-->
 10ನೇ ತರಗತಿಯಲ್ಲಿ ಫೇಲ್ , 47ನೇ ವಯಸ್ಸಿನಲ್ಲಿ ಲಾಯರ್: ಕೇರಳ ಮಹಿಳೆಯ ಸಾಹಸಗಾಥೆ

10ನೇ ತರಗತಿಯಲ್ಲಿ ಫೇಲ್ , 47ನೇ ವಯಸ್ಸಿನಲ್ಲಿ ಲಾಯರ್: ಕೇರಳ ಮಹಿಳೆಯ ಸಾಹಸಗಾಥೆ


ಕೇರಳದ ತ್ರಿಶ್ಶೂರು ಮೂಲದ 46-47 ವರ್ಷದ ಗೃಹಿಣಿ ಎಂ. ಅಂಬಿಕಾ ಇಂದು ಸಾವಿರಾರು ಮಹಿಳೆಯರಿಗೆ ಪ್ರೇರಣೆಯಾಗಿದ್ದಾರೆ. ಒಮ್ಮೆ 10ನೇ ತರಗತಿಯಲ್ಲಿ ಅನುತ್ತೀರ್ಣರಾಗಿದ್ದ ಅವರು, ಈಗ ಅಧಿಕೃತವಾಗಿ ವಕೀಲರಾಗಿ ನೋಂದಾಯಿಸಿಕೊಂಡಿದ್ದಾರೆ. ಜೀವನದಲ್ಲಿ ಎಷ್ಟೇ ಅಡೆತಡೆಗಳು ಬಂದರೂ, ದೃಢಸಂಕಲ್ಪ ಇದ್ದರೆ ಯಶಸ್ಸು ಸಾಧ್ಯ ಎನ್ನುವುದನ್ನು ಅವರು ಸಾಬೀತುಪಡಿಸಿದ್ದಾರೆ.


ಅಂಬಿಕಾ ಅವರ ಬದುಕು ಸುಲಭವಾಗಿರಲಿಲ್ಲ. ಬಾಲ್ಯದಲ್ಲಿಯೇ ಪೋಷಕರನ್ನು ಕಳೆದುಕೊಂಡ ಅವರು, ಆರ್ಥಿಕ ಹಾಗೂ ಕುಟುಂಬದ ಸಂಕಷ್ಟಗಳ ನಡುವೆ ಶಿಕ್ಷಣ ಮುಂದುವರಿಸಲು ಸಾಧ್ಯವಾಗಲಿಲ್ಲ. 1994ರಲ್ಲಿ 10ನೇ ತರಗತಿಯಲ್ಲಿ ಅನುತ್ತೀರ್ಣರಾದ ನಂತರ, ಅವರ ಶಿಕ್ಷಣ ಅರ್ಧದಲ್ಲೇ ನಿಂತುಹೋಯಿತು.

18ನೇ ವಯಸ್ಸಿನಲ್ಲಿ ವಿವಾಹವಾದ ಅಂಬಿಕಾ, ಕುಟುಂಬದ ಜವಾಬ್ದಾರಿಗಳಲ್ಲಿ ತೊಡಗಿಕೊಂಡರು. ಸಂಸಾರ, ಮಕ್ಕಳು, ಮನೆಯ ಕೆಲಸ — ಇವೆಲ್ಲದರ ನಡುವೆ ತಮ್ಮ ಕನಸುಗಳನ್ನು ಮನದಾಳದಲ್ಲಿ ಬಚ್ಚಿಟ್ಟುಕೊಂಡಿದ್ದರು. ಆದರೆ, ಅಂಬಿಕಾ ಕನಸುಗಳಿಗೆ ಪೂರ್ಣ ವಿರಾಮ ಹಾಕಲಿಲ್ಲ. ಹಲವು ವರ್ಷಗಳ ನಂತರ, 2009ರಲ್ಲಿ ಕೇರಳ ಸಾಕ್ಷರತಾ ಮಿಷನ್ ಮೂಲಕ ಮತ್ತೆ ಶಿಕ್ಷಣದತ್ತ ಹೆಜ್ಜೆ ಇಟ್ಟರು.

