-->
ಮಳೆಗಾಲದ ಪೂರ್ವ ತಯಾರಿ ವಿಳಂಬ: ಬಿಜೆಪಿಯಿಂದ ನಗರಸಭೆಗೆ ಮುತ್ತಿಗೆ ಹಾಕುವ ಎಚ್ಚರಿಕೆ

ಮಳೆಗಾಲದ ಪೂರ್ವ ತಯಾರಿ ವಿಳಂಬ: ಬಿಜೆಪಿಯಿಂದ ನಗರಸಭೆಗೆ ಮುತ್ತಿಗೆ ಹಾಕುವ ಎಚ್ಚರಿಕೆ


ಉಡುಪಿ ನಗರಸಭೆಯು ಮಳೆಗಾಲದ ಪೂರ್ವ ತಯಾರಿ ಕೆಲಸ ಕಾರ್ಯವನ್ನು ಸಮರ್ಪಕವಾಗಿ ನಿರ್ವಹಿಸುವಲ್ಲಿ ಸಂಪೂರ್ಣವಾಗಿ ವಿಫಲವಾಗಿದೆ ಎಂದು ಉಡುಪಿ ನಗರ ಬಿಜೆಪಿ ಅಧ್ಯಕ್ಷ ದಿನೇಶ್ ಅಮೀನ್ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಅವರು ಉಡುಪಿಯಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದರು. ಉಡುಪಿ ನಗರದಲ್ಲಿ ರಾಜಕಾಲುವೆ, ಸಣ್ಣ ಕಾಲುವೆ ಹಾಗೂ ಮಳೆ ನೀರು ಹರಿಯುವ ಚರಂಡಿಗಳ ಹೂಳೆತ್ತುವ ಕಾಮಗಾರಿಯನ್ನು ಇನ್ನೂ ಕೈಗೊಳ್ಳಲಾಗಿಲ್ಲ. ಇದರಿಂದ ಮಳೆ ಬಂದರೆ ನಗರದಲ್ಲಿ ನೀರು ನಿಲ್ಲುವ ಭೀತಿ ಎದುರಾಗಿದೆ ಎಂದು ಅವರು ಆರೋಪಿಸಿದರು. 

ಬನ್ನಂಜೆ ಪ್ರದೇಶದಲ್ಲಿಯೂ ಚರಂಡಿ ಸ್ವಚ್ಛತಾ ಕಾರ್ಯ ಪ್ರಾರಂಭವಾಗಿಲ್ಲ ಎಂದು ಹೇಳಿದ ದಿನೇಶ್ ಅಮೀನ್, ವಾರದೊಳಗೆ ಹೂಳೆತ್ತುವ ಕಾಮಗಾರಿ ಪೂರ್ಣಗೊಳಿಸದಿದ್ದರೆ ನಗರಸಭೆಗೆ ಮುತ್ತಿಗೆ ಹಾಕಲಾಗುವುದು ಎಂದು ಎಚ್ಚರಿಕೆ ನೀಡಿದರು. ಇದೇ ವೇಳೆ ಉದ್ದಿಮೆ ಪರವಾನಿಗೆ ಶುಲ್ಕವನ್ನು ನಗರಸಭೆ ಅನ್ಯಾಯವಾಗಿ ಹೆಚ್ಚಿಸಿದೆ ಎಂದು ಕೂಡ ಅವರು ಕಿಡಿಕಾರಿದರು.

ಮಾಜಿ ನಗರಸಭಾ ಅಧ್ಯಕ್ಷ ಪ್ರಭಾಕರ್ ಪೂಜಾರಿ ಮಾತನಾಡಿ, ನಗರಸಭೆ ಕೌನ್ಸಿಲ್ ಅವಧಿ ಅಕ್ಟೋಬರ್‌ನಲ್ಲೇ ಮುಗಿದಿದೆ. ನಂತರ ಶಾಸಕರ ನೇತೃತ್ವದಲ್ಲಿ ಮಳೆಗಾಲದ ಪೂರ್ವಭಾವಿಯಾಗಿ ಸಭೆ ನಡೆಸಿ, ಚರಂಡಿ ಹೂಳೆತ್ತುವ ಬಗ್ಗೆ ಅಧಿಕಾರಿಗಳ ಗಮನಕ್ಕೆ ಹಲವು ಬಾರಿ ತರಲಾಗಿದೆ. ಇದಕ್ಕೆ ನಗರಸಭೆಯ ಅಧಿಕಾರಿಗಳು ಸಮ್ಮತಿ ಸೂಚಿಸಿದ್ದಾರೆ. ಈವರೆಗೆ ಕಾರ್ಮಿಕರನ್ನು ನೇಮಿಸಲು ಟೆಂಡರ್ ಕರೆಯಲಾಗಿದೆಯಾದರೂ, ಕೆಲಸ ಆರಂಭಿಸಲು ಇನ್ನೂ ಆದೇಶ ನೀಡಿಲ್ಲ ಎಂದು ಆರೋಪಿಸಿದರು.

