ದ್ವಿತೀಯ ಪಿಯುಸಿ ಪರೀಕ್ಷೆ-2 ನೋಂದಣಿಗೆ ತಾಂತ್ರಿಕ ತೊಂದರೆ: ವಿದ್ಯಾರ್ಥಿಗಳ ಪರದಾಟ
2026ನೇ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆ-2 ನೋಂದಾವಣಿಗೆ ಏ. 9ರಿಂದ ಅವಕಾಶ ಕಲ್ಪಿಸಿದ್ದು, ಏ.17 ಕೊನೆಯ ದಿನವಾಗಿದೆ. ಆದರೆ ಕಳೆದ ಎಂಟು ದಿನಗಳಿಂದಲೂ ತಾಂತ್ರಿಕ ತೊಂದರೆಯಿಂದಾಗಿ ವೆಬ್ ಸೈಟ್ ಗೆ ಲಾಗಿನ್ ಆಗಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ದ್ವಿತೀಯ ಪಿ ಯು ಸಿ ಪರೀಕ್ಷೆ-02 ಕ್ಕೆ ನೋಂದಾಯಿಸಲು ವಿದ್ಯಾರ್ಥಿಗಳು ಪರದಾಡುತ್ತಿದ್ದಾರೆ.
ಕಾರಣಾಂತರಗಳಿಂದ ದ್ವಿತೀಯ ಪಿಯುಸಿ ಮೊದಲ ಪರೀಕ್ಷೆಗೆ ಗೈರುಹಾಜರಾದ ಅಥವಾ ಫಲಿತಾಂಶ ಪೂರ್ಣಗೊಳಿಸದ ವಿದ್ಯಾರ್ಥಿಗಳಿಗಾಗಿ ಪರೀಕ್ಷೆ-2 ನಡೆಸಲು ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿಯು ಪ್ರಕಟಣೆ ಹೊರಡಿಸಿದೆ. ಏಪ್ರಿಲ್ 30 ರಿಂದ ದ್ವಿತೀಯ ಪಿ ಯು ಸಿ ಪರೀಕ್ಷೆ-2 ನಡೆಯಲಿದೆ. ಈ ಪರೀಕ್ಷೆಗೆ ಆನ್ ಲೈನ್ ಮೂಲಕ ನೋಂದಾಯಿಸಲು ಎ. 17ರಂದು ಶುಕ್ರವಾರ ಕೊನೆಯ ದಿನ. ಆದರೆ ಕಳೆದ ಎಂಟು ದಿನಗಳಿಂದ ವೆಬ್ ಸೈಟ್ ತಾಂತ್ರಿಕ ತೊಂದರೆ ಯಿಂದಾಗಿ ಮೊಬೈಲ್ ರಿಜಿಸ್ಟರ್ ಮಾಡಲಾಗದೆ, OTP ಬಾರದೆ ಸೈಬರ್ ಸೆಂಟರ್ ನ ಮೂಲಕ ನೋಂದಾಯಿಸಲು ಸಾಧ್ಯವಾಗುತ್ತಿಲ್ಲ.ಇತ್ತ ಆಪ್ ಲೈನ್ ನಲ್ಲಿ ಕಾಲೆಜಿನಲ್ಲಿ ನೋಂದಾಯಿಸಲು PU EXAM-2 ಪ್ರಾಂಶುಪಾಲರಿಗೆ ಲಾಗಿನ್ ಆಗಲು ಸಾಧ್ಯ ವಾಗದೆ ವಿದ್ಯಾರ್ಥಿಗಳು ಕಂಗಲಾಗಿದ್ದಾರೆ. ಈ ಸಮಸ್ಯೆಯನ್ನು ಬಗೆ ಹರಿಸಬೇಕಾದ ಬೋರ್ಡ್ ಗೊತ್ತಿದ್ದೂ, ಗೊತ್ತಿಲ್ಲದೆಯೋ ಕಣ್ಣು ಮುಚ್ಚಿ ಕುಳಿತಿದೆ. ಇದರಿಂದಾಗಿ ಪುನರಾವರ್ತಿತ ಹಾಗೂ ಫಲಿತಾಂಶ ಉತ್ತಮ ಪಡಿಸಿಕೊಳ್ಳಲು ಬಯಸುವ ವಿದ್ಯಾರ್ಥಿಗಳ ಭವಿಷ್ಯಕ್ಕೆ ಸಮಸ್ಯೆಯಾಗಲಿದೆ. ವಿದ್ಯಾರ್ಥಿಗಳು ಸೈಬರ್ ಸೆಂಟರ್ ನಿಂದ ಕಾಲೇಜಿಗೆ, ಕಾಲೇಜಿನಿಂದ ಸೈಬರ್ ಸೆಂಟರ್ ಗೆ ಅಲೆದಾಡುತ್ತಿದ್ದಾರೆ.