ದ. ಕ ಜಿಲ್ಲೆಯ ಅಭಿವೃದ್ಧಿಗೆ ಹೊಸ ಭಾಷ್ಯ ಬರೆದ ಬಜೆಟ್: ಮಂಜುನಾಥ ಭಂಡಾರಿ ಶ್ಲಾಘನೆ
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಂಡಿಸಿರುವ 2026-27ನೇ ಸಾಲಿನ ರಾಜ್ಯ ಬಜೆಟ್ ಕರಾವಳಿಯ ಆರ್ಥಿಕತೆ ಮತ್ತು ಶಿಕ್ಷಣ ಕ್ಷೇತ್ರಕ್ಕೆ ಹೊಸ ಚೈತನ್ಯ ನೀಡುವಂತಿದೆ ಎಂದು ವಿಧಾನ ಪರಿಷತ್ ಶಾಸಕ ಮಂಜುನಾಥ ಭಂಡಾರಿ ಅವರು ಅಭಿಪ್ರಾಯಪಟ್ಟಿದ್ದಾರೆ.
ಬಜೆಟ್ ಕುರಿತು ಸಮಗ್ರ ವಿಶ್ಲೇಷಣೆ ನಡೆಸಿರುವ ಅವರು, ಇದು ಕೇವಲ ಅಂಕಿ-ಅಂಶಗಳ ಬಜೆಟ್ ಆಗಿರದೆ, ದೂರದೃಷ್ಟಿಯ 'ಅಭಿವೃದ್ಧಿ ಪತ್ರ'ವಾಗಿದೆ ಎಂದು ಬಣ್ಣಿಸಿದ್ದಾರೆ.
ಬಜೆಟ್‌ನಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಪ್ರಗತಿಗೆ ಪೂರಕವಾದ ಅಂಶಗಳನ್ನು ಉಲ್ಲೇಖಿಸಿ ಮಾತನಾಡಿದ ಅವರು, "ಮೀನುಗಾರಿಕೆ ಜಿಲ್ಲೆಯ ಪ್ರಮುಖ ಆರ್ಥಿಕ ಮೂಲವಾಗಿದ್ದು ಇಲ್ಲಿ ಅತ್ಯಾಧುನಿಕ 'ಸೆಂಟರ್ ಆಫ್ ಎಕ್ಸಲೆನ್ಸ್' ಸ್ಥಾಪಿಸಲು ಮುಂದಾಗಿರುವುದು ಸ್ವಾಗತಾರ್ಹ. ಇದು ಮೀನುಗಾರರಿಗೆ ಆಧುನಿಕ ತಂತ್ರಜ್ಞಾನದ ನೆರವು ನೀಡಲಿದೆ. ಕರಾವಳಿ ಪ್ರವಾಸೋದ್ಯಮಕ್ಕೆ ವೇಗ ನೀಡಲು 'ಸೀ ಪ್ಲೇನ್' ಮತ್ತು 'ಹೆಲಿ ಟ್ಯಾಕ್ಸಿ'ಗಳಂತಹ ಆಧುನಿಕ ಸಾರಿಗೆ ಸೌಲಭ್ಯಗಳನ್ನು ಘೋಷಿಸಿರುವುದು ಜಾಗತಿಕ ಮಟ್ಟದಲ್ಲಿ ಮಂಗಳೂರನ್ನು ಪ್ರವಾಸಿ ತಾಣವಾಗಿ ಗುರುತಿಸಲು ಸಹಕಾರಿಯಾಗಲಿದೆ“ ಎಂದಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲೆಯ ಆಯಕಟ್ಟಿನ ಪ್ರದೇಶಗಳಾದ ಮಾಣಿ ಮತ್ತು ಸಜಿಪನಡುವಿನಲ್ಲಿ ಹೊಸ ಪೊಲೀಸ್ ಠಾಣೆಗಳನ್ನು ಸ್ಥಾಪಿಸುವ ಸರ್ಕಾರದ ನಿರ್ಧಾರವು ಜಿಲ್ಲೆಯ ಶಾಂತಿ ಮತ್ತು ಸುವ್ಯವಸ್ಥೆಯನ್ನು ಮತ್ತೊಂದು ಹಂತಕ್ಕೆ ಕೊಂಡೊಯ್ಯಲಿದೆ,
"ಬಂಟ್ವಾಳ ತಾಲ್ಲೂಕಿನ ಮಾಣಿ ಮತ್ತು ಸಜಿಪನಡು ಪ್ರದೇಶಗಳು ಭೌಗೋಳಿಕವಾಗಿ ಮತ್ತು ಆಡಳಿತಾತ್ಮಕವಾಗಿ ಅತ್ಯಂತ ಪ್ರಮುಖ ಕೇಂದ್ರಗಳಾಗಿವೆ. ಇಲ್ಲಿ ಹೊಸ ಪೊಲೀಸ್ ಠಾಣೆಗಳನ್ನು ಪ್ರಾರಂಭಿಸಬೇಕೆಂಬುದು ದೀರ್ಘಕಾಲದ ಬೇಡಿಕೆಯಾಗಿತ್ತು. ಈ ಭಾಗಗಳಲ್ಲಿ ಠಾಣೆಗಳು ಅಸ್ತಿತ್ವಕ್ಕೆ ಬರುವುದರಿಂದ ಸಾರ್ವಜನಿಕರಿಗೆ ಕಾನೂನು ನೆರವು ತಕ್ಷಣವೇ ದೊರೆಯಲಿದೆ ಮತ್ತು ಅಪರಾಧ ಚಟುವಟಿಕೆಗಳ ಮೇಲೆ ಹದ್ದಿನ ಕಣ್ಣಿಡಲು ಸಾಧ್ಯವಾಗಲಿದೆ," ಎಂದು ಭಂಡಾರಿ ಅವರು ಶ್ಲಾಘಿಸಿದ್ದಾರೆ.