ಕಟಪಾಡಿಯಲ್ಲಿ ಪಲ್ಟಿಯಾದ ಗ್ಯಾಸ್ ಟ್ಯಾಂಕರ್ ತೆರವು; 14 ಗಂಟೆಗಳ ಯಶಸ್ವಿ ಕಾರ್ಯಾಚರಣೆ
Tuesday, March 17, 2026
ಉಡುಪಿಯ ಕಟಪಾಡಿಯ ರಾಷ್ಟ್ರೀಯ ಹೆದ್ದಾರಿಯಲ್ಲಿ ಮಗುಚಿ ಬಿದ್ದ ಗ್ಯಾಸ್ ಟ್ಯಾಂಕರ್ ನ್ನು ಸತತ 14 ಗಂಟೆಗಳ ಕಾರ್ಯಾಚರಣೆ ನಡೆಸಿ ತೆರವುಗೊಳಿಸಲಾಯಿತು.
ಉಡುಪಿ ಅಗ್ನಿಶಾಮಕದಳದ ಸಿಬ್ಬಂದಿಗಳು, ಪೊಲೀಸರು ಹಾಗೂ ಸಂಬಂಧಿಸಿದ ಇಲಾಖೆಯ ಅಧಿಕಾರಿಗಳ ತಂಡ ಕಾರ್ಯಾಚರಣೆ ನಡೆಸಿ ರಾತ್ರಿ ವೇಳೆಗೆ ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತಂದಿದ್ದಾರೆ.
ಮಂಗಳೂರಿನಿಂದ ಉಡುಪಿ ಕಡೆಗೆ ಸಾಗಾಟ ಮಾಡುತ್ತಿದ್ದ ಗ್ಯಾಸ್ ಟ್ಯಾಂಕರ್ ಕಟಪಾಡಿ ಹೆದ್ದಾರಿಯ ಕಾಮಗಾರಿ ನಡೆಯುತ್ತಿದ್ದ ಸ್ಥಳದಲ್ಲಿ ನಿಯಂತ್ರಣ ಕಳೆದುಕೊಂಡು ಕಾರಿಗೆ ಡಿಕ್ಕಿಯಾಗಿದೆ. ಬಳಿಕ ರಸ್ತೆ ಮಧ್ಯೆ ಉರುಳಿ ಬಿದ್ದಿದೆ. ಈ ವೇಳೆ ಟ್ಯಾಂಕರ್‌ನಿಂದ ಅನಿಲ ಸೋರಿಕೆಯಾಗಿದ್ದು, ಮುಂಜಾಗ್ರತಾ ಕ್ರಮವಾಗಿ ವಾಹನ ಸಂಚಾರ ಬಂದ್ ಮಾಡಲಾಗಿತ್ತು. ಮಾ. 16ರ ಬೆಳಗ್ಗೆಯಿಂದ ಆರಂಭವಾದ ಕಾರ್ಯಾಚರಣೆ ರಾತ್ರಿ ವೇಳೆಗೆ ಪೂರ್ಣಗೊಂಡಿತು. ಅನಿಲ ಸೋರಿಕೆಯಾಗಿರುವುದರಿಂದ ಸುತ್ತಮುತ್ತಲಿನ ಪ್ರದೇಶದಲ್ಲಿ ಬೆಂಕಿ ಉರಿಸುವಂತಹ ಚಟುವಟಿಕೆಗಳನ್ನು ಸಂಪೂರ್ಣ ನಿಷೇಧಿಸಿ ಕಾರ್ಯಾಚರಣೆ ಆರಂಭಿಸಲಾಯಿತು. ಸತತ 14 ಗಂಟೆಗಳ ಕಾರ್ಯಾಚರಣೆ ನಡೆಸಿ ಟ್ಯಾಂಕರ್ ಅನ್ನು ತೆರವು ಮಾಡಲಾಯಿತು.
ಅಗ್ನಿಶಾಮಕದಳ, ಪೊಲೀಸರು ಹಾಗೂ ಇಲಾಖಾ ಅಧಿಕಾರಿಗಳ ತುರ್ತು ಸ್ಪಂದನೆ ಹಾಗೂ ಸಕಾಲದಲ್ಲಿ ಮಾಡಿದ ಕಾರ್ಯಾಚರಣೆಯಿಂದ ಬಹುದೊಡ್ಡ ಅನಾಹುತವೊಂದು ತಪ್ಪಿದಂತಾಗಿದೆ. ಟ್ಯಾಂಕರ್ ತೆರವು ಕಾರ್ಯಾಚರಣೆ ಬಳಿಕ ಹೆದ್ದಾರಿಯಲ್ಲಿ ವಾಹನ ಸಂಚಾರ ಎಂದಿನಂತಿದೆ.