-->
ಮೇ 31: ಗಿಳಿಯಾರು ಕುಶಲ ಹೆಗ್ಡೆ ಜನ್ಮಶತಮಾನೋತ್ಸವ

ಮೇ 31: ಗಿಳಿಯಾರು ಕುಶಲ ಹೆಗ್ಡೆ ಜನ್ಮಶತಮಾನೋತ್ಸವ


ಖ್ಯಾತ ವಕೀಲರಾಗಿದ್ದು, ಧಾರ್ಮಿಕ, ಶೈಕ್ಷಣಿಕ, ಸಹಕಾರ, ಸಾಮಾಜಿಕ ಸೇವಾ ಕ್ಷೇತ್ರ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ತನ್ನನ್ನು ತೊಡಗಿಸಿಕೊಂಡು ಜನಪ್ರಿಯರಾಗಿದ್ದ ದಿವಂಗತ ಗಿಳಿಯಾರು ಕುಶಲ ಹೆಗ್ಡೆಯವರ ಜನ್ಮಶತಮಾನೋತ್ಸವ ಮೇ 31 ರಂದು ಕೋಟೇಶ್ವರದ ಸಹನಾ ಸಭಾಂಗಣದಲ್ಲಿ ನಡೆಯಲಿದೆ. 

ಗಿಳಿಯಾರು ಕುಶಲ ಹೆಗ್ಡೆ ಮೆಮೋರಿಯಲ್ ಚಾರಿಟೆಬಲ್ ಟ್ರಸ್ಟ್ (ರಿ.) ಆಶ್ರಯದಲ್ಲಿ ನಡೆಯಲಿರುವ ಸಮಾರಂಭ ಮಧ್ಯಾಹ್ನ 3 ಗಂಟೆಗೆ ಆರಂಭಗೊಳ್ಳಲಿದ್ದು, ಸಾಧಕರಿಗೆ ಸನ್ಮಾನ, ರ‍್ಯಾಂಕ್ ವಿಜೇತರಿಗೆ ಗೌರವ, ಅರ್ಹ ವಿದ್ಯಾರ್ಥಿಗಳಿಗೆ ಸಹಾಯಧನ ವಿತರಣೆಯೊಂದಿಗೆ ಅರ್ಥಪೂರ್ಣವಾಗಿ ನಡೆಯಲಿದೆ. ಸಂಜೆ 6ಕ್ಕೆ ಕುಂದಾಪುರದಲ್ಲಿ ಮೊದಲ ಪ್ರಯೋಗ "ಕಾಳಿಂಗ- ಕಾಳಿಂಗ " ಪ್ರದರ್ಶನಗೊಳ್ಳಲಿದೆ.

ಸಮಾರಂಭವನ್ನು ಕರ್ನಾಟಕದ ಮಾಜಿ ಮುಖ್ಯಮಂತ್ರಿ ಎಂ. ವೀರಪ್ಪ ಮೊಯಿಲಿ ಉದ್ಘಾಟಿಸಲಿದ್ದಾರೆ. ಮಾಜಿ ಸಚಿವ ಬಿ. ರಮಾನಾಥ ರೈ ಅಧ್ಯಕ್ಷತೆ ವಹಿಸಲಿದ್ದಾರೆ. ಸಂಸದ ಕೋಟ ಶ್ರೀನಿವಾಸ ಪೂಜಾರಿ ಸಾಧಕರನ್ನು ಸನ್ಮಾನಿಸಲಿದ್ದಾರೆ . ಶಾಸಕ ಕಿರಣ್ ಕುಮಾರ್ ಕೊಡ್ಗಿ ಕಲಾವಿದರನ್ನು ಗೌರವಿಸಲಿದ್ದಾರೆ. ಬೈಂದೂರು ಶಾಸಕ ಗುರುರಾಜ ಗಂಟಿಹೊಳೆ ವಿದ್ಯಾರ್ಥಿಗಳಿಗೆ ಸಹಾಯಧನ ವಿತರಿಸುವರು. ಮಾಜಿ ಸಂಸದ ಕೆ. ಜಯಪ್ರಕಾಶ ಹೆಗ್ಡೆ ಅಭಿನಂದನಾ ನುಡಿ ಆಡಲಿದ್ದಾರೆ.

