ಗ್ರಾಹಕರ ಬೇಡಿಕೆಗೆ ಅನುಗುಣವಾಗಿ ಅನಿಲ ಪೂರೈಕೆಗೆ ಕ್ರಮ: ಜಿಲ್ಲಾಧಿಕಾರಿ
ಅನಿಲ ಕೊರತೆ ಆತಂಕದಿಂದ ಸಾರ್ವಜನಿಕರು ಏಕಕಾಲದಲ್ಲಿ ಅನಿಲ ಬುಕ್ಕಿಂಗ್ ಮಾಡುತ್ತಿರುವುದು ಗಮನಕ್ಕೆ ಬಂದಿದ್ದು, ಸಾರ್ವಜನಿಕರ ಬೇಡಿಕೆಗೆ ಅನುಗುಣವಾಗಿ ಆದ್ಯತೆಯ ಮೇರೆಗೆ ಅನಿಲ ಪೂರೈಕೆಗೆ ಕ್ರಮವಹಿಸುವಂತೆ ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ ಸೂಚಿಸಿದ್ದಾರೆ.
ಮಣಿಪಾಲ ರಜತಾದ್ರಿಯ ಜಿಲ್ಲಾಧಿಕಾರಿ ಕಚೇರಿಯಲ್ಲಿ ಗ್ಯಾಸ್ ಏಜೆನ್ಸಿ ಮಾಲೀಕರೊಂದಿಗೆ ನಡೆದ ಸಭೆಯಲ್ಲಿ ಅವರು ಮಾತನಾಡಿದರು.
ಮಧ್ಯಪ್ರಾಚ್ಯ ದೇಶಗಳಲ್ಲಿ ನಡೆಯುತ್ತಿರುವ ಯುದ್ಧದ ಪರಿಣಾಮದಿಂದ ದೇಶದಲ್ಲಿ ಅಡುಗೆ ಅನಿಲ ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಬಹುದು ಎಂಬ ವದಂತಿಗಳಿಗೆ ಸಾರ್ವಜನಿಕರು ಕಿವಿಗೊಡಬಾರದು. ಜಿಲ್ಲೆಯಲ್ಲಿ ಗೃಹಬಳಕೆ ಅಡುಗೆ ಅನಿಲದ ದಾಸ್ತಾನು ಸಾಕಷ್ಟು ಪ್ರಮಾಣದಲ್ಲಿದ್ದು, ಗ್ರಾಹಕರು ಆತಂಕಪಡಬೇಕಾದ ಅಗತ್ಯವಿಲ್ಲ ಎಂದು ತಿಳಿಸಿದರು.
ಜಿಲ್ಲೆಯಲ್ಲಿ ಎರಡು ಅನಿಲ ಸಂಪರ್ಕ ಹೊಂದಿರುವವರಿಗಿಂತ ಒಂದು ಸಿಲಿಂಡರ್ ಮಾತ್ರ ಹೊಂದಿರುವ ಗ್ರಾಹಕರಿಗೆ ಆದ್ಯತೆಯ ಮೇರೆಗೆ ಅನಿಲ ಪೂರೈಕೆ ಮಾಡಬೇಕು ಎಂದು ಸೂಚಿಸಿದರು. ಅನಿಲದ ಮಿತ ಬಳಕೆ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಬೇಕು ಎಂದರು. ಪ್ರತಿ ಗ್ರಾಹಕರಿಗೆ ಕೊನೆಯ ಮರುಪೂರಣದ ದಿನಾಂಕದಿಂದ 25 ದಿನಗಳ ಇಂಟರ್-ಬುಕ್ಕಿಂಗ್ ಅವಧಿಯನ್ನು ನಿಗದಿಪಡಿಸಲಾಗಿದೆ ಎಂದು ಅವರು ತಿಳಿಸಿದರು.
ಅನಿಲ ಪೂರೈಕೆ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ತಪ್ಪು ಮಾಹಿತಿ ಹರಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು. ಗೃಹ ಹಾಗೂ ವಾಣಿಜ್ಯ ಬಳಕೆಯ ಸಿಲಿಂಡರ್‌ಗಳನ್ನು ಕಾಳಸಂತೆಯಲ್ಲಿ ಮಾರಾಟ, ಸಂಗ್ರಹಣೆ ಅಥವಾ ಅನಧಿಕೃತವಾಗಿ ಸಾಗಣೆ ಮಾಡಿದರೆ ಕಟ್ಟುನಿಟ್ಟಿನ ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಸಿದರು. ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಅಬೀದ್ ಗದ್ಯಾಳ, ಆಹಾರ ನಾಗರಿಕ ಸರಬರಾಜು ಇಲಾಖೆಯ ಉಪನಿರ್ದೇಶಕ ರವೀಂದ್ರ, ಗ್ಯಾಸ್ ಏಜೆನ್ಸಿ ಮಾಲೀಕರು ಹಾಗೂ ಸರಬರಾಜುದಾರರು ಉಪಸ್ಥಿತರಿದ್ದರು.
