-->
 ಉಡುಪಿ ಡಾ. ಎ.ವಿ. ಬಾಳಿಗಾ ಸ್ಮಾರಕ ಆಸ್ಪತ್ರೆಯಲ್ಲಿ 'ಇಎಸ್‌ಐ' (ESI) ಸೌಲಭ್ಯ ಲಭ್ಯ

ಉಡುಪಿ ಡಾ. ಎ.ವಿ. ಬಾಳಿಗಾ ಸ್ಮಾರಕ ಆಸ್ಪತ್ರೆಯಲ್ಲಿ 'ಇಎಸ್‌ಐ' (ESI) ಸೌಲಭ್ಯ ಲಭ್ಯ


ಕಳೆದ ಎರಡು ದಶಕಗಳಿಗೂ ಹೆಚ್ಚು ಕಾಲದಿಂದ ಉಡುಪಿ ಜಿಲ್ಲೆಯ ಆರೋಗ್ಯ ಕ್ಷೇತ್ರದಲ್ಲಿ, ವಿಶೇಷವಾಗಿ ಮಾನಸಿಕ ಆರೋಗ್ಯ ಮತ್ತು ಪುನರ್ವಸತಿ ವಿಭಾಗದಲ್ಲಿ ಸಕ್ರಿಯವಾಗಿ ಸೇವೆ ಸಲ್ಲಿಸುತ್ತಿರುವ ಉಡುಪಿಯ ದೊಡ್ಡಣಗುಡ್ಡೆಯಲ್ಲಿರುವ ಡಾ. ಎ.ವಿ. ಬಾಳಿಗಾ ಸ್ಮಾರಕ ಆಸ್ಪತ್ರೆ, ಈಗ ತನ್ನ ಸೇವಾವ್ಯಾಪ್ತಿಯನ್ನು ಮತ್ತಷ್ಟು ವಿಸ್ತರಿಸಿದೆ. ಸಮಾಜದ ಶ್ರಮಜೀವಿಗಳಾದ ಕಾರ್ಮಿಕ ವರ್ಗದವರಿಗೆ ಅತ್ಯುತ್ತಮ ವೈದ್ಯಕೀಯ ಸೇವೆ ಒದಗಿಸುವ ನಿಟ್ಟಿನಲ್ಲಿ ಆಸ್ಪತ್ರೆಯಲ್ಲಿ ನೌಕರರ ರಾಜ್ಯ ವಿಮಾ (ESI)ಸೌಲಭ್ಯವನ್ನು ಅಧಿಕೃತವಾಗಿ ಆರಂಭಿಸಲಾಗಿದೆ ಎಂದು ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕ ಡಾ. ಪಿವಿ ಭಂಡಾರಿ ತಿಳಿಸಿದ್ದಾರೆ. 

ಅವರು ಉಡುಪಿಯಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದರು. ಇಎಸ್‌ಐ ನಿಯಮಗಳ ಅನ್ವಯ ಸಮರ್ಪಕ ಸೇವೆ: ನಮ್ಮ ಆಸ್ಪತ್ರೆಯು ಇಎಸ್‌ಐ ನಿಯಮಗಳನ್ನು ಅಕ್ಷರಶಃ ಪಾಲಿಸುವ ಮೂಲಕ, ಅದರ ಮೂಲ ಆಶಯಕ್ಕೆ ಚ್ಯುತಿ ಬಾರದಂತೆ ಅರ್ಹ ಫಲಾನುಭವಿಗಳಿಗೆ ಅತ್ಯಂತ ಪ್ರಾಮಾಣಿಕ ಮತ್ತು ಗುಣಮಟ್ಟದ ಚಿಕಿತ್ಸೆ ನೀಡಲು ಬದ್ಧವಾಗಿದೆ. ವಿಮೆ ಹೊಂದಿರುವ ಪ್ರತಿಯೊಬ್ಬ ಕಾರ್ಮಿಕನಿಗೂ ಗೌರವಯುತ ಮತ್ತು ನಗದು ರಹಿತ ಚಿಕಿತ್ಸೆ ತಲುಪಿಸುವುದು ನಮ್ಮ ಆದ್ಯತೆ ಎಂದು  ತಿಳಿಸಿದರು.

ಆಸ್ಪತ್ರೆಯಲ್ಲಿ ಲಭ್ಯವಿರುವ ಪ್ರಮುಖ ಚಿಕಿತ್ಸಾ ಸೌಲಭ್ಯಗಳು:

ಮನೋವೈದ್ಯಕೀಯ ಚಿಕಿತ್ಸೆ: ತಜ್ಞ ಮನೋವೈದ್ಯರಿಂದ ಎಲ್ಲಾ ತರಹದ ಮಾನಸಿಕ ಕಾಯಿಲೆಗಳಿಗೆ ಚಿಕಿತ್ಸೆ ಮತ್ತು ಆಪ್ತ ಸಮಾಲೋಚನೆ.

ಅಮಲು ಪದಾರ್ಥ ವಿಮುಕ್ತಿ ಚಿಕಿತ್ಸೆ: ಮದ್ಯಪಾನ ಹಾಗೂ ಮಾದಕ ವ್ಯಸನಗಳಿಂದ ಮುಕ್ತರಾಗಲು ವೈಜ್ಞಾನಿಕ ಪುನರ್ವಸತಿ ಸೌಲಭ್ಯ.