 ಕಾನ್ಫಿಡೆಂಟ್ ಡೆಂಟಲ್ ಇಕ್ವಿಪ್‌ಮೆಂಟ್ ಪ್ರೈವೇಟ್ . ಲಿ. ಬೆಂಗಳೂರು ಇದರ ಆಡಳಿತ ನಿರ್ದೇಶಕ, ಡಾ| ಸುಭಾಶ್ಚಂದ್ರ ಶೆಟ್ಟಿ ಶಾಲೆಗೆ ನೆರವು ಹಸ್ತಾಂತರಿಸಲಿದ್ದಾರೆ. ಹಿರಿಯ ವಕೀಲ ಎ.ಎಸ್.ಎನ್.ಹೆಬ್ಬಾರ್ "ಕುಶಲೋಪರಿ" ನಡೆಸಲಿದ್ದಾರೆ. ಕೋಟ ಗೀತಾನಂದ ಫೌಂಡೇಶನ್ ಪ್ರವರ್ತಕರಾದ ಆನಂದ ಸಿ. ಕುಂದರ್ ವೈದ್ಯಕೀಯ ನೆರವು ಹಸ್ತಾಂತರ ಮಾಡುವರು.

ಈ ಸಮಾರಂಭದಲ್ಲಿ ವಿಶೇಷ ಸಾಧನೆ ಮಾಡಿದ ಹಿರಿಯರನ್ನು, ಸಂಘ ಸಂಸ್ಥೆಗಳನ್ನು ಸನ್ಮಾನಿಸಿ  ಗೌರವಿಸುವ ಕಾರ್ಯಕ್ರಮ ಏರ್ಪಡಿಸಲಾಗಿದೆ. ವಕೀಲ ವೃತ್ತಿಯಲ್ಲಿ 50 ವರ್ಷ ಪೂರೈಸಿ ವೃತ್ತಿ ಸೇವೆಯಲ್ಲಿ ಮೆಚ್ಚುಗೆ ಪಡೆದ ಮಟ್ಟಿ ಮಾಧವ ರಾವ್, ಶಿಕ್ಷಕರಾಗಿ ಸಾಲಿಗ್ರಾಮ ಮಕ್ಕಳ ಮೇಳ (ರಿ.) ಕೋಟ ಸ್ಥಾಪಿಸಿದ ಎಚ್. ಶ್ರೀಧರ ಹಂದೆ, ಕ್ರೀಡಾಪಟುವಾಗಿ ಕರ್ನಾಟಕ ರಾಜ್ಯ ಪ್ರತಿನಿಧಿಸಿದ ಎನ್. ವಸಂತ ರಾವ್, ರಂಗ ಕಲಾವಿದರಾಗಿ, ನಿರ್ದೇಶಕರಾಗಿ ಕ್ರಿಯಾಶೀಲರಾಗಿರುವ ಸತೀಶ ಪೈ (ಕುಳ್ಳಪ್ಪು), ತಮ್ಮ ನೃತ್ಯ ಪ್ರತಿಭೆ ಹಾಗೂ ತರಬೇತಿ ಮೂಲಕ ಭರತನಾಟ್ಯ ಜನಪ್ರಿಯರಾಗಿಸಿದ ವಿದುಷಿ ಭಾಗೀರಥಿ ಎಂ. ರಾವ್, ಕುಂದಾಪ್ರ ಕನ್ನಡವನ್ನು ಜನಪ್ರಿಯಗೊಳಿಸಿದ ಚೇತನ್ ನೈಲಾಡಿ, ನಾಟಕ ರಂಗದಲ್ಲಿ ನಿರಂತರ ಐದು ದಶಕಗಳಿಂದ ಸಾಧನೆ ಮಾಡುತ್ತಿರುವ ಲಾವಣ್ಯ (ರಿ.) ಬೈಂದೂರು, ಶಾಸ್ತ್ರೀಯ ಸಂಗೀತದಲ್ಲಿ ಮೂರು ದಶಕಗಳ ಕಾಲ ಯಶಸ್ವಿ ಪಯಣ ನಡೆಸುತ್ತಿರುವ ಸಂಗೀತ ಭಾರತಿ ಟ್ರಸ್ಟ್ (ರಿ.) ಕುಂದಾಪುರ, ಕುಂದಾಪುರದಲ್ಲಿ ಪ್ರಥಮ ಸಮುದಾಯ ಬಾನುಲಿ ಕೇಂದ್ರ ಭಂಡಾರ್‌ಕರ‍್ಸ್ ಕಾಲೇಜಿನ ರೇಡಿಯೋ ಕುಂದಾಪ್ರ 89.6 ಎಫ್. ಎಂ., ಕುಂದಾಪ್ರ ನೆಲದ ಜನಪದ ಸಂಸ್ಕೃತಿ ಉಳಿಸಲು ಶ್ರಮಿಸುತ್ತಿರುವ ಶ್ರೀ ಗುರುಮಾರುತಿ ಹೌಂದೇರಾಯನ ಜನಪದ ತಂಡ (ರಿ.) ಪಾರಂಪಳ್ಳಿ-ಸಾಲಿಗ್ರಾಮ ಇವರ ಸನ್ಮಾನ ನಡೆಯಲಿದೆ.

