ಮಣಿಪಾಲದಲ್ಲಿ ಲಯನ್ಸ್ ವಿಶ್ವ ಪರಿಸರ ರಕ್ಷಣಾ ಸಪ್ತಾಹಕ್ಕೆ ಚಾಲನೆ
Thursday, April 16, 2026
ಉಡುಪಿ: ಪರಿಸರ ಸಂರಕ್ಷಣೆ ನಮ್ಮೆಲ್ಲರ ಜವಾಬ್ದಾರಿಯಾಗಿದೆ. ಈ ನಿಟ್ಟಿನಲ್ಲಿ ಲಯನ್ಸ್ ಕ್ಲಬ್ ವತಿಯಿಂದ ಹಮ್ಮಿಕೊಂಡಿರುವ ಪರಿಸರ ರಕ್ಷಣಾ ಸಪ್ತಾಹ ಕಾರ್ಯಕ್ರಮ ಅಭಿನಂದನೀಯ ಎಂದು ಮಾಹೆ ಮಣಿಪಾಲ ಸಹ ಕುಲಾಧಿಪತಿ, ಡಾ. ಎಚ್ಎಸ್ ಬಲ್ಲಾಳ್ ಹೇಳಿದರು.
ಅವರು ಗುರುವಾರ ಮಾಹೆ ಮಣಿಪಾಲದ ಆವರಣದಲ್ಲಿ ಲಯನ್ಸ್ ಕ್ಲಬ್ ಮಣಿಪಾಲ ವತಿಯಿಂದ ವಿಶ್ವ ಪರಿಸರ ಸಂರಕ್ಷಣಾ ಸಪ್ತಾಹ ಕಾರ್ಯಕ್ರಮದ ಅಂಗವಾಗಿ ಲಯನ್ಸ್ ಜಿಲ್ಲೆ, 317ಸಿ ವತಿಯಿಂದ ಜಿಲ್ಲೆಯ ವಿವಿಧ ಕಡೆಗಳಲ್ಲಿ ಏ. 26ರವರೆಗೆ ನಡೆಯಲಿರುವ ಪರಿಸರ ಸ್ವಚ್ಛತಾ ಅಭಿಯಾನ ಹಾಗೂ ಜಾಗೃತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಸಮಾಜ ಸೇವಾ ರ್ಕಾರ್ಯಗಳಿಗೆ ಅಂತರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿ ಪಡೆದಿರುವ ಲಯನ್ಸ್ ಕ್ಲಬ್ ನ ಸಮಾಜಮುಖಿ ಕಾರ್ಯಕ್ರಮಗಳಿಗೆ ಮಾಹೆ ಮಣಿಪಾಲ ಸಂಪೂರ್ಣ ಸಹಕಾರ ನೀಡಲಿದೆ. ಮುಂದಿನ ಮಳೆಗಾಲದಲ್ಲಿ ಮಾಹೆಯ ಕ್ಯಾಂಪಸ್ನಲ್ಲಿ 1000 ಗಿಡಗಳನ್ನು ನೆಡುವ ಉದ್ದೇಶ ಹೊಂದಲಾಗಿದೆ ಎಂದು ಅವರು ತಿಳಿಸಿದರು.
ಲಯನ್ಸ್ ಗವರ್ನರ್ ಸಪ್ನಾ ಸುರೇಶ್ ಮಾತನಾಡಿ, ವಿವಿಧ ಲಯನ್ಸ್ ಕ್ಲಬ್ಗಳ ಸಹಕಾರದಲ್ಲಿ ಜಿಲ್ಲೆಯಾದ್ಯಂತ ಏ. 26ರ ವರೆಗೆ ಪರಿಸರ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದರು.
ಮಾಹೆ ಕುಲಪತಿ .ಡಾ. ಎಂ ಡಿ ವೆಂಕಟೇಶ್ ಅವರು ಲಯನ್ಸ್ ನ ಕಾರ್ಯಕ್ರಮಗಳ ಬಗ್ಗೆ ಅಭಿನಂದಿಸಿದರು. ಮಣಿಪಾಲ ಲಯನ್ಸ್ ಕ್ಲಬ್ ನ ಪೂರ್ವಾಧ್ಯಕ್ಷ ಡಾ. ಗಣೇಶ್ ಪೈ ಅವರು ಪ್ರಾಸ್ತಾವಿಕವಾಗಿ ಮಾತನಾಡಿದರು.
ಈ ಸಂದರ್ಭದಲ್ಲಿ ಮಾಹೆ ಮಣಿಪಾಲ ಸಹ ಕುಲಪತಿ ( ಆರೋಗ್ಯ ವಿಜ್ಞಾನ )ಡಾ. ಶರತ್ ಕೆ. ರಾವ್, ಕೆಎಂಸಿ ವೈದ್ಯಾಧಿಕಾರಿ ಡಾ. ಅವಿನಾಶ್ ಶೆಟ್ಟಿ, COO ಆನಂದ್ ವೇಣುಗೋಪಾಲ್, ಲಯನ್ಸ್ ಉಪ ಗವರ್ನರ್ ಹರಿಪ್ರಸಾದ್ ರೈ, ಮಣಿಪಾಲ್ ಲಯನ್ಸ್ ಕ್ಲಬ್ ಅಧ್ಯಕ್ಷ ನಿಶಾಂತ್ ಭಟ್, ಲಯನ್ಸ್ ಜಿಲ್ಲಾ ಸಂಪುಟ ಸದಸ್ಯರಾದ ಸರಿತಾ ಸಂತೋಷ್, ನಿರಂಜನ್ ಕುಮಾರ್ , ರಂಜಿತಾ ಶೇಟ್ ಮೊದಲಾದವರು ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಲಯನ್ಸ್ ಕ್ಲಬ್ ವತಿಯಿಂದ ಪ್ಲಾಸ್ಟಿಕ್ ತ್ಯಾಜ್ಯಗಳನ್ನು ಸಂಗ್ರಹಿಸಲು ಬಾಟಲ್ ಆಕಾರದ 6 ಡಸ್ಟ್ ಬಿನ್ ಹಾಗೂ ಇ ವೆಸ್ಟ್ ಸಂಗ್ರಹಿಸಲು 6 ಡಸ್ಟ್ ಬಿನ್ ಗಳನ್ನು ಕೊಡುಗೆಯಾಗಿ ನೀಡಲಾಯಿತು.
