-->
ಉಡುಪಿ ಲಾ ಕಾಲೇಜು ಹಳೆ ವಿದ್ಯಾರ್ಥಿ ಈಗ ಪುದುಚೇರಿಯ ಮಾಹೆ ಕ್ಷೇತ್ರದ ಶಾಸಕ!

ಉಡುಪಿ ಲಾ ಕಾಲೇಜು ಹಳೆ ವಿದ್ಯಾರ್ಥಿ ಈಗ ಪುದುಚೇರಿಯ ಮಾಹೆ ಕ್ಷೇತ್ರದ ಶಾಸಕ!


ವಿಶೇಷ ವರದಿ: ಅಲೆವೂರು ದಿನೇಶ್ ಕಿಣಿ

ಮಂಗಳೂರು ವಿವಿಗೆ ಸೇರಿದ ಉಡುಪಿಯ ವೈಕುಂಠ ಬಾಳಿಗ ಕಾನೂನು ಕಾಲೇಜಿನ ಹಳೆ ವಿದ್ಯಾರ್ಥಿ ಈಗ ಶಾಸಕನಾಗಿ ವಿಧಾನಸಭೆ ಪ್ರವೇಶಿಸಿದ್ದಾರೆ!

ಹೌದು, ಕೇಂದ್ರಾಡಳಿತ ಪ್ರದೇಶವಾದ ಪುದುಚೇರಿಯ (ಹಿಂದಿನ ಫ್ರೆಂಚ್ ವಸಾಹತು ಆಗಿದ್ದ ಪಾಂಡಿಚೇರಿ) ‘ಮಾಹೆ’ ವಿಧಾನಸಭಾ ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿಯಾಗಿ ಗೆದ್ದ ಟಿ. ಅಶೋಕ್ ಕುಮಾರ್, 1986ರಿಂದ 1991ರ ವರೆಗೆ ಉಡುಪಿ ಕುಂಜಿಬೆಟ್ಟಿನಲ್ಲಿರುವ ವೈಕುಂಠ ಬಾಳಿಗ ಕಾನೂನು ಕಾಲೇಜಿನಲ್ಲಿ 5 ವರ್ಷಗಳ ಬಿಎ (ಲಾ)  ಎಲ್ಎಲ್  ಬಿ ಪದವಿ ಪಡೆದವರು.

80-90ರ ದಶಕದಲ್ಲಿ ಕೇರಳದಲ್ಲಿ ಕಾನೂನು ಕಾಲೇಜುಗಳು ತೀರಾ ವಿರಳವಿದ್ದ ಕಾಲದಲ್ಲಿ ಸಾವಿರಾರು ವಿದ್ಯಾರ್ಥಿಗಳು ಉಡುಪಿಯ ವೈಕುಂಠ ಬಾಳಿಗಾ ಕಾನೂನು ಕಾಲೇಜಿನಲ್ಲಿ ಕಾನುನು ಪದವಿ ಪಡೆದು ಮರಳುತ್ತಿದ್ದರು. 

ಅಶೋಕ್ ಕುಮಾರ್ ಕೂಡ ಉಡುಪಿಯಲ್ಲಿ ನ್ಯಾಯಾಲಯ ಸಂಕೀರ್ಣದ ಎದುರು ಬದಿಯಲ್ಲಿ ಖ್ಯಾತ ವಸ್ತ್ರ ವಿನ್ಯಾಸಕಿ ‘ಮಮ್ಮಿ& ಮಿ’ ಯ ಮೀನಾ ಲಕ್ಷ್ಮಣೀ ಅಡ್ಯಂತಾಯ ಅವರಿಗೆ ಸೇರಿದ ಬಾಡಿಗೆ ರೂಮಿನಲ್ಲಿ ಕೇರಳದ ಇತರ ವಿದ್ಯಾರ್ಥಿಗಳೊಂದಿಗೆ ಇದ್ದು ಶಿಕ್ಷಣ ಪೂರೈಸಿದವರು. 

ವಿದ್ಯಾರ್ಥಿ ಜೀವನದಿಂದಲೇ ರಾಜಕೀಯ ಆಸಕ್ತಿ ಬೆಳೆಸಿಕೊಂಡಿದ್ದ ಅಶೋಕ್ ಕುಮಾರ್, ಪುದುಚೇರಿ ಮತ್ತು ಮಾಹೆಯ ನ್ಯಾಯಾಲಯಗಳಲ್ಲಿ ವಕೀಲರಾಗಿ ಸೇವೆ ಸಲ್ಲಿಸಿದವರು. 