ಸಭಾ ಕಾರ್ಯಕ್ರಮದ ನಂತರ ವಿಶೇಷ ಕಾರ್ಯಕ್ರಮ ಕುಂದಾಪುರದಲ್ಲಿ ಮೊದಲ ಪ್ರಯೋಗ "ಕಾಳಿಂಗ-ಕಾಳಿಂಗ " ಪ್ರದರ್ಶನಗೊಳ್ಳಲಿದೆ. ಯಕ್ಷಗಾನದ ಯುಗ ಪ್ರವರ್ತಕ, ಜಿ. ಆರ್. ಕಾಳಿಂಗ ನಾವಡ ಹಾಗೂ ಸುಗಮ ಸಂಗೀತದ ಪಿತಾಮಹ, ಪಿ. ಕಾಳಿಂಗ ರಾವ್ ಇವರ ಪದ ಪದ್ಯಗಳ ಅಪೂರ್ವ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ. ಖ್ಯಾತ ಭಾಗವತರು, ಗಾಯಕರು, ಕಲಾವಿದರು ಪಾಲ್ಗೊಳ್ಳಲಿದ್ದಾರೆ.

ಗಿಳಿಯಾರು ಕುಶಲ ಹೆಗ್ಡೆ ಜನ್ಮಶತಮಾನೋತ್ಸವಕ್ಕೆ ಸರ್ವ ಸಮಾಜ ಬಾಂಧವರನ್ನು ಗಿಳಿಯಾರು ಕುಶಲ ಹೆಗ್ಡೆ ಸ್ಮಾರಕ ದತ್ತಿ ಸಂಸ್ಥೆ ಸ್ವಾಗತಿಸಿದೆ.

