ಜೂ.10: ಕೊಲ್ಲೂರು ಮೂಕಾಂಬಿಕಾ ದೇವಸ್ಥಾನದಲ್ಲಿ “ವರಾಹ ಮಿಹಿರನ್” ಕಥಕ್ಕಳಿ ಪ್ರದರ್ಶನ
ಭಾರತದ ಖಗೋಳಶಾಸ್ತ್ರ ಮತ್ತು ಜ್ಯೋತಿಷ್ಯದ ಮಹಾನ್ ಪಂಡಿತರಾದ ಆಚಾರ್ಯ ವರಾಹಮಿಹಿರರ ಅದ್ಭುತ ಜೀವನಗಾಥೆಯನ್ನು ಆಧರಿಸಿದ ಮೆಚ್ಚುಗೆ ಪಡೆದ ಕಥಕ್ಕಳಿ ಪ್ರದರ್ಶನ “ವರಾಹ ಮಿಹಿರನ್” ವು ಜೂನ್ 10ರಂದು ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನದ ಕ್ಷೇತ್ರದಲ್ಲಿರುವ ಸ್ವರ್ಣಮುಖಿ ರಂಗ ಮಂದಿರದಲ್ಲಿ ನಡೆಯಲಿದೆ ಎಂದು ಚೇತಲ್ಲೂರು ಜ್ಯೋತಿಷ ಕಲಾಲಯದ ಜ್ಯೋತಿಷಿ ವಿಜಯಕುಮಾರ್ ಗುಪ್ತನ್ ತಿಳಿಸಿದ್ದಾರೆ.
ಅವರು ಉಡುಪಿಯಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದರು.
ಮಧ್ಯಾಹ್ನ 3 ಗಂಟೆಯಿಂದ ಸಂಜೆ 6 ಗಂಟೆಯವರೆಗೆ ನಡೆಯಲಿರುವ ಈ ಭವ್ಯ ಪ್ರದರ್ಶನದಲ್ಲಿ ಕೇರಳದ ಖ್ಯಾತ ಹಾಗೂ ಸಾಧನೆಗೈದ ಕಥಕ್ಕಳಿ ಕಲಾವಿದರು ಭಾಗವಹಿಸಲಿದ್ದು, ಪ್ರೇಕ್ಷಕರಿಗೆ ಅಪೂರ್ವ ದೃಶ್ಯಾನಂದವನ್ನು ನೀಡಲಿದ್ದಾರೆ.
“ವರಾಹ ಮಿಹಿರನ್” ಕಥಕ್ಕಳಿಯ ಮೂಲ ಕಥಾವಸ್ತು ಉಜ್ಜಯಿನಿ ರಾಜಮನೆತನದ ಮಹತ್ವದ ಐತಿಹಾಸಿಕ ಘಟನೆಯನ್ನು ಆಧರಿಸಿದೆ. ಚಕ್ರವರ್ತಿ ವಿಕ್ರಮಾದಿತ್ಯನ ಪುತ್ರನ ಜಾತಕ ಲೆಕ್ಕಾಚಾರ ಮತ್ತು ಅದಕ್ಕೆ ಸಂಬಂಧಿಸಿದ ಆಚಾರ್ಯ ವರಾಹಮಿಹಿರರ ಅದ್ಭುತ ಜ್ಯೋತಿಷ್ಯ ಭವಿಷ್ಯವಾಣಿಯನ್ನು ಈ ನಾಟಕ ಮನೋಜ್ಞವಾಗಿ ಅನಾವರಣಗೊಳಿಸುತ್ತದೆ. ಈ ಕೃತಿಗೆ ಶ್ರೀ ವಾಮನನ್ ನಂಬೂದಿರಿ ಅವರು ಚಿತ್ರಕಥೆ ಬರೆದಿದ್ದು, ಕಲಾಮಂಡಲಂ ಕೇಶವನ್ ನಂಬೂದಿರಿ ಅವರು ನಿರ್ದೇಶನ ಮಾಡಿದ್ದಾರೆ. ಸಮಗ್ರ ಪರಿಕಲ್ಪನೆ ಮತ್ತು ನಿರ್ಮಾಣವನ್ನು ಚೇತಲ್ಲೂರು ಜ್ಯೋತಿಷ ಕಲಾಲಯದ ಜ್ಯೋತಿಷಿ ವಿಜಯಕುಮಾರ್ ಗುಪ್ತನ್ ಅವರು ನಿರ್ವಹಿಸಿದ್ದಾರೆ.
ಹೋರಾ ಶಾಸ್ತ್ರದ ಮಹತ್ವದ ಗ್ರಂಥವಾದ ಬೃಹತ್ ಜಾತಕದ ಕತೃವಾಗಿ ಪ್ರಸಿದ್ಧರಾದ ಆಚಾರ್ಯ ವರಾಹಮಿಹಿರರ ಜ್ಞಾನ, ದೃಷ್ಟಿ ಮತ್ತು ವೈಜ್ಞಾನಿಕ ಚಿಂತನೆಗಳನ್ನು ಕಥಕ್ಕಳಿಯ ಭಾವಪ್ರಪಂಚದ ಮೂಲಕ ಜೀವಂತಗೊಳಿಸುವ ಪ್ರಯತ್ನ ಇದಾಗಿದೆ.
ಈ ಕೃತಿಗೆ ಶ್ರೀ ವಾಮನನ್ ನಂಬೂದಿರಿ ಅವರು ಚಿತ್ರಕಥೆ ಬರೆದಿದ್ದು, ಕಲಾಮಂಡಲಂ ಕೇಶವನ್ ನಂಬೂದಿರಿ ಅವರು ನಿರ್ದೇಶನ ಮಾಡಿದ್ದಾರೆ. ಸಮಗ್ರ ಪರಿಕಲ್ಪನೆ ಮತ್ತು ನಿರ್ಮಾಣವನ್ನು ಚೇತಲ್ಲೂರು ಜ್ಯೋತಿಷ ಕಲಾಲಯದ ಜ್ಯೋತಿಷಿ ವಿಜಯಕುಮಾರ್ ಗುಪ್ತನ್ ಅವರು ನಿರ್ವಹಿಸಿದ್ದಾರೆ.ಈ ಪ್ರದರ್ಶನವು “ವರಾಹ ಮಿಹಿರನ್” ಕಾರ್ಯಕ್ರಮದ 7ನೇ ಯಶಸ್ವಿ ಪ್ರದರ್ಶನವಾಗಿರುವುದು ವಿಶೇಷ ಮಹತ್ವ ಪಡೆದುಕೊಂಡಿದೆ ಎಂದರು.
ಕಾರ್ಯಕ್ರಮಕ್ಕೂ ಮುನ್ನ ದೇವಾಲಯದ ಆವರಣದಲ್ಲಿ ಕೇರಳದ ಗಣ್ಯ ಕಲಾವಿದರು ಹಾಗೂ ಸೃಜನಶೀಲ ತಂಡದ ಸದಸ್ಯರನ್ನು ಸನ್ಮಾನಿಸುವ ಗೌರವ ಸಮಾರಂಭವೂ ನಡೆಯಲಿದೆ ಎಂದರು. ಸುದ್ದಿಗೋಷ್ಟಿಯಲ್ಲಿ ಜಯಕೃಷ್ಣನ್ ವಾರಿಯರ್, ತೇಜಸ್ ನಂಬೂದರಿ ಹಾಗೂ ಸಮಾಜಸೇವಕ ಅರವಿಂದ ಉಪಸ್ಥಿತರಿದ್ದರು.
