ಸಿಎಂ ಸಿದ್ದರಾಮಯ್ಯ ಆಪ್ತ ಕಾರ್ಯದರ್ಶಿ , ವಿಶೇಷ ಕರ್ತವ್ಯ ಅಧಿಕಾರಿ ವರ್ಗಾವಣೆ
ಸಿಎಂ ಸಿದ್ದರಾಮಯ್ಯ ಅವರ ಆಪ್ತ ಕಾರ್ಯದರ್ಶಿ ಡಾ.ವೆಂಕಟೇಶಯ್ಯ ಮತ್ತು ವಿಶೇಷ ಕರ್ತವ್ಯ ಅಧಿಕಾರಿ ರಮೇಶ್ ಪಿ. ಕೋನಾರೆಡ್ಡಿ ಅವರನ್ನು ವರ್ಗಾವಣೆ ಮಾಡಲಾಗಿದೆ.
ಕರ್ನಾಟಕ ಆಡಳಿತ ಸೇವೆ (ಕೆಎಎಸ್) ಅಧಿಕಾರಿ ಡಾ. ವೆಂಕಟೇಶಯ್ಯ ಅವರನ್ನು ಕೃಷಿ ಮಾರಾಟ ಇಲಾಖೆಯ ನಿರ್ದೇಶಕರಾಗಿ ಹಾಗೂ ರಮೇಶ್ ಪಿ. ಕೋನಾರೆಡ್ಡಿ ಅವರನ್ನು ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತ ಇಲಾಖೆಯ ನಿರ್ದೇಶಕರಾಗಿ ವರ್ಗಾವಣೆ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.
ಸಾರ್ವಜನಿಕ ಹಾಗೂ ಆಡಳಿತಾತ್ಮಕ ಹಿತದೃಷ್ಟಿಯಿಂದ ಈ ವರ್ಗಾವಣೆ ಮಾಡಲಾಗಿದ್ದು, ಆದೇಶವು ತಕ್ಷಣದಿಂದಲೇ ಜಾರಿಗೆ ಬರಲಿದೆ ಎಂದು ಸರ್ಕಾರ ತಿಳಿಸಿದೆ.ಮುಖ್ಯಮಂತ್ರಿಯವರ ಆಪ್ತ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸುತ್ತಿದ್ದ ಡಾ. ವೆಂಕಟೇಶಯ್ಯ ಅವರನ್ನು ಮುಂದಿನ ಆದೇಶದವರೆಗೆ ಕೃಷಿ ಮಾರಾಟ ಇಲಾಖೆಯ ನಿರ್ದೇಶಕರಾಗಿ ನೇಮಕ ಮಾಡಲಾಗಿದೆ. ವಿಶೇಷ ಕರ್ತವ್ಯಾಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದ ರಮೇಶ್ ಪಿ. ಕೋನರೆಡ್ಡಿ ಅವರನ್ನು ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತ (ಕೆಪಿಟಿಸಿಎಲ್) ನಿರ್ದೇಶಕರಾಗಿ ವರ್ಗಾಯಿಸಲಾಗಿದೆ. ಅವರು ಕೆಪಿಟಿಸಿಎಲ್ ನಿರ್ದೇಶಕರಾಗಿದ್ದ ಕೆ.ಎ.ಎಸ್ (ಸೂಪರ್ ಟೈಂ ಸ್ಕೇಲ್) ಅಧಿಕಾರಿ ವಿಜಯ್ ಬಿ.ಪಿ. ಅವರ ಸ್ಥಾನಕ್ಕೆ ನೇಮಕಗೊಂಡಿದ್ದಾರೆ.
ಕೃಷಿ ಮಾರಾಟ ಇಲಾಖೆಯ ನಿರ್ದೇಶಕರಾಗಿ ಕಾರ್ಯನಿರ್ವಹಿಸುತ್ತಿದ್ದ ಭಾರತೀಯ ಆಡಳಿತ ಸೇವೆ (ಐಎಎಸ್) ಅಧಿಕಾರಿ ಪ್ರಸನ್ನ ಹೆಚ್. ಅವರ ಸ್ಥಾನಕ್ಕೆ ಡಾ. ವೆಂಕಟೇಶಯ್ಯ ಅವರನ್ನು ನಿಯೋಜಿಸಲಾಗಿದೆ ಎಂದು ಸರ್ಕಾರದ ಆದೇಶದಲ್ಲಿ ಉಲ್ಲೇಖಿಸಲಾಗಿದೆ.
ವಿಜಯ್ ಬಿ.ಪಿ. ಅವರನ್ನು ಮುಂದಿನ ಸ್ಥಳ ನಿಯುಕ್ತಿಗಾಗಿ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆಯಲ್ಲಿ ಕಾರ್ಯವರದಿ ಮಾಡಿಕೊಳ್ಳುವಂತೆ ಸರ್ಕಾರ ಸೂಚಿಸಿದೆ.