ಮೇ 31: ಸುಮನಸಾ ಕೊಡವೂರು ಸಂಘಟನೆಯ ಬೆಳ್ಳಿ ಹಬ್ಬ ಕಾರ್ಯಕ್ರಮ
ಸುಮನಸಾ ಕೊಡವೂರು ಸಾಂಸ್ಕೃತಿಕ ಸಂಘಟನೆಯ ಬೆಳ್ಳಿ ಹಬ್ಬದ ಕಾರ್ಯಕ್ರಮದ ಶುಭಾರಂಭವು ಮೇ 31ನೇ ಭಾನುವಾರ ಸಂಜೆ 5 ಗಂಟೆಗೆ ಉಡುಪಿಯ ಕುಂಜಿಬೆಟ್ಟು ಐವೈಸಿ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಸಂಸ್ಥೆಯ ಅಧ್ಯಕ್ಷ ಪ್ರಕಾಶ್ ಜಿ. ಕೊಡವೂರು ತಿಳಿಸಿದ್ದಾರೆ.
ಅವರು ಉಡುಪಿಯಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸುಮನಸಾ ಕೊಡವೂರು ರಜತ ಸಂಭ್ರಮ ಸಮಿತಿಯ ಅಧ್ಯಕ್ಷ ಹರಿಪ್ರಸಾದ್ ರೈ ವಹಿಸಲಿದ್ದಾರೆ. ಪಡುಬಿದ್ರಿಯ ಯಸ್ಸೆನ್ ಸ್ಪೆಶನ್ ಎಕಾನೋಮಿಕ್ ಜೋನ್ ಮುಖ್ಯಸ್ಥರು ಮತ್ತು ಹಿರಿಯ ಮಹಾ ಪ್ರಬಂಧಕರಾದ ಅಶೋಕ ಕುಮಾರ್ ಶೆಟ್ಟಿ ಉದ್ಘಾಟಿಸಲಿದ್ದಾರೆ.
ಉಡುಪಿ ವಿಧಾನಸಭಾ ಕ್ಷೇತ್ರದ ಶಾಸಕ ಯಶಪಾಲ್ ಸುವರ್ಣ ಅವರು ರಜತ ಸಂಭ್ರಮದ ಲೋಗೊ ಅನಾವರಣ ಮಾಡಲಿದ್ದಾರೆ. ಮುಖ್ಯ ಅತಿಥಿಗಳಾಗಿ ಬುಡ್ನಾರು ಯಕ್ಷ ಸಂಜೀವ ಟ್ರಸ್ಟ್ನ ಯಕ್ಷಗಾನ ಗುರು ಬನ್ನಂಜೆ ಸಂಜೀವ ಸುವರ್ಣ, ಉಡುಪಿ ಜಿಲ್ಲಾ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರಾದ ಪೂರ್ಣಿಮಾ, ತುಳು ಸಾಹಿತ್ಯ ಅಕಾಡೆಮಿ ಸದಸ್ಯ ಉದ್ಯಾವರ ನಾಗೇಶ್ ಕುಮಾರ್ ಭಾಗವಹಿಸಲಿದ್ದಾರೆ.
ರಜತ ಸಂಭ್ರಮದ ಕಾರ್ಯಕ್ರಮದಂದು ಸಂಜೆ 5 ಗಂಟೆಗೆ ಸುಮಲಹರಿ ರಂಗಗೀತಾ ಗಾಯನ (ಸುಮನಸಾ ಈವರೆಗೆ ಪ್ರಸ್ತುತ ಪಡಿಸಿದ ಆಯ್ದ ನಾಟಕಗಳ ಗೀತೆಗಳನ್ನು ನಮ್ಮದೇ ಪ್ರತಿಭಾವಂತರು ಹಾಡಲಿದ್ದಾರೆ), ಸಂಜೆ 6 ಗಂಟೆಗೆ ಸಭಾ ಕಾರ್ಯಕ್ರಮ ಉದ್ಘಾಟನೆ, ರಾತ್ರಿ 7 ಗಂಟೆಗೆ ಮಕ್ಕಳ ನಾಟಕ ( ಸ್ನೇಹ, ಸೌಹಾರ್ದ, ಸಂಬಂಧ, ಕಲೆ, ಸಾಹಿತ್ಯ, ಸಾಂಸ್ಕೃತಿಕ ಅರಿವಿಗಾಗಿ ಹಮ್ಮಿಕೊಂಡಿದ್ದ ಮಕ್ಕಳ ರಂಗಶಿಬಿರ ‘ಅಟ್ಟಮುಟ್ಟ’ದಲ್ಲಿ ಸಿದ್ಧಗೊಂಡ ನಾಟಕ ‘ರಿಟಯರ್ಡ್ ಬೆಕ್ಕು’ ‘ಸೂಪರ್ ಹೀರೋಸ್ ಆಫ್ ಸುಮನಸಾ’ ಪ್ರದರ್ಶನಗೊಳ್ಳಲಿದೆ. ಚರಿತ್ ಸುವರ್ಣ ಅವರು ಈ ನಾಟಕವನ್ನು ರಚಿಸಿ ನಿರ್ದೇಶಿಸಿದ್ದಾರೆ. ಸುಮನಸಾ ಕೊಡವೂರು ರಜತ ಸಂಭ್ರಮ ಸಮಿತಿ ಗೌರವಾಧ್ಯಕ್ಷರಾದ ಪ್ರಮೋದ್ ಮಧ್ವರಾಜ್, ಎಂ.ಎಲ್. ಸಾಮಗ, ಸುಮನಸಾ ಕೊಡವೂರು ಸಾಂಸ್ಕೃತಿಕ ಸಂಘಟನೆಯ ಗೌರವಾಧ್ಯಕ್ಷ ಎಂ.ಎಸ್. ಭಟ್, ಅಧ್ಯಕ್ಷ ಪ್ರಕಾಶ್ ಜಿ. ಕೊಡವೂರು, ಸಂಚಾಲಕ ಭಾಸ್ಕರ ಪಾಲನ್ ಬಾಚನಬೈಲು ಉಪಸ್ಥಿತರಿರಲಿದ್ದಾರೆ ಎಂದರು.
ಸುದ್ದಿಗೋಷ್ಟಿಯಲ್ಲಿ ರಜತ ಸಮಿತಿಯ ಅಧ್ಯಕ್ಷ ಹರಿಪ್ರಸಾದ್ ರೈ, ಗೌರವಾಧ್ಯಕ್ಷ ಎಮ್.ಎಸ್.ಭಟ್, ಸಂಚಾಲಕ ಭಾಸ್ಕರ್ ಪಾಲನ್ ಬಾಚನಬೈಲು, ಉಪಾಧ್ಯಕ್ಷ ವಿನಯ್ ಕಲ್ಮಾಡಿ ಉಪಸ್ಥಿತರಿದ್ದರು.