ಮೊದಲು 10ನೇ ತರಗತಿ ಪೂರ್ಣಗೊಳಿಸಿದರು. ನಂತರ 2018ರಲ್ಲಿ 12ನೇ ತರಗತಿಯನ್ನೂ ಯಶಸ್ವಿಯಾಗಿ ಮುಗಿಸಿದರು. “ನಾನು ಕೂಡ ಓದಬಹುದು, ಸಾಧಿಸಬಹುದು” ಎಂಬ ಆತ್ಮವಿಶ್ವಾಸ ಅವರೊಳಗೆ ಮತ್ತಷ್ಟು ಬಲವಾಯಿತು.

40ನೇ ವಯಸ್ಸಿನಲ್ಲಿ ಕಾನೂನು ಪದವಿಗೆ ಪ್ರವೇಶ

ಬಹುತೇಕ ಜನರು ಈ ವಯಸ್ಸಿನಲ್ಲಿ ಕನಸುಗಳನ್ನು ಮರೆತುಬಿಡುವ ಸಮಯದಲ್ಲಿ, ಅಂಬಿಕಾ ಹೊಸ ಕನಸನ್ನು ಕಟ್ಟಿಕೊಂಡರು..  ವಕೀಲೆಯಾಗಬೇಕು ಎಂಬ ಕನಸು. ಅದರಂತೆ, ತಮ್ಮ 40ನೇ ವಯಸ್ಸಿನಲ್ಲಿ  ಅಲ್ ಅಮೀನ್ ಇಂಜಿನಿಯರಿಂಗ್ ಕಾಲೇಜಿನಲ್ಲಿ 5 ವರ್ಷದ ಎಲ್.ಎಲ್.ಬಿ ಪದವಿಗೆ ಪ್ರವೇಶ ಪಡೆದರು.

ಪ್ರತಿದಿನ ರೈಲಿನಲ್ಲಿ ಪ್ರಯಾಣಿಸಿ ಕಾಲೇಜಿಗೆ ತೆರಳುವುದು, ಮನೆಗೆ ಬಂದು ಕುಟುಂಬದ ಜವಾಬ್ದಾರಿಗಳನ್ನು ನಿರ್ವಹಿಸುವುದು-  ಹೀಗೆ ಈ ಎಲ್ಲದಕ್ಕೂ ಮಧ್ಯೆ ಅವರು ಓದನ್ನು ಮುಂದುವರಿಸಿದರು. ಶ್ರಮಕ್ಕೆ ಫಲ ಸಿಕ್ಕಿತು. ಓದಿನಲ್ಲಿ ಶೇಕಡಾ 60 ರಷ್ಟು ಅಂಕಗಳನ್ನು ಪಡೆದು ಕಾನೂನು ಪದವಿಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದರು.

ಜೂನ್ 1ರಂದು ಅಂಬಿಕಾ ಅವರು ಬಾರ್ ಕೌನ್ಸಿಲ್ ಆಫ್ ಕೇರಳ ಇಲ್ಲಿ ಅಧಿಕೃತವಾಗಿ ವಕೀಲರಾಗಿ ನೋಂದಾಯಿಸಿಕೊಂಡರು. ಒಮ್ಮೆ ಶಿಕ್ಷಣದಿಂದ ದೂರವಾದ ಗೃಹಿಣಿ, ಇಂದು ನ್ಯಾಯಾಲಯದ ಕದ ತಟ್ಟುವ ವಕೀಲೆಯಾಗಿರುವುದು ಅನೇಕ ಮಹಿಳೆಯರಿಗೆ ಸ್ಪೂರ್ತಿ. “ಕನಸು ಕಾಣಲು ವಯಸ್ಸಿನ ಮಿತಿ ಇಲ್ಲ. ಪರಿಸ್ಥಿತಿಗಳು ನಿಮ್ಮನ್ನು ತಡೆಯಬಹುದು, ಆದರೆ ನಿಮ್ಮ ಛಲವನ್ನು ಸೋಲಿಸಲು ಸಾಧ್ಯವಿಲ್ಲ.” ಎನ್ನುವ ಸಂದೇಶವನ್ನು ಅಂಬಿಕಾ ಸಾರಿದ್ದಾರೆ. 

ಅಂಬಿಕಾ ಅವರ ಸಾಧನೆ, ವಿಶೇಷವಾಗಿ ಶಿಕ್ಷಣ ಮಧ್ಯದಲ್ಲೇ ನಿಂತುಹೋದ ಮಹಿಳೆಯರಿಗೆ ಹೊಸ ಪ್ರೇರಣೆಯಾಗಿದೆ.  

Ads on article

Advertise in articles 1

advertising articles 2

Advertise under the article