"ಕಾಳಿಂಗ-ಕಾಳಿಂಗ " ಎನ್ನುವ ಮಧುರಾನುಭೂತಿ

ಪ್ರಸಿದ್ಧ ಹಾಡುಗಾರ, ಸುಗಮ ಸಂಗೀತದ ಪಿತಾಮಹ ಪಾಂಡೇಶ್ವರ ಕಾಳಿಂಗ ರಾವ್ ಬಹಳ ಖ್ಯಾತರಾದವರು. ಆಕಾಶವಾಣಿಯಲ್ಲಿ ನಿರಂತರ ಅವರ ಹಾಡುಗಳು ಪ್ರಸಾರವಾಗುತ್ತಿದ್ದವು. ಕಾಳಿಂಗ ನಾವಡರು ಕರಾವಳಿಯ ಇನ್ನೊಂದು ಅದ್ಬುತ ಪ್ರತಿಭೆ. ಯಕ್ಷಗಾನಕ್ಕೆ ಹೊಸತನ ನೀಡಿದ ಯುಗ ಪ್ರವರ್ತಕ. ಈ ಇಬ್ಬರ ಭಾವಗೀತೆ ಹಾಗೂ ಭಾಗವತಿಕೆ ಎರಡನ್ನು ಸೇರಿಸಿ ಒಂದು ಕಾರ್ಯಕ್ರಮ ಮಾಡಿದರೆ ಹೇಗೆ ಎನ್ನುವ ಚಿಂತನೆ ಡಾ| ದೀಪಕ್ ಶೆಟ್ಟಿ ಬಾರ್ಕೂರು ಹಾಗೂ ರಾಘವೇಂದ್ರ ಕಾಂಚನ್ ಮತ್ತು ಸ್ನೇಹಿತರಲ್ಲಿ ಮೂಡಿತು. ಅಂದು ಅತ್ಯುತ್ತಮ ತಂಡವನ್ನು ರೂಪಿಸಿ ಕಾರ್ಯಕ್ರಮ ಸಂಯೋಜಿಸಿಯೇ ಬಿಟ್ಟರು. ಬೆಂಗಳೂರಲ್ಲಿ "ಕಾಳಿಂಗ-ಕಾಳಿAಗ" ಬಹಳ ಪ್ರಸಿದ್ಧಿಯಾಯಿತು. ಈ ಕಾರ್ಯಕ್ರಮವನ್ನು ಕುಂದಾಪುರದಲ್ಲಿ ಪ್ರದರ್ಶನ ಮಾಡಬೇಕು ಎಂಬ ಆಶಯದಂತೆ ಮೇ 31 ರಂದು ಗಿಳಿಯಾರು ಕುಶಲ ಹೆಗ್ಡೆಯವರ ಜನ್ಮಶತಮಾನೋತ್ಸವ ಸಮಾರಂಭದಲ್ಲಿ "ಕಾಳಿಂಗ-ಕಾಳಿAಗ" ಕಾರ್ಯಕ್ರಮ ಎಲ್ಲರಿಗೆ ಆಕರ್ಷಣೆಯಾಗಲಿದೆ. 

ಡಾ| ದೀಪಕ್ ಶೆಟ್ಟಿ ಬಾರ್ಕೂರು ಕಾಳಿಂಗ ನಾವಡರ ಬಗ್ಗೆ ನಿರೂಪಣೆ ಮಾಡಲಿದ್ದು, ಸುರೇಶ ಶೆಟ್ಟಿ ಎಸ್., ರಾಘವೇಂದ್ರ ಆಚಾರ್ಯ ಜನ್ಸಾಲೆ, ಪ್ರಸಾದ್ ಕುಮಾರ್ ಮೊಗೆಬೆಟ್ಟು ಭಾಗವತರಾಗಿ ಸಹಕರಿಸಲಿದ್ದಾರೆ. 

ಚಂಡೆಯಲ್ಲಿ ಸುಜನ್ ಹಾಲಾಡಿ, ಮದ್ದಳೆಯಲ್ಲಿ ಸುನಿಲ್ ಭಂಡಾರಿ ಕಡತೋಕ ಸಹಕರಿಸಲಿದ್ದಾರೆ. 

ರಾಘವೇಂದ್ರ ಕಾಂಚನ್, ಪಿ. ಕಾಳಿಂಗ ರಾವ್ ಬಗ್ಗೆ ನಿರೂಪಣೆ ಮಾಡಲಿದ್ದು, ಗಾಯನದಲ್ಲಿ ವಿನಯ್ ನಾಡಿಗ್, ಮೇಘನಾ ಕುಂದಾಪುರ, ಕೀಬೋರ್ಡ್ನಲ್ಲಿ ದೀಪಕ್ ಜಯಶೀಲನ್, ಕೊಳಲಿನಲ್ಲಿ ಸಂದೀಪ್ ವಶಿಷ್ಟ, ತಬಲಾದಲ್ಲಿ ರಘುನಾಥ್, ರೀದಮ್‌ನಲ್ಲಿ ಪ್ರವೀಣ್ ಷಣ್ಮುಖ ಸಹಕರಿಸಲಿದ್ದಾರೆ.

