ವಿವಾದಗಳ ನಡುವೆ ಕುಂದಾಪುರ ಬ್ಲಾಕ್ ಕಾಂಗ್ರೆಸ್ ಕಟ್ಟಡಕ್ಕೆ ಶಿಲಾನ್ಯಾಸ
ರಾಜಕೀಯ ಪರ ವಿರೋಧಗಳ ನಡುವೆ ಕುಂದಾಪುರ ಬ್ಲಾಕ್ ಕಾಂಗ್ರೆಸ್ ಕಚೇರಿಯ ಕಟ್ಟಡಕ್ಕೆ ರಾಜ್ಯ ನೀರಾವರಿ ಸಚಿವ ಎನ್.ಎಸ್ ಭೋಸರಾಜು ಇಂದು ಶಿಲಾನ್ಯಾಸ ನೆರವೇರಿಸಿದರು.
ಕುಂದಾಪುರ ಬ್ಲಾಕ್ ಕಾಂಗ್ರೆಸ್ ಕಚೇರಿ ಪ್ರಸಕ್ತ ಕುಂದಾಪುರ ಪೇಟೆಯಲ್ಲಿ ಮಾಜಿ ಶಾಸಕ ಎಸ್.ಎಸ್ ಕೊಳ್ಕೆಬೈಲ್ ಅವರಿಗೆ ಸೇರಿದ ಕಟ್ಟಡದಲ್ಲಿ ನಡೆಯುತ್ತಿದ್ದು, ಅದರ ಎದುರಿನ ಸರಕಾರಿ ನಿವೇಶನವನ್ನು ಸರಕಾರ ಇತ್ತೀಚೆಗೆ ಕಾಂಗ್ರೆಸ್ ಪಕ್ಷಕ್ಕೆ ಮಂಜೂರು ಮಾಡಿತ್ತು. ಸರಕಾರಕ್ಕೆ ಪಾವತಿಸಬೇಕಾದ ಮೊತ್ತವನ್ನು ಕಾಂಗ್ರೆಸ್ ಪಕ್ಷವು ಪಾವತಿ ಮಾಡಿತ್ತು. ಈ ಮಧ್ಯೆ ಭಾರತೀಯ ಜನತಾ ಪಕ್ಷದ ಕುಂದಾಪುರ ಘಟಕವು ವಿರೋಧ ವ್ಯಕ್ತಪಡಿಸಿತ್ತು. ಆ ಸ್ಥಳವನ್ನು ಟೆಂಪೋ ರಿಕ್ಷಾ ನಿಲ್ದಾಣಕ್ಕೆ ಮಂಜೂರು ಮಾಡುವಂತೆ ಆಗ್ರಹಿಸಿತ್ತು. ನಿನ್ನೆ ರಾತ್ರಿ ನಡೆದ ಘಟನೆಯಲ್ಲಿ ಒಂದೆರಡು ಟೆಂಪೋ ರಿಕ್ಷಾಗಳನ್ನು ಆ ಸ್ಥಳದಲ್ಲಿ ನಿಲುಗಡೆ ಮಾಡಲಾಗಿತ್ತು. ಇಂದು ಬೆಳಗ್ಗೆ ಅದೇ ಪರಿಸರದಲ್ಲಿ ಪ್ರತಿಭಟನೆ ಹಮ್ಮಿಕೊಂಡಿತ್ತು. ಈ ಹಿಂದೆ ಕಮ್ಯುನಿಸ್ಟ್ ಪಕ್ಷ ಹಾಗೂ ಬಿಜೆಪಿ ಇದೇ ನಿವೇಶನವನ್ನು ತಮ್ಮ ತಮ್ಮ ಪಕ್ಷಗಳಿಗೆ ಮಂಜೂರು ಮಾಡುವಂತೆ ಅರ್ಜಿ ಸಲ್ಲಿಸಿರುವುದನ್ನು ಇಲ್ಲಿ ಸ್ಮರಿಸಬಹುದು.
