ಜೀವನ ಮೌಲ್ಯಕ್ಕೆ ಉದಾಹರಣೆ ಶ್ರೀರಾಮ; ಚಿಂತಕಿ ವೀಣಾ ಬನ್ನಂಜೆ
ನಮ್ಮಲ್ಲಿರುವ ಶಕ್ತಿಯೂ ನಮ್ಮನ್ನು ರಕ್ಷಿಸಿಕೊಳ್ಳಲು ಅಲ್ಲ, ಬದಲಾಗಿ ಸಮಾಜದ ಒಳಿತಿಗಾಗಿ, ಲೋಕ ಕಲ್ಯಾಣಕ್ಕಾಗಿ ಸೇವೆಯನ್ನು ಮಾಡಬೇಕು ಎಂದು ಜಗತ್ತಿಗೆ ಸಂದೇಶವನ್ನು ಸಾರಿದ ಶ್ರೀರಾಮ. ಭಾರತೀಯ ಪರಂಪರೆಯಲ್ಲಿ ಜೀವನಮೌಲ್ಯದ ಮೊದಲ ಉದಾಹರಣೆ ಎಂದು ಚಿಂತಕಿ ವೀಣಾ ಬನ್ನಂಜೆ ಅಭಿಪ್ರಾಯಪಟ್ಟರು.
ಅವರು ತಿಂಗಳೆ ಪ್ರತಿಷ್ಠಾನದ ವತಿಯಿಂದ ತಿಂಗಳೆಯಲ್ಲಿ ನಡೆದ ಸಾಹಿತ್ಯೋತ್ಸವದಲ್ಲಿ ಮಾತನಾಡಿದರು.
ಭಾರತೀಯ ಪರಂಪರೆಯ ಪ್ರತಿ ಮನುಷ್ಯನ ಇನ್ನೊಂದು ಚ್ಯುತಿ ಬಾರದಂತೆ ಬದುಕ ಬಹುದಾದ ಏಕಮಾತ್ರ ವ್ಯಕ್ತಿತ್ವ ಶ್ರೀರಾಮನದ್ದು. ವಾಲ್ಮೀಕಿಯವರು ಆರಂಭದ 15 ವರ್ಷವನ್ನು ಉಲ್ಲೇಖಿಸಿಲ್ಲ. ರಾಮನ ಬಾಲ್ಯದ ಬಗ್ಗೆ ಎಲ್ಲಿಯೂ ದಾಖಲೆ ಇಲ್ಲ. ಆದರೆ 15 ವರ್ಷದ ನಂತರ ನಡೆದ ಹಾದಿ ಇಂದು ಎಲ್ಲರಿಗೂ ಆದರ್ಶವಾಗಿದೆ ಎಂದರು.
ಇಂತಹ ರಾಮ ಭಕ್ತರು ಆರ್‌ಎಸ್‌ಎಸ್ ಸಂಘಟನೆಯನ್ನು ಕಟ್ಟಿಕೊಂಡು ಸೇವೆಯನ್ನು ನೀಡುತ್ತಿದ್ದಾರೆ. ಆದರೆ ಹೆಸರನ್ನು ನೊಂದಾಯಿಸಿಲ್ಲ ಎಂದು ರಾವಣ ಪರಂಪರೆಯವರು ಮುಗಿಬಿದ್ದಿದ್ದಾರೆ. ಸೇವೆಯೇ ಅಂತಿಮ ಎಂದು ನಿರ್ಧರಿಸಿ ರಾಮನ ತತ್ವವನ್ನು ಅಳವಡಿಸಿಕೊಂಡ ಸಂಸ್ಥೆಯೂ, ವಾನರ ಸೇನೆಯಂತೆ ಗಣ ಮೌನದಿಂದ ಟೀಕೆಗಳ ನಡುವೆಯೂ ತನ್ನ ಕೆಲಸದಲ್ಲಿ ನಿರತವಾಗಿರುವುದು ಶ್ಲಾಘನೀಯ ಎಂದು ನುಡಿದರು.
ಮಾಹೆ ಮಣಿಪಾಲದ ಸಹಕುಲಾಧಿಪತಿ ಡಾ.ಹೆಚ್.ಎಸ್.ಬಲ್ಲಾಳ್ ಅಧ್ಯಕ್ಷತೆ ವಹಿಸಿದ್ದರು.
ಆರ್‌ಎಸ್‌ಎಸ್ ಮುಖಂಡರಾದ ಬಾಲಕೃಷ್ಣ ಭಂಡಾರಿ ಕುಂಬ್ಳೆ, ರವೀಂದ್ರ ಶೆಟ್ಟಿ ಕೊಲ್ಲಬೆಟ್ಟು, ಪ್ರಸಾದ್ ನೇತ್ರಾಲಯದ ನಿರ್ದೇಶಕ ಡಾ.ಕೃಷ್ಣಪ್ರಸಾದ್ ಕೂಡ್ಲು ಉಪಸ್ಥಿತರಿದ್ದರು.
ಇದೇ ಸಂದರ್ಭದಲ್ಲಿ ತಿಂಗಳೆ ಪ್ರಶಸ್ತಿಯನ್ನು ನಿವೃತ್ತ ಶಿಕ್ಷಕ ಹಾಗು ಯಕ್ಷ ಕಲಾರಂಗದ ಕಾರ್ಯದರ್ಶಿ ಮುರುಳಿ ಕಡೆಕಾರ್ ಅವರಿಗೆ ನೀಡಿ ಗೌರವಿಸಲಾಯಿತು
ತಿಂಗಳೆ ಪ್ರತಿಷ್ಠಾನದ ಅಧ್ಯಕ್ಷ ತಿಂಗಳೆ ವಿಕ್ರಮಾರ್ಜುನ ಹೆಗ್ಗಡೆ ಸ್ವಾಗತಿಸಿದರು. ಅಮಿತಾಂಜಲಿ ಕಿರಣ್ ಹಾಗು ಡಾ.ಪ್ರಶಾಂತ್ ನಿರೂಪಿಸಿದರು.