ಬಹುಮುಖ ಪ್ರತಿಭೆಯ ಗಿಳಿಯಾರು ಕುಶಲ ಹೆಗ್ಡೆ

ಶಾನಾಡಿ ಶೀನಪ್ಪ ಹೆಗ್ಡೆ ಗಿಳಿಯಾರು ಮೈನಾಡಿಮನೆ ಕಾವೇರಿ ಶೆಡ್ತಿಯವರ ಪುತ್ರರಾದ ಗಿಳಿಯಾರು ಕುಶಲ ಹೆಗ್ಡೆಯವರು ಬಾಲ್ಯದಲ್ಲಿ ತಾಯಿಯನ್ನು ಕಳೆದುಕೊಂಡರು. ತಂದೆ ಮಾರ್ಗದರ್ಶಕರಾಗಿ ಮುನ್ನಡೆಸಿದರು. ಅಕ್ಕ, ಸಹೋದರರು ಪ್ರೋತ್ಸಾಹಿಸಿದರು. ಪ್ರಾಥಮಿಕ ಶಿಕ್ಷಣವನ್ನು ಗುಳ್ಳಾಡಿ ಹಾಗೂ ಗಿಳಿಯಾರು ಶಾಂಭವಿ ಶಾಲೆಯಲ್ಲಿ ಪಡೆದರು. ಆನಂತರ ಕುಂದಾಪುರ ಬೋರ್ಡ್ ಹೈಸ್ಕೂಲ್‌ನಲ್ಲಿ ಪ್ರೌಢ ಶಿಕ್ಷಣವನ್ನು ಪಡೆದರು. ನಂತರ ಮಂಗಳೂರು ಸೈಂಟ್ ಅಲೋಷಿಯಸ್ ಕಾಲೇಜಿನಲ್ಲಿ ವಿದ್ಯಾಭ್ಯಾಸ ಮುಂದುವರೆಸಿದರು.

ಕುಂದಾಪುರದಲ್ಲಿ ವಕೀಲ ವೃತ್ತಿ ಪ್ರಾರಂಭಿಸಿದಾಗ ಅವರಿಗೆ ಪ್ರೇರಣೆ ತುಂಬಿದ ಗುರು ಯಡ್ತರೆ ಮಂಜಯ್ಯ ಶೆಟ್ಟಿಯವರು ಕಿರಿಯ ವಕೀಲರಾಗಿ ಅವರ ಮಾರ್ಗದರ್ಶನ ಪಡೆದದ್ದಲ್ಲದೇ ಅವರೇ ಅಧೀಕ್ಷಕರಾಗಿದ್ದ ವಿದ್ಯಾರ್ಥಿ ನಿಲಯದ ವಾರ್ಡನ್ ಆಗಿ 20 ವರ್ಷ ಸೇವೆ ಸಲ್ಲಿಸಿದರು. ಸಾಮಾಜಿಕ ಧುರೀಣರಾಗಿ ಜನಪ್ರಿಯರಾಗಿದ್ದ ಯಡ್ತರೆ ಮಂಜಯ್ಯ ಶೆಟ್ಟಿಯವರ ಒಡನಾಟ ಕುಶಲ ಹೆಗ್ಡೆಯವರಿಗೆ  ಉತ್ತಮ ಅನುಭವ, ಸಾರ್ವಜನಿಕ ಸಂಪರ್ಕ ಒದಗಿಸಿತು.

