ಇಂದಿನಿಂದ ಗೃಹಬಳಕೆ ಎಲ್‌ಪಿಜಿ ಸಿಲಿಂಡರ್ ಬೆಲೆ ಏರಿಕೆ
ಇರಾನ್-ಅಮೆರಿಕ-ಇಸ್ರೇಲ್ ಯುದ್ಧದ ಬಿಸಿ ಭಾರತಕ್ಕೂ ತಟ್ಟಿದ್ದು, ದೇಶಾದ್ಯಂತ ಇಂದಿಂದಲೇ ಗೃಹಬಳಕೆಯ 14.2 ಕೆ.ಜಿ ತೂಕದ ಸಿಲಿಂಡರ್ ಬೆಲೆ 60 ರೂಪಾಯಿಗಳಷ್ಟು ಹೆಚ್ಚಿದೆ.
ದರ ಪರಿಷ್ಕರಣೆಯಿಂದ ಎಲ್‌ಪಿಜಿ ಸಿಲಿಂಡರ್ ಬೆಲೆ ದೆಹಲಿಯಲ್ಲಿ 853 ರೂಪಾಯಿಯಿಂದ 913 ರೂಪಾಯಿಗೆ ಏರಿದೆ. ಮುಂಬೈನಲ್ಲಿ ಎಲ್‌ಪಿಜಿ ಸಿಲಿಂಡರ್ ದರ 852.50 ರೂಪಾಯಿಯಿಂದ 912.5 ರೂಪಾಯಿಗೆ ಹೆಚ್ಚಿದೆ. ಕೊಲ್ಕತ್ತಾದಲ್ಲಿ 879 ರೂಪಾಯಿಯಿಂದ 930ಕ್ಕೆ ಹಾಗೂ ಚೆನ್ನೈನಲ್ಲಿ 868.50 ರೂಪಾಯಿಯಿಂದ 928.50 ರೂಪಾಯಿಗೆ ಏರಿಕೆಯಾಗಿದೆ. ಈ ಬೆಲೆ ಏರಿಕೆ ವ್ಯವಹಾರಗಳ ಮೇಲೂ ಪರಿಣಾಮ ಬೀರಲಿದ್ದು, ವಾಣಿಜ್ಯ ಬಳಕೆಯ ಎಲ್‌ಪಿಜಿ ಸಿಲಿಂಡರ್ ದರ 115 ರೂಪಾಯಿ ಹೆಚ್ಚಳವಾಗಿದೆ.
ವಾಣಿಜ್ಯ ಬಳಕೆಯ ಸಿಲಿಂಡರ್ ದರ ದೆಹಲಿಯಲ್ಲಿ 1883 ರೂಪಾಯಿ, ಮುಂಬೈನಲ್ಲಿ 1835, ಕೊಲ್ಕತ್ತಾದಲ್ಲಿ 1990 ಹಾಗೂ ಚೆನ್ನೈನಲ್ಲಿ 2043.5 ರೂಪಾಯಿಗೆ ಹೆಚ್ಚಿದೆ. 2025ರ ಏಪ್ರಿಲ್ ಬಳಿಕ ಇದೇ ಮೊದಲ ಬಾರಿಗೆ ಎಲ್‌ಪಿಜಿ ದರ ಏರಿಕೆಯಾಗಿದೆ. ಈ ದರ ಏರಿಕೆಯಿಂದ ಗೃಹಬಳಕೆ ಗ್ರಾಹಕರು, ಹೋಟೆಲ್ ಮತ್ತು ರೆಸ್ಟೋರೆಂಟ್ಗಳ ಮೇಲೆ ಭಾರಿ ಪರಿಣಾಮ ಉಂಟಾಗಲಿದೆ.
ಮಧ್ಯಪ್ರಾಚ್ಯ ಬಿಕ್ಕಟ್ಟಿನ ನಡುವೆಯೂ ಅನಿಲ ಪೂರೈಕೆ ವ್ಯವಸ್ಥೆ ಆರಾಮದಾಯಕವಾಗಿದೆ ಎಂದು ಕೇಂದ್ರ ಸರ್ಕಾರ ಸ್ಪಷ್ಟಪಡಿಸಿದೆ. "ಕೈಗೆಟುಕುವ ಮತ್ತು ಸುಸ್ಥಿರ ಇಂಧನವನ್ನು ನಮ್ಮ ಪ್ರಜೆಗಳಿಗೆ ಲಭ್ಯವಾಗುವಂತೆ ಮಾಡುವುದು ನಮ್ಮ ಆದ್ಯತೆ. ನಾವು ಆರಾಮದಾಯಕವಾಗಿ ಅದನ್ನು ಮಾಡುತ್ತಿದ್ದೇವೆ. ಭಾರತದಲ್ಲಿ ಇಂಧನ ಕೊರತೆ ಇಲ್ಲ. ಆದ್ದರಿಂದ ನಮ್ಮ ಇಂಧನ ಗ್ರಾಹಕರು ಆತಂಕಪಡುವ ಅಗತ್ಯವಿಲ್ಲ" ಎಂದು ಪೆಟ್ರೋಲಿಯಂ ಖಾತೆ ಸಚಿವ ಹರ್ದೀಪ್ ಸಿಂಗ್ ಪುರಿ ಎಕ್ಸ್ ಪೋಸ್ಟ್ ನಲ್ಲಿ ಸ್ಪಷ್ಟಪಡಿಸಿದ್ದಾರೆ.