಲದೇ ವೈದ್ಯಕೀಯ ಗಿಡಮೂಲಿಕೆಗಳ ಒಡಲು ಈ ಆಗುಂಬೆ. ಹೀಗಾಗಿ ಇಲ್ಲಿ ಅಭಿವೃದ್ಧಿ ಹೆಸರಿನಲ್ಲಿ ಸುರಂಗ ನಿರ್ಮಿಸಿದರೆ ಆಗುಂಬೆಯ ಜೀವ ಜಗತ್ತೇ ನಾಶವಾಗಲಿದೆ ಎಂದು ಪರಿಸರ ತಜ್ಞರು ಆತಂಕ ವ್ಯಕ್ತಪಡಿಸಿದ್ದಾರೆ. ಆಗುಂಬೆಯು ಸೋಮೇಶ್ವರ ವನ್ಯಜೀವಿ ಧಾಮದ ಭಾಗವಾಗಿದ್ದು, ಕಾಳಿಂಗ ಸರ್ಪ ಹಾಗೂ ಸಿಂಹಬಾಲದ ಸಿಂಗಳೀಕದOತಹ ಅಪರೂಪದ ಜೀವಿಗಳ ಆವಾಸಸ್ಥಾನವಾಗಿದೆ. ಸುರಂಗ ಕೊರೆಯುವುದರಿಂದ ಅಂತರ್ಜಲದ ಹರಿವಿಗೆ ಅಡ್ಡಿಯಾಗಿ ಮಳೆಕಾಡುಗಳು ನಾಶವಾಗಬಹುದು ಮತ್ತು ಭೂಕುಸಿತದ ಅಪಾಯ ಹೆಚ್ಚಾಗಬಹುದು ಎಂದು ಭೂವಿಜ್ಞಾನಿಗಳು ಮತ್ತು ಪರಿಸರವಾದಿಗಳು ಎಚ್ಚರಿಸಿದ್ದಾರೆ.


ಬೆಟ್ಟಗಳನ್ನು ಕೊರೆಯುವ ಬದಲು, ಅಸ್ತಿತ್ವದಲ್ಲಿರುವ ರಸ್ತೆಯನ್ನೇ ಕ್ಯಾಂಟಿಲಿವರ್  ಮಾದರಿಯಲ್ಲಿ ವಿಸ್ತರಿಸುವ ಮೂಲಕ ಪರಿಸರಕ್ಕೆ ಹಾನಿಯಾಗದಂತೆ ಸುಧಾರಿಸಬಹುದು ಎಂಬ ಸಲಹೆಯನ್ನು ತಜ್ಞರು ನೀಡಿದ್ದಾರೆ. 

ಒಟ್ಟಿನಲ್ಲಿ ಅಭಿವೃದ್ಧಿ ಹೆಸರಿನಲ್ಲಿ ಪರಿಸರ ನಾಶಪಡಿಸುವ ಯೋಜನೆಗಳಿಗೆ ಆಕ್ಷೇಪ ವ್ಯಕ್ತವಾಗಿದೆ.



Ads on article

Advertise in articles 1

advertising articles 2

Advertise under the article