ಶಿಕ್ಷಕರಾಗಿ, ಪರಿಸರ ಪ್ರೇಮಿಯಾಗಿ, ಪ್ರಗತಿಪರ ಕೃಷಿಕರಾಗಿದ್ದ ಕೆ. ಎಲ್. ಕಾರಂತರು ಸಾಮಾಜಿಕ ಅಭಿವೃದ್ಧಿ ಕಾರ್ಯದಲ್ಲಿ ಕುಶಲ ಹೆಗ್ಡೆಯವರ ಮೇಲೆ ಪ್ರಭಾವ ಬೀರಿದವರು. ತಮ್ಮ ಸರಳತೆ, ಸಜ್ಜನಿಕೆ, ಕರ್ತವ್ಯ ಶ್ರದ್ಧೆ, ಉತ್ತಮ ಜನಸಂಪರ್ಕದಿAದ ಕುಶಲ ಹೆಗ್ಡೆಯವರು ಸಮಾಜದ ಧಾರ್ಮಿಕ, ಶೈಕ್ಷಣಿಕ, ಸಾಹಿತ್ಯಿಕ, ಕಲೆ, ಸಾಂಸ್ಕೃತಿಕ ಎಲ್ಲಾ ಕ್ಷೇತ್ರಗಳಲ್ಲೂ ತಮ್ಮ ಛಾಪು ಮೂಡಿಸಿದ್ದಾರೆ. ವಿವಿಧ ಜವಾಬ್ದಾರಿಗಳನ್ನು ನಿರ್ವಹಿಸುವ ಮೂಲಕ ತಮ್ಮ ಕೊಡುಗೆ ನೀಡಿದ್ದಾರೆ.

ಸ್ವಾತಂತ್ರ್ಯ ಪೂರ್ವದಲ್ಲಿ 01-06-1926ರಲ್ಲಿ ಜನಿಸಿದ ಕುಶಲ ಹೆಗ್ಡೆಯವರು ಸ್ವಾತಂತ್ರ್ಯಕ್ಕಾಗಿ  ನಡೆದ ಚಳವಳಿಗಳಲ್ಲಿ ಪಾಲ್ಗೊಂಡವರು. ಕುಂದಾಪುರ ತಾಲೂಕು ನಾಗರಿಕ ಸಮಿತಿ, ಭಾರತ ಸೇವಾದಳ, ಕುಂದೇಶ್ವರ ಸಾರ್ವಜನಿಕ ಗಣೇಶೋತ್ಸವ ಸಮಿತಿ, ವಡೇರ ಹೋಬಳಿ ಹಿರಿಯ ಪ್ರಾಥಮಿಕ ಶಾಲಾ ಸುವರ್ಣ ಮಹೋತ್ಸವ ಸಮಿತಿ, ಕುಂದಾಪುರ ವ್ಯವಸಾಯ ಸೇವಾ ಸಹಕಾರಿ ಸಂಘ, ಕುಂದಾಪುರ ವಕೀಲರ ಸಂಘ, ಸೇವಾ ಸಂಗಮ, ಶಿಶು ಮಂದಿರ, ಕುಂದಾಪುರ, ಈ ಎಲ್ಲಾ ಸಂಘ ಸಂಸ್ಥೆಗಳ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದವರು. ನಿರಂತರವಾಗಿ 4 ದಶಕಗಳ ಕಾಲ ದ.ಕ. ಜಿಲ್ಲಾ ಬಂಟರ ಯಾನೆ ನಾಡವರ ಸಂಘದ ಕಾರ್ಯಕಾರಿ ಸಮಿತಿ ಸದಸ್ಯರಾಗಿದ್ದವರು. ಶಾಂಭವಿ ಹಿರಿಯ ಪ್ರಾಥಮಿಕ ಶಾಲೆ ಗಿಳಿಯಾರು, ಕೋಟ., ಬೋರ್ಡ್ ಹೈಸ್ಕೂಲ್ ಕುಂದಾಪುರದ ಹಳೆ ವಿದ್ಯಾರ್ಥಿ ಸಂಘಗಳ ಪದಾಧಿಕಾರಿಯಾಗಿ ಶಾಲೆಯ ಅಭಿವೃದ್ಧಿಗೆ ಸೇವೆ ಸಲ್ಲಿಸಿದವರು. ಕೋಟ ಶ್ರೀ ಅಮೃತೇಶ್ವರಿ ದೇವಸ್ಥಾನ, ಶ್ರೀ ಕುಂದೇಶ್ವರ ದೇವಸ್ಥಾನ, ಕುಂದಾಪುರದ ಆಡಳಿತ ಮಂಡಳಿ ಸದಸ್ಯರಾಗಿ ದೇವಾಲಯದ ಅಭಿವೃದ್ಧಿಯಲ್ಲಿ ಪಾಲ್ಗೊಂಡವರು. ಕುಂದಾಪುರ ಎಜ್ಯುಕೇಶನ್ ಸೊಸೈಟಿಯ ಸ್ಥಾಪಕ ಖಜಾಂಚಿ, ಕುಂದಾಪುರ ರೂಪರಂಗದ ಖಜಾಂಚಿಯಾಗಿದ್ದವರು. ಭಾರತ ಸೇವಾ ದಳ ಇವರನ್ನು ರಾಜ್ಯ ಮಟ್ಟದಲ್ಲಿ ಸನ್ಮಾನಿಸಿ ಗೌರವಿಸಿತ್ತು. ಹಲವು ಸಂಘ, ಸಂಸ್ಥೆಗಳು ಕುಶಲ ಹೆಗ್ಡೆಯವರನ್ನು ಗೌರವಿಸಿದೆ.

