-->
ಭಾರತದಲ್ಲಿ ಇಂಧನ ಕೊರತೆ ಇಲ್ಲ; ಕೇಂದ್ರ ಸರ್ಕಾರ ಸ್ಪಷ್ಟನೆ

ಭಾರತದಲ್ಲಿ ಇಂಧನ ಕೊರತೆ ಇಲ್ಲ; ಕೇಂದ್ರ ಸರ್ಕಾರ ಸ್ಪಷ್ಟನೆ


ಇರಾನ್, ಇಸ್ರೇಲ್ ಹಾಗೂ ಅಮೆರಿಕಾ ನಡುವೆ ಉದ್ಭವಿಸಿರುವ ಯುದ್ಧ ಪರಿಸ್ಥಿತಿಯಿಂದ ಭಾರತದಲ್ಲಿ ಇಂಧನ ಕೊರತೆ ಉಂಟಾಗಿದೆ ಎಂಬ ವರದಿಗಳನ್ನು ಕೇಂದ್ರ ಸರ್ಕಾರ ತಳ್ಳಿಹಾಕಿದೆ. 

ದೇಶದಲ್ಲಿ ಇಂಧನದ ಪೂರೈಕೆ ಸಮರ್ಪಕವಾಗಿದ್ದು, ಯಾವುದೇ ರೀತಿಯ ಅಭಾವ ಉಂಟಾಗುವುದಿಲ್ಲ ಎಂದು ಸರ್ಕಾರ ಸ್ಪಷ್ಟಪಡಿಸಿದೆ.ಭಾರತವು ರಷ್ಯಾ ಸೇರಿದಂತೆ ಹಲವಾರು ದೇಶಗಳಿಂದ ಕಚ್ಚಾ ತೈಲವನ್ನು ಆಮದು ಮಾಡಿಕೊಳ್ಳುತ್ತಿರುವುದರಿಂದ ತೈಲದ ಕೊರತೆ ಎದುರಾಗುವ ಸಾಧ್ಯತೆ ಇಲ್ಲ ಎಂದು ಕೇಂದ್ರ ತಿಳಿಸಿದೆ. ಪ್ರಸ್ತುತ ದೇಶದ ಇಂಧನ ಪೂರೈಕೆಯನ್ನು ಸುರಕ್ಷಿತವಾಗಿ ನಿರ್ವಹಿಸಲಾಗುತ್ತಿದ್ದು, ಜನರು ಆತಂಕಪಡಬೇಕಾದ ಅಗತ್ಯವಿಲ್ಲ ಎಂದು ಸರ್ಕಾರ ಹೇಳಿದೆ.ಕೇಂದ್ರ ಸರ್ಕಾರ ನೀಡಿದ ಮಾಹಿತಿಯ ಪ್ರಕಾರ, ದೇಶದಲ್ಲಿ ಈಗಾಗಲೇ 250 ಮಿಲಿಯನ್ ಬ್ಯಾರೆಲ್‌ಗಿಂತ ಹೆಚ್ಚು ಕಚ್ಚಾ ತೈಲ ಸಂಗ್ರಹವಿದೆ. ಈ ಸಂಗ್ರಹವು ಸುಮಾರು 50 ದಿನಗಳ ಇಂಧನ ಅಗತ್ಯವನ್ನು ಪೂರೈಸಲು ಸಾಕಾಗುತ್ತದೆ ಎಂದು ತಿಳಿಸಲಾಗಿದೆ.

ಇದಲ್ಲದೆ ಭಾರತವು 40ಕ್ಕೂ ಹೆಚ್ಚು ದೇಶಗಳಿಂದ ಕಚ್ಚಾ ತೈಲವನ್ನು ಆಮದು ಮಾಡಿಕೊಳ್ಳುತ್ತಿದ್ದು, ದೇಶೀಯ ಉತ್ಪಾದನೆಯೂ ಇಂಧನ ಕ್ಷೇತ್ರದ ಭದ್ರತೆಯನ್ನು ಮತ್ತಷ್ಟು ಬಲಪಡಿಸಿದೆ. ಪ್ರಸ್ತುತ ಭಾರತದ ತೈಲ ಆಮದಿನ ಸುಮಾರು 40 ಶೇಕಡಾ ಮಾತ್ರ ಹಾರ್ಮುಜ್ ಜಲಸಂಧಿಯ ಮೂಲಕ ಬರುತ್ತಿದ್ದು, ಉಳಿದ 60 ಶೇಕಡಾ ಇತರ ಅಂತಾರಾಷ್ಟ್ರೀಯ ಸಾಗಣೆ ಮಾರ್ಗಗಳ ಮೂಲಕ ದೇಶಕ್ಕೆ ತಲುಪುತ್ತಿದೆ ಎಂದು ಕೇಂದ್ರ ಸರ್ಕಾರ ಮಾಹಿತಿ ನೀಡಿದೆ.

ಜಾಗತಿಕ ಅನಿಲ ಪೂರೈಕೆ ವ್ಯವಸ್ಥೆಯಲ್ಲಿ ಉಂಟಾದ ಅಸ್ಥಿರತೆಯ ನಡುವೆಯೂ, ಭಾರತದಲ್ಲಿ ಸಿಎನ್‌ಜಿ ಹಾಗೂ ಪಿಎನ್‌ಜಿ ಬೆಲೆಯಲ್ಲಿ ಯಾವುದೇ ಹೆಚ್ಚಳ ಮಾಡಿಲ್ಲ ಎಂದು Adani Total Gas Limited ತಿಳಿಸಿದೆ. ಆದರೆ ಕೈಗಾರಿಕಾ ಮತ್ತು ವಾಣಿಜ್ಯ ಬಳಕೆದಾರರಿಗೆ ಪೂರೈಸುವ ಎಲ್‌ಎನ್‌ಜಿ  ಬಳಕೆಯನ್ನು ತಾತ್ಕಾಲಿಕವಾಗಿ ಕಡಿಮೆ ಮಾಡುವಂತೆ ಸಂಸ್ಥೆ ಸೂಚನೆ ನೀಡಿದೆ.

ಕಂಪನಿಯ ಪ್ರಕಟಣೆಯ ಪ್ರಕಾರ, ಗೃಹಬಳಕೆ ಹಾಗೂ ವಾಹನಗಳಿಗೆ ಬಳಸುವ ಸಿಎನ್‌ಜಿ ಮತ್ತು ಪಿಎನ್‌ಜಿ ಪೂರೈಕೆಯಲ್ಲಿ ಯಾವುದೇ ಬದಲಾವಣೆ ಇಲ್ಲ. ಸಾಮಾನ್ಯ ಗ್ರಾಹಕರಿಗೆ ಅನಿಲ ಪೂರೈಕೆ ನಿರಂತರವಾಗಿ ಮುಂದುವರಿಯಲಿದೆ ಎಂದು ಸಂಸ್ಥೆ ಸ್ಪಷ್ಟಪಡಿಸಿದೆ. ಇದರಿಂದ ಗೃಹಬಳಕೆದಾರರು ಮತ್ತು ವಾಹನ ಚಾಲಕರಿಗೆ ಯಾವುದೇ ಹೆಚ್ಚುವರಿ ಹೊರೆ ಬರುವುದಿಲ್ಲ ಎಂಬುದು ತಿಳಿದುಬಂದಿದೆ.


Ads on article

Advertise in articles 1

advertising articles 2

Advertise under the article