ಪುತ್ತೂರಿನಲ್ಲಿ ಎಲ್‌ಪಿಜಿ ಬೆಲೆ ದಿಢೀರ್ ಏರಿಕೆ ವಿರುದ್ಧ ರಿಕ್ಷಾ ಚಾಲಕರ ಧರಣಿ
Monday, April 06, 2026
ಪುತ್ತೂರಿನಲ್ಲಿ ಎಲ್.ಪಿ.ಜಿ ಬೆಲೆಯಲ್ಲಿ ಏಕಾಏಕಿ ಭಾರಿ ಏರಿಕೆ ಮಾಡಿರುವುದನ್ನು ವಿರೋಧಿಸಿ ಆಟೋ ರಿಕ್ಷಾ ಚಾಲಕರು ಸೋಮವಾರ ಪ್ರತಿಭಟನೆ ನಡೆಸಿದರು. ಹೀಗಾಗಿ ಬಂಕ್ ಮಾಲೀಕರು ಅನಿವಾರ್ಯವಾಗಿ ವ್ಯಾಪಾರ ಸ್ಥಗಿತಗೊಳಿಸಿ ಬಂಕ್ ಬಂದ್ ಮಾಡಿದ್ದಾರೆ.
ಪುತ್ತೂರಿನ ಮಹಿಳಾ ಪೊಲೀಸ್ ಠಾಣೆಯ ಮುಂಭಾಗವಿರುವ ಎಲ್.ಪಿ.ಜಿ ಬಂಕ್‌ನಲ್ಲಿ ಪ್ರತಿ ಕೆ.ಜಿ ಅನಿಲಕ್ಕೆ 120 ರೂಪಾಯಿ ನಿಗದಿಪಡಿಸಲಾಗಿತ್ತು. ನಗರದ ಇತರ ಕೆಲವು ಬಂಕ್‌ಗಳಲ್ಲಿ 95 ರೂಪಾಯಿಗೆ ಎಲ್.ಪಿ.ಜಿ ಸಿಗುತ್ತಿದ್ದರೆ, ಇಲ್ಲಿ ಮಾತ್ರ 25 ರೂಪಾಯಿ ಅಧಿಕ ವಸೂಲಿ ಮಾಡಲಾಗುತ್ತಿದೆ ಎಂದು ಚಾಲಕರು ಆರೋಪಿಸಿದ್ದಾರೆ. ಏಕಾಏಕಿ ಬೆಲೆ ಏರಿಕೆಯಿಂದ ಆಟೋ ಚಾಲಕರ ದೈನಂದಿನ ಜೀವನಕ್ಕೆ ತೊಂದರೆಯಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿ ಬಂಕ್ ಮುಂಭಾಗ ಪ್ರತಿಭಟನೆ ನಡೆಸಲಾಯಿತು. ಚಾಲಕರ ಪ್ರತಿಭಟನೆಯಿಂದಾಗಿ ಬಂಕ್ ಮಾಲೀಕರು “ಕಡಿಮೆ ಬೆಲೆಗೆ ಅನಿಲ ವಿತರಿಸಲು ಸಾಧ್ಯವಿಲ್ಲ” ಎಂದು ಹೇಳಿ ಬಂಕ್ ಅನ್ನು ಸಂಪೂರ್ಣವಾಗಿ ಬಂದ್ ಮಾಡಿದ್ದಾರೆ. ಪುತ್ತೂರಿನಲ್ಲಿರುವ ಒಟ್ಟು 7 ಬಂಕ್‌ಗಳಲ್ಲಿ ಕೆಲವೇ ಕೆಲವು ಕಡೆ ಮಾತ್ರ ಅನಿಲ ಲಭ್ಯವಿದ್ದು, ಈಗ ಈ ಬಂಕ್ ಕೂಡ ಬಂದ್ ಆಗಿರುವುದರಿಂದ ಆಟೋ ಚಾಲಕರು ಮತ್ತಷ್ಟು ಸಂಕಷ್ಟಕ್ಕೆ ಸಿಲುಕಿದ್ದಾರೆ.
