ಬಿಜೆಪಿ ಯುವ ಮೋರ್ಚಾ ಕಾರ್ಯಕರ್ತರಿಂದ "ಗೋ ಬ್ಯಾಕ್ ಲಕ್ಷ್ಮೀ ಅಕ್ಕ" ಘೋಷಣೆ
ಉಡುಪಿ ಜಿಲ್ಲೆಯನ್ನು ರಾಜ್ಯ ಕಾಂಗ್ರೆಸ್ ಸರ್ಕಾರ ನಿರ್ಲಕ್ಷ್ಯ ಮಾಡಿದೆ ಎಂದು ಆರೋಪಿಸಿ ಉಡುಪಿ ಜಿಲ್ಲಾ ಉಸ್ತುವಾರಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರಿಗೆ ಉಡುಪಿ ಜಿಲ್ಲಾ ಯುವಮೋರ್ಚಾ ಕಾರ್ಯಕರ್ತರು ಗೋ ಬ್ಯಾಕ್ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ಜಿಲ್ಲಾ ಉಸ್ತುವಾರಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರು ಉಡುಪಿ ಜಿಲ್ಲಾ ಪ್ರವಾಸದಲ್ಲಿದ್ದಾರೆ. ಬೆಳಿಗ್ಗೆ ಉಡುಪಿಯಿಂದ ಮಣಿಪಾಲಕ್ಕೆ ಸಚಿವೆ ಕೆ ಡಿ ಪಿ ಸಭೆಗೆ ಆಗಮಿಸುವಾಗ ಬಿಜೆಪಿ ಯುವ ಮೋರ್ಚಾ ಸದಸ್ಯರು ಗೋ ಬ್ಯಾಕ್ ಲಕ್ಷ್ಮಿ ಹೆಬ್ಬಾಳ್ಕರ್ ಎಂದು ಕೂಗುವ ಮೂಲಕ ತಮ್ಮ ಅಸಮಾಧಾನ ವ್ಯಕ್ತಪಡಿಸಿದರು. ಜಿಲ್ಲೆಯನ್ನು ನಿರ್ಲಕ್ಷ್ಯ ಮಾಡಿರುವುದರ ಜೊತೆಗೆ ಹೆಬ್ಬಾಳ್ಕರ್ ಅವರು ಅಪರೂಪಕ್ಕೆ ಎಂಬಂತೆ ಜಿಲ್ಲೆಗೆ ಬರುತ್ತಿದ್ದಾರೆ.ಈ ಮೂಲಕ ಜಿಲ್ಲೆಯ ಜನರ ಸಮಸ್ಯೆಗಳನ್ನು ನಿರ್ಲಕ್ಷ್ಯ ಮಾಡುತ್ತಿದ್ದಾರೆ ಎಂಬುದು ಯುವ ಮೋರ್ಚಾ ಕಾರ್ಯಕರ್ತರ ಆರೋಪವಾಗಿದೆ. ಇದಕ್ಕೂ ಮೊದಲು ಬಿಜೆಪಿ ಯುವ ಮೋರ್ಚಾ ಸಚಿವೆಗೆ ಕಪ್ಪು ಬಾವುಟ ಪ್ರದರ್ಶನ ಮಾಡುವ ಯೋಜನೆ ಹಾಕಿಕೊಂಡಿತ್ತು. ಈ ಹಿನ್ನೆಲೆಯಲ್ಲಿ ಮಣಿಪಾಲದ ರಜತಾದ್ರಿಯ ಮುಂದೆ ಸಾಕಷ್ಟು ಸಂಖ್ಯೆಯಲ್ಲಿ ಪೊಲೀಸರನ್ನು ಭದ್ರತೆಗಾಗಿ ನಿಯೋಜಿಸಲಾಗಿತ್ತು. ಕೊನೆಗಳಿಗೆಯಲ್ಲಿ ಸಚಿವೆಗೆ ಕಪ್ಪು ಬಾವುಟ ಪ್ರದರ್ಶನ ಮಾಡುವ ಬದಲು ಗೋ ಬ್ಯಾಕ್ ಲಕ್ಷ್ಮಿ ಅಕ್ಕ ಎಂದು ಯುವ ಮೋರ್ಚಾ ಸದಸ್ಯರು ಜೋರಾಗಿ ಕೂಗಿದರು.ಈ ವೇಳೆ ಸಚಿವೆ ಕಾರಿನ ಮೂಲಕ ನೇರವಾಗಿ ಕೆ ಡಿ ಪಿ ಸಭೆಗೆ ತೆರಳಿದರು.