ಸಾರ್ವಜನಿಕವಾಗಿ ಎಲ್ಲಾ ಕ್ಷೇತ್ರಗಳಲ್ಲೂ ಇವರು ಸೇವೆ ಸಲ್ಲಿಸುತ್ತಾ ಜನಾನುರಾಗಿಯಾದುದರಿಂದ ಕುಶಲ ಹೆಗ್ಡೆಯವರನ್ನು ಅವರ ಷಷ್ಟö್ಯಬ್ದ ಕಾಲದಲ್ಲಿ ಸಾರ್ವಜನಿಕವಾಗಿ ಕುಂದಾಪುರ ಬೋರ್ಡ್ ಹೈಸ್ಕೂಲ್ ಬಯಲು ರಂಗ ಮಂಟಪದಲ್ಲಿ 26-04-1992ರಲ್ಲಿ ಸಂಭ್ರಮದಿಂದ ಸನ್ಮಾನಿಸಿ ಗೌರವಿಸಲಾಯಿತು.

ಕುಂದಾಪುರದ ಖ್ಯಾತ ವಕೀಲರಾಗಿದ್ದ, ಗಿಳಿಯಾರು ಕುಶಲ ಹೆಗ್ಡೆಯವರು, ವೃತ್ತಿ ಸೇವೆಯಲ್ಲಿ ಕರ್ತವ್ಯನಿಷ್ಠರಾಗಿ ಸೇವೆ ಸಲ್ಲಿಸಿದಂತೆ, ಪ್ರವೃತ್ತಿಯಲ್ಲಿ ಸಾರ್ವಜನಿಕ ಸೇವಾ ಚಟುವಟಿಕೆಗಳಲ್ಲೂ ಅಷ್ಟೇ ಆಸಕ್ತಿ ಉತ್ಸಾಹದಿಂದ ಕ್ರಿಯಾಶೀಲರಾಗಿದ್ದರು. ಹಲವು ಕ್ಷೇತ್ರಗಳಲ್ಲಿ ಚಟುವಟಿಕೆಯಲ್ಲಿದ್ದು, ಜನರ ಪ್ರೀತಿ, ವಿಶ್ವಾಸ, ಗೌರವ ಪಡೆದವರು. ವಕೀಲರ ಸಂಘದ ಅಧ್ಯಕ್ಷರಾದರು. ಉಚಿತ ಕಾನೂನು ನೆರವು ಸಮಿತಿಯ ಅಧ್ಯಕ್ಷರಾದರು. ಇತ್ತ ಕುಂದಾಪುರ ರೋಟರಿ ಕ್ಲಬ್ ಅಧ್ಯಕ್ಷರಾದರು. ವ್ಯವಸಾಯ ಸೇವಾ ಸಹಕಾರಿ ಸಂಘದ ಅಧ್ಯಕ್ಷರಾದರು. "ನಾಗರಿಕ ಸಮಿತಿ" ಭಾರತ ಸೇವಾ ದಳದ ಅಧ್ಯಕ್ಷರಾದರು. ಹೀಗೆ ಸಾರ್ವಜನಿಕವಾಗಿ ಅವರು ಜವಾಬ್ದಾರಿ ತೆಗೆದುಕೊಂಡ ಕ್ಷೇತ್ರಗಳು ಹಲವಾರು.

Ads on article

Advertise in articles 1

advertising articles 2

Advertise under the article