ಯುವತಿಯನ್ನು ಬೆದರಿಸಿ 14 ಲಕ್ಷ ರೂ. ದೋಚಿದ ಆರೋಪ: ಪ್ರಕರಣ ದಾಖಲು
Sunday, March 15, 2026
ಯುವತಿಯನ್ನು ಬೆದರಿಸಿ 14 ಲಕ್ಷ ರೂಪಾಯಿ ಹಣ ಪಡೆದುಕೊಂಡಿರುವ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮಾರ್ಪಳ್ಳಿಯ ಮಹಿಮಾ (22) ಎಂಬವರಿಗೆ ಶರತ್ ಎಂಬಾತ ವಿವಿಧ ಸಮಸ್ಯೆಗಳನ್ನು ಹೇಳಿಕೊಂಡು ಹಂತ ಹಂತವಾಗಿ ಹಣ ಪಡೆದುಕೊಳ್ಳುತ್ತಿದ್ದನೆಂದು ಆರೋಪಿಸಲಾಗಿದೆ. ಬಳಿಕ ಮಹಿಮಾ ಹಣವನ್ನು ವಾಪಸ್ಸು ಕೇಳಿದಾಗ ಆತ ವಿವಿಧ ನೆಪಗಳನ್ನು ಹೇಳಿ ತಪ್ಪಿಸಿಕೊಳ್ಳುತ್ತಿದ್ದನು ಎನ್ನಲಾಗಿದೆ.
2026ರ ಫೆಬ್ರವರಿಯಲ್ಲಿ ಶರತ್ ದೂರವಾಣಿ ಮೂಲಕ ಸಂಪರ್ಕಿಸಿ ತನ್ನ ತಂದೆಗೆ ಆರೋಗ್ಯ ಸಮಸ್ಯೆಯಿದ್ದು ಚಿಕಿತ್ಸೆಗಾಗಿ ರೂಪಾಯಿ 15,00,000 ಹಣ ನೀಡುವಂತೆ ಕೇಳಿದ್ದನು ಎಂದು ದೂರಿನಲ್ಲಿ ತಿಳಿಸಲಾಗಿದೆ. ಇದಕ್ಕೆ ಮಹಿಮಾ ಹಣ ನೀಡಲು ಸಾಧ್ಯವಿಲ್ಲ ಎಂದು ಹೇಳಿದಾಗ ಶರತ್ ಅವಾಚ್ಯ ಶಬ್ದಗಳಿಂದ ನಿಂದಿಸಿ, ಹಣ ಕೊಡದಿದ್ದರೆ ಜೀವ ಸಹಿತ ಬಿಡುವುದಿಲ್ಲ ಎಂದು ಬೆದರಿಕೆ ಹಾಕಿದ್ದಾನೆ ಎಂದು ಆರೋಪಿಸಲಾಗಿದೆ. ಇದರಿಂದ ಭಯಗೊಂಡ ಮಹಿಮಾ ಒತ್ತಾಯಪೂರ್ವಕವಾಗಿ ಆತನಿಗೆ ರೂಪಾಯಿ 14 ಲಕ್ಷ ಹಣ ನೀಡಿದ್ದಾಗಿ ತಿಳಿದುಬಂದಿದೆ.
ಈ ಕುರಿತು ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.