ಆಟಿಸಂ ಮತ್ತು ಕಲಿಕಾ ನ್ಯೂನತೆಗಳ ಚಿಕಿತ್ಸೆ: ವಿಶೇಷ ಅಗತ್ಯವಿರುವ ಮಕ್ಕಳಿಗಾಗಿ ಸಹ ಆರೈಕೆ ಮತ್ತು ತರಬೇತಿ.

ವಾಕ್ ಚಿಕಿತ್ಸೆ : ಮಾತು ಮತ್ತು ಸಂವಹನ ಸಮಸ್ಯೆಗಳಿಗೆ ಪರಿಣಿತರಿಂದ ವೈಜ್ಞಾನಿಕ ಚಿಕಿತ್ಸೆ.

ವೃತ್ತಿಪರ ಚಿಕಿತ್ಸೆ: ದೈಹಿಕ ಮತ್ತು ಮಾನಸಿಕ ಸಾಮರ್ಥ್ಯ ವೃದ್ಧಿಗೆ ವಿಶೇಷ ತರಬೇತಿ.

ಕಣ್ಣಿನ ಮತ್ತು ದಂತ ಚಿಕಿತ್ಸೆ: ಸುಧಾರಿತ ತಂತ್ರಜ್ಞಾನದೊಂದಿಗೆ ಸಂಪೂರ್ಣ ದೃಷ್ಟಿ ಮತ್ತು ದಂತ ಆರೋಗ್ಯ ಸೇವೆಗಳು.

ಆಸ್ಪತ್ರೆಯು ಈಗಾಗಲೇ ಸರ್ಕಾರದ ಹಲವಾರು ಮಹತ್ವಾಕಾಂಕ್ಷಿ ಯೋಜನೆಗಳೊಂದಿಗೆ ಯಶಸ್ವಿಯಾಗಿ ಕಾರ್ಯನಿರ್ವಹಿಸುತ್ತಿದ್ದು, ಸರ್ಕಾರದ ವಿವಿಧ ಯೋಜನೆಗಳ ಯಶಸ್ವಿ ಸಹಭಾಗಿತ್ವದ ಆಯುಷ್ಮಾನ್ ಭಾರತ್ - ಆರೋಗ್ಯ ಕರ್ನಾಟಕ ಯೋಜನೆ, ಐ.ಟಿ.ಡಿ.ಪಿ (ITDP) ಹಾಗೂ ಕೊಂಕಣ ರೈಲ್ವೆ ಸಿಬ್ಬಂದಿಗಳ ಆರೋಗ್ಯ ಸೇವೆ, ಕರ್ನಾಟಕ ಸರ್ಕಾರದ ಸಹಭಾಗಿತ್ವದ 'ಮಾನಸಧಾರ' ಯೋಜನೆ, ಮಾನಸಿಕ ಅಸ್ವಸ್ಥರ ಪುನರ್ವಸತಿಗಾಗಿ ಇರುವ ಸರಕಾರದ ಇ.ಸಿ.ಆರ್.ಸಿ (ECRC) ಕೇಂದ್ರದ ನಿರ್ವಹಣೆ -  ಬೀದಿಯಲಿ ಅಲೆದಾಡುವ ಮಾನಸಿಕ ಅಸ್ವಸ್ಥರನ್ನು ರಕ್ಷಿಸಿ ಚಿಕಿತ್ಸೆ ನೀಡಲಾಗಿದೆ. 

ಇಎಸ್‌ಐ ಸೌಲಭ್ಯದ ಪ್ರಯೋಜನ ಪಡೆಯಲು ಇಚ್ಛಿಸುವ ಫಲಾನುಭವಿಗಳು ತಮ್ಮ ಇಎಸ್‌ಐ ಕಾರ್ಡ್ (E-Pehchan Card) ಹಾಗೂ ಅಗತ್ಯ ದಾಖಲೆಗಳೊಂದಿಗೆ ಆಸ್ಪತ್ರೆಯನ್ನು ಸಂಪರ್ಕಿಸಬಹುದು. ರೋಗಿಗಳ ಸಹಾನುಭೂತಿಯ ಆರೈಕೆಗೆ ಆಸ್ಪತ್ರೆ ಸದಾ ಬದ್ಧವಾಗಿದೆ. ಹೆಚ್ಚಿನ ಮಾಹಿತಿಗಾಗಿ ಡಾ. ಎ.ವಿ. ಬಾಳಿಗಾ ಸ್ಮಾರಕ ಆಸ್ಪತ್ರೆ, ದೊಡ್ಡಣಗುಡ್ಡೆ, ಉಡುಪಿ. ದೂರವಾಣಿ: 0820-2535299 / 2535399 ಸಂಪರ್ಕಿಸಬಹುದೆಂದು ತಿಳಿಸಿದ್ದಾರೆ. 

ಸುದ್ದಿಗೋಷ್ಟಿಯಲ್ಲಿ ಮನೋವೈದ್ಯರಾದ ಡಾ. ವಿರೂಪಾಕ್ಷ ದೇವರುಮನೆ, ಡಾ. ದೀಪಕ್ ಮಲ್ಯ, ಡಾ. ಮಾನಸ್ ಇ. ಆರ್ ಹಾಗೂ ಆಸ್ಪತ್ರೆಯ ಆಡಳಿತಾಧಿಕಾರಿ ಸೌಜನ್ಯ ಶೆಟ್ಟಿ ಉಪಸ್ಥಿತರಿದ್ದರು. 

Ads on article

Advertise in articles 1

advertising articles 2

Advertise under the article