ಕಮ್ಯುನಿಸ್ಟ್ ಪಕ್ಷದೊಂದಿಗೆ ನಿಕಟ ಸಂಪರ್ಕ ಹೊಂದಿದ್ದ ಅವರು, 

ಜನರ ಸಮಸ್ಯೆಗಳಿಗೆ ಸ್ಪಂದಿಸಿ ಜನಾನುರಾಗಿಯಾಗಿದ್ದರು. 58 ವರ್ಷ ಪ್ರಾಯದ ಅಶೋಕ್ ಕುಮಾರ್ ಅವರು ಕಳೆದ ಏಪ್ರಿಲ್ ನಲ್ಲಿ ನಡೆದ ಚುನಾವಣೆಯಲ್ಲಿ ಕಮ್ಯುನಿಸ್ಟ್ ಪಕ್ಷದಿಂದ ಸ್ಪರ್ಧಿಸದೆ, ಕಾರಣಾಂತರಗಳಿಂದ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿ 1115 ಮತಗಳ ಅಂತರದಿಂದ ವಿಜಯಿಯಾಗಿದ್ದಾರೆ. 

“ಅಶೋಕನ್ ಕಾಲೇಜು ದಿನಗಳಿಂದಲೂ ರಾಜಕೀಯ ಆಸಕ್ತಿ ಹೊಂದಿದ್ದರು. ಕಾಲೇಜಿನ ವಿದ್ಯಾರ್ಥಿ ಸಂಘದ ಚುನಾವಣೆಯಲ್ಲಿ ನಮ್ಮ ತಂಡವನ್ನು ಬೆಂಬಲಿಸಿದ್ದರು”, ಎನ್ನುತ್ತಾರೆ ಕಾಲೇಜಿನಲ್ಲಿ ಅವರ ಸೀನಿಯರ್ ಆಗಿದ್ದ ಪ್ರಸ್ತುತ ಉಡುಪಿಯಲ್ಲಿ ಖ್ಯಾತ ವಕೀಲರೂ, ನೋಟರಿಯೂ ಆಗಿರುವ ಪಿ. ಲಕ್ಷ್ಮಣ್ ಆರ್. ಶೆಣೈ.

 ರೂ. 9 ಕೋಟಿ ಆಸ್ತಿಯ ಒಡೆಯನಾಗಿರುವ ಶಾಸಕ ಅಶೋಕ್ ಕುಮಾರ್ ಕೊಲ್ಲೂರು ಶ್ರೀ ಮೂಕಾಂಬಿಕೆಯ ಪರಮ ಭಕ್ತರಾಗಿದ್ದು, ಕೊಲ್ಲೂರಿಗೆ ಹಲವಾರು ಬಾರಿ ಭೇಟಿ ನೀಡಿ ದೇವಿಯ ದರ್ಶನ ಪಡೆದಿದ್ದಾರೆ. "ಶೀಘ್ರದಲ್ಲೇ ಇನ್ನೊಮ್ಮೆ ಕೊಲ್ಲೂರು ಮೂಕಾಂಬಿಕೆಯ ದರ್ಶನ ಪಡೆಯಲು ಬರಲಿಕ್ಕಿದೆ " ಎಂದು ತಿಳಿಸಿದ್ದಾರೆ. 

ಮೇ 23ರಂದು  ವೈಕುಂಠ ಬಾಳಿಗ ಕಾಲೇಜಿನಲ್ಲಿ ನಡೆಯುವ ಹಳೆ ವಿದ್ಯಾರ್ಥಿಗಳ ಪುನರ್ಮಿಲನ ಕಾರ್ಯಕ್ರಮದಲ್ಲಿ ಭಾಗವಹಿಸಲು ತಾನು ಕಲಿತ ಕಾಲೇಜಿನಿಂದ ಆಮಂತ್ರಣ ಬಂದಿರುವುದಾಗಿಯೂ ಅವರು ತಿಳಿಸಿದ್ದಾರೆ.

ಪುದುಚೇರಿಯ ಲೆಫ್ಟಿನೆಂಟ್ ಗವರ್ನರ್ ಕೈಲಾಶನಾಥನ್ ಅವರೊಂದಿಗೆ ಶಾಸಕ ಅಶೋಕ್ ಕುಮಾರ್


Ads on article

Advertise in articles 1

advertising articles 2

Advertise under the article