ಮಣಿಪಾಲದಲ್ಲಿ ಸುಧಾರಿತ ಮಕ್ಕಳ ಕ್ಯಾನ್ಸರ್ ಅಸ್ಥಿ ಮಜ್ಜೆ ಕಸಿ ಘಟಕ ಉದ್ಘಾಟನೆ
Wednesday, February 25, 2026
ರಾಜ್ಯದ ಪ್ರಮುಖ ಸಮಗ್ರ ಕ್ಯಾನ್ಸರ್ ಆರೈಕೆ ಕೇಂದ್ರಗಳಲ್ಲಿ ಒಂದಾದ ಕಸ್ತೂರ್ಬಾ ಆಸ್ಪತ್ರೆ ಮಣಿಪಾಲಯ ಶಿರ್ಡಿ ಸಾಯಿಬಾಬಾ ಕ್ಯಾನ್ಸರ್ ಕೇಂದ್ರದಲ್ಲಿ ಸುಧಾರಿತ ಮಕ್ಕಳ ಕ್ಯಾನ್ಸರ್ ಅಸ್ಥಿ ಮಜ್ಜೆ ಕಸಿ (ಬಿಎಂಟಿ) ಘಟಕ ಹಾಗೂ ಅತ್ಯಾಧುನಿಕ ಕ್ಯಾನ್ಸರ್ ಶಸ್ತ್ರಚಿಕಿತ್ಸಾ ಆಪರೇಷನ್ ಥಿಯೇಟರ್ ಉದ್ಘಾಟಿಸಲಾಯಿತು.
ಮಾಹೆ ಮಣಿಪಾಲದ ಮುಖ್ಯ ಕಾರ್ಯಾಚರಣಾ ಅಧಿಕಾರಿ ಡಾ. ಆನಂದ್ ವೇಣುಗೋಪಾಲ್ ಸೌಲಭ್ಯಗಳನ್ನು ಉದ್ಘಾಟಿಸಿ ಮಾತನಾಡಿ, ಹೊಸ ಬಿಎಂಟಿ ಘಟಕ ಮತ್ತು ಶಸ್ತ್ರಚಿಕಿತ್ಸಾ ಥಿಯೇಟರ್ ಆರಂಭದಿಂದ ಸಮಗ್ರ ಕ್ಯಾನ್ಸರ್ ಚಿಕಿತ್ಸೆಯಲ್ಲಿ ಮತ್ತೊಂದು ಮಹತ್ವದ ಹೆಜ್ಜೆ ಇಟ್ಟಿದ್ದೇವೆ. ರೋಗಿಗಳಿಗೆ ಒಂದೇ ಸೂರಿನಡಿ ಗುಣಮಟ್ಟದ, ತಡೆರಹಿತ ಹಾಗೂ ರೋಗಿ-ಕೇಂದ್ರಿತ ಸೇವೆ ನೀಡುವುದು ನಮ್ಮ ಧ್ಯೇಯ ಎಂದರು.
ಬೋಧನಾ ಆಸ್ಪತ್ರೆಗಳ ಮುಖ್ಯ ಕಾರ್ಯಾಚರಣಾ ಅಧಿಕಾರಿ ಡಾ. ಸುಧಾಕರ್ ಕಂಟಿಪುಡಿ, ವೈದ್ಯಕೀಯ ಅಧೀಕ್ಷಕ ಡಾ. ಅವಿನಾಶ್ ಶೆಟ್ಟಿ, ಕ್ಯಾನ್ಸರ್ ಶಸ್ತ್ರಚಿಕಿತ್ಸಾ ವಿಭಾಗದ ಮುಖ್ಯಸ್ಥ ಡಾ. ನವೀನ್ ಕುಮಾರ್ ಎ.ಎನ್ ಹಾಗೂ ಮಕ್ಕಳ ಆಂಕೊಲಾಜಿ ವಿಭಾಗದ ಮುಖ್ಯಸ್ಥ ಡಾ. ವಾಸುದೇವ ಭಟ್ ಕೆ ಉಪಸ್ಥಿತರಿದ್ದರು.
ಮಕ್ಕಳ ಆಂಕೊಲಾಜಿ ಬಿಎಂಟಿ ಘಟಕವು ಅಂತರರಾಷ್ಟ್ರೀಯ ಮಾನದಂಡಗಳಿಗೆ ಅನುಗುಣವಾಗಿ ನಿರ್ಮಿಸಲ್ಪಟ್ಟಿದ್ದು, ವಿಶೇಷ ಐಸೋಲೇಷನ್ ಕೊಠಡಿಗಳು ಮತ್ತು ಕಟ್ಟುನಿಟ್ಟಿನ ಸೋಂಕು ನಿಯಂತ್ರಣ ವ್ಯವಸ್ಥೆಗಳನ್ನು ಒಳಗೊಂಡಿದೆ. ಸಂಕೀರ್ಣ ಕ್ಯಾನ್ಸರ್ ಶಸ್ತ್ರಚಿಕಿತ್ಸೆಗಳನ್ನು ಸುರಕ್ಷಿತವಾಗಿ ಮತ್ತು ನಿಖರವಾಗಿ ನೆರವೇರಿಸಲು ಅಗತ್ಯವಾದ ಆಧುನಿಕ ಸಾಧನೋಪಕರಣಗಳೊಂದಿಗೆ ಹೊಸ ಆಪರೇಷನ್ ಥಿಯೇಟರ್ ವಿನ್ಯಾಸಗೊಳಿಸಲಾಗಿದೆ.ಈ ವಿಸ್ತರಣೆಯೊಂದಿಗೆ ರೋಗನಿರ್ಣಯ, ಶಸ್ತ್ರಚಿಕಿತ್ಸೆ, ಕಿಮೋಥೆರಪಿ, ವಿಕಿರಣ ಚಿಕಿತ್ಸೆ ಹಾಗೂ ಮೂಳೆ ಮಜ್ಜೆ ಕಸಿ ಸೇರಿದಂತೆ ಸಮಗ್ರ ಕ್ಯಾನ್ಸರ್ ಚಿಕಿತ್ಸೆಯನ್ನು ಒಂದೇ ಕೇಂದ್ರದಲ್ಲಿ ಲಭ್ಯವಾಗುವಂತೆ ಮಾಡುವ ಮೂಲಕ ಕಸ್ತೂರ್ಬಾ ಆಸ್ಪತ್ರೆ ಪ್ರಾದೇಶಿಕ ಮಟ್ಟದಲ್ಲಿ ತನ್ನ ಸೇವಾ ಸಾಮರ್ಥ್ಯವನ್ನು ಮತ್ತಷ್ಟು ವಿಸ್ತರಿಸಿದೆ.
.jpeg)