ನಗರದ ಬಹುತೇಕ ಚರಂಡಿಗಳು ಮುಚ್ಚಿಹೋಗಿದ್ದು, ಮಳೆ ನೀರು ರಸ್ತೆಗಳಲ್ಲಿ ಹರಿದು ಜನರಿಗೆ ತೊಂದರೆ ಉಂಟಾಗುತ್ತಿದೆ. ಇದಲ್ಲದೆ, ಉಡುಪಿ ನಗರಸಭೆ ಕಾನೂನು ಮೀರಿ ಉದ್ದಿಮೆ ಪರವಾನಿಗೆ ಶುಲ್ಕ ಹೆಚ್ಚಿಸಿದೆ. ಸಾರ್ವಜನಿಕರಿಗೆ ಸೂಕ್ತ ಸೇವೆ ನೀಡಬೇಕಾದ ನಗರಸಭೆಯಲ್ಲಿ ಸಿಬ್ಬಂದಿ ಸಮಯಕ್ಕೆ ಲಭ್ಯವಿರುವುದಿಲ್ಲ. ಕಚೇರಿ ಬಹುತೇಕ ಖಾಲಿಯಾಗಿರುತ್ತದೆ ಎಂದು ಪ್ರಭಾಕರ್ ಪೂಜಾರಿ ಅಸಮಾಧಾನ ವ್ಯಕ್ತಪಡಿಸಿದರು.

ಉಡುಪಿ ಜನರಿಗೆ ಸಮರ್ಪಕ ಸೇವೆ ನೀಡಬೇಕಾದ ನಗರಸಭೆಯಲ್ಲಿ ಸಿಬ್ಬಂದಿಗಳು ಸಮಯಕ್ಕೆ ಸರಿಯಾಗಿ ಲಭ್ಯವಾಗುವುದಿಲ್ಲ. ಸಾರ್ವಜನಿಕರು ಕೆಲಸಕ್ಕಾಗಿ ನಗರಸಭೆಗೆ ಬಂದಾಗ ಕಚೇರಿ ಬಹುತೇಕ ಖಾಲಿಯಾಗಿರುವ ಸ್ಥಿತಿ ಕಂಡು ಬರುತ್ತಿದೆ ಎಂದು ಅವರು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. 

ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ಕಿರಣ್ ಕುಮಾರ್ ಬೈಲೂರು ಮಾತನಾಡಿ,ಜಿಲ್ಲಾಧಿಕಾರಿಗಳ ಅಸಡ್ಡೆ ನೀತಿಯಿಂದ ನಗರಸಭೆಯಲ್ಲಿ ಈ ರೀತಿಯ ಅವ್ಯವಸ್ಥೆಗಳು ಎದುರಾಗುತ್ತಿವೆ. ಆರ್ಥಿಕ ಕ್ರೂಡೀಕರಣದಲ್ಲಿ ಜಿಲ್ಲಾಡಳಿತ ಸಂಪೂರ್ಣ ವಿಫಲವಾಗಿದೆ. ಕಸ ವಿಲೇವಾರಿ ವಿಷಯದಲ್ಲಿಯೂ ನಗರಸಭೆ ನಿರ್ಲಕ್ಷ್ಯ ವಹಿಸಿದೆ ಎಂದು ಆರೋಪಿಸಿದರು. ಟೆಂಡರ್ ಪಡೆದ ಕಾಮಗಾರಿಗಳನ್ನು ನಿಗದಿತ ಸಮಯದಲ್ಲಿ ಪೂರ್ಣಗೊಳಿಸಲಾಗುತ್ತಿಲ್ಲ. ಇದರಿಂದ ಸಾರ್ವಜನಿಕರಿಗೆ ತೊಂದರೆ ಹೆಚ್ಚುತ್ತಿದೆ ಎಂದರು.ನಗರಸಭೆ ಹಾಗೂ ಜಿಲ್ಲಾಡಳಿತ ಎರಡೂ ತಮ್ಮ ಜವಾಬ್ದಾರಿಯನ್ನು ಸಮರ್ಪಕವಾಗಿ ನಿಭಾಯಿಸುವಲ್ಲಿ ವಿಫಲವಾಗಿವೆ ಎಂದು ಆಕ್ರೋಶ ವ್ಯಕ್ತಪಡಿಸಿದ ಅವರು, ಒಂದು ವಾರದೊಳಗೆ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಕಲ್ಪಿಸದಿದ್ದರೆ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು. 

ಸುದ್ದಿಗೋಷ್ಟಿಯಲ್ಲಿ ಜಗದೀಶ್ ಆಚಾರ್ ಮತ್ತು ರಶ್ಮಿಕಾ ಶೆಟ್ಟಿ ಉಪಸ್ಥಿತರಿದ್ದರು.

Ads on article

Advertise in articles 1

advertising articles 2

Advertise under the article