ಶಿಲಾನ್ಯಾಸ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದ ವಿಧಾನ ಪರಿಷತ್ ಸದಸ್ಯ ಮಂಜುನಾಥ ಭಂಡಾರಿ, ಗಾಜಿನ ಮನೆಯಲ್ಲಿ ಕುಳಿತುಕೊಂಡವರು ಇತರರೆಡೆಗೆ ಕಲ್ಲೆಸೆಯಬಾರದು. ಬಿಜೆಪಿ ಸರ್ಕಾರವಿದ್ದಾಗ ಸಂಘ ಪರಿವಾರಕ್ಕೆ ಸಂಬಂಧಿಸಿದ ಚಾಣಕ್ಯ ಯುನಿವರ್ಸಿಟಿಗೆ 110 ಎಕರೆ ಜಮೀನು ಮಂಜೂರು ಮಾಡಲಾಗಿದೆ. ಶಿವಮೊಗ್ಗದಲ್ಲಿ ಜನಸೇವಾ ಟ್ರಸ್ಟ್ ಹೆಸರಿನಲ್ಲಿ ಸರ್ಕಾರಿ ಜಮೀನು ಪಡೆಯಲಾಗಿದೆ. ರಾಷ್ಟ್ರೋತ್ಥಾನ ಶಾಲೆಗಳು ಹಾಗೂ ಹಿಂದೂ ಜಾಗರಣ ಸಂಸ್ಥೆಗಳಿಗೂ ಸರ್ಕಾರದಿಂದ ಭೂಮಿ ಮಂಜೂರಾಗಿದೆ ಎಂದು ಬಿಜೆಪಿ ಪ್ರತಿಭಟನೆಗೆ ಟಾಂಗ್ ನೀಡಿದರು.
130 ವರ್ಷಗಳಿಂದ ದೇಶಕ್ಕಾಗಿ ಸೇವೆ ಸಲ್ಲಿಸಿದ ಕಾಂಗ್ರೆಸ್ ಪಕ್ಷಕ್ಕೆ ಜಮೀನು ನೀಡಿರುವುದನ್ನು ಟೀಕಿಸುತ್ತಿರುವುದು ಬಿಜೆಪಿಯ ನೈತಿಕ ಅಧಃಪತನವನ್ನು ಸೂಚಿಸುತ್ತದೆ ಎಂದರು. ಕುಂದಾಪುರದ ಜಮೀನನ್ನು ಕಾಂಗ್ರೆಸ್ ಪಕ್ಷ ಉಚಿತವಾಗಿ ಪಡೆದುಕೊಂಡದ್ದಲ್ಲ. ಸಲ್ಲಬೇಕಾದ ಮೊತ್ತವನ್ನು ಪಾವತಿ ಮಾಡಿಯೇ ಜಮೀನು ಮಂಜೂರಾಗಿದೆ ಎಂದರು.
ಮಾಜಿ ಸಂಸದ ಜಯಪ್ರಕಾಶ್ ಹೆಗ್ಡೆ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಅಶೋಕ್ ಕೊಡವೂರು, ಕರಾವಳಿ ಪ್ರಾಧಿಕಾರದ ಅಧ್ಯಕ್ಷ ಎಂ.ಎ ಗಫೂರ್, ಕುಂದಾಪುರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಹರಿಪ್ರಸಾದ್ ಶೆಟ್ಟಿ, ಕಾಂಗ್ರೆಸ್ ಮುಖಂಡ ದಿನೇಶ್ ಹೆಗ್ಡೆ ಮೊಳಹಳ್ಳಿ, ಜಿಲ್ಲಾ ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷ ಅಲೆವೂರು ಹರೀಶ್ ಕಿಣಿ, ಕಿಶನ್ ಹೆಗ್ಡೆ ಕೊಳ್ಕೆಬೈಲ್, ಮಲ್ಯಾಡಿ ಶಿವರಾಮ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.
ಮಾಜಿ ಶಾಸಕ ಕೆ. ಪ್ರತಾಪ್ ಚಂದ್ರ ಶೆಟ್ಟಿ ಅವರ ಅನುಪಸ್ಥಿತಿ ಎದ್ದು ಕಾಣುತ್ತಿತ್ತು.