ಧರ್ಮಸ್ಥಳ ವಿರುದ್ಧ ₹200 ಕೋಟಿ ಷಡ್ಯಂತ್ರ ಆರೋಪ: ಚಿನ್ನಯ್ಯ ರಿಟ್ ಅರ್ಜಿ ಆಧರಿಸಿ SITಗೆ ಹೈಕೋರ್ಟ್ ನೋಟಿಸ್
ಧರ್ಮಸ್ಥಳದ ವಿರುದ್ಧ ವ್ಯವಸ್ಥಿತ ಷಡ್ಯಂತ್ರ ರೂಪಿಸಲು ಸುಮಾರು ₹200 ಕೋಟಿ ಮೊತ್ತದ ಬೃಹತ್ ಯೋಜನೆ ಸಿದ್ಧಪಡಿಸಲಾಗಿತ್ತು ಎಂಬ ವಿಷಯ ಹೊರಬಿದ್ದಿದೆ . ಪ್ರಕರಣದ ಆರೋಪಿ ಚಿನ್ನಯ್ಯ ಹೈಕೋರ್ಟ್‌ಗೆ ಸಲ್ಲಿಸಿರುವ ರಿಟ್ ಅರ್ಜಿಯಲ್ಲಿ ಹಲವು ಮಹತ್ವದ ಆರೋಪಗಳನ್ನು ಮಾಡಿದ್ದು, ಈ ಬೆಳವಣಿಗೆ ಹೊಸ ಚರ್ಚೆಗೆ ಕಾರಣವಾಗಿದೆ.
ಅರ್ಜಿಯಲ್ಲಿ ಚಿನ್ನಯ್ಯ, ಧರ್ಮಸ್ಥಳದ ವಿರುದ್ಧ ಹೋರಾಟ ನಡೆಸಲು ಕೇರಳದಿಂದ ದೊಡ್ಡ ಪ್ರಮಾಣದ ಹಣದ ಹರಿವು ನಡೆದಿದ್ದು, ಈ ಕಾರ್ಯಾಚರಣೆ ಯಶಸ್ವಿಯಾದರೆ ತನಗೆ ₹50 ಲಕ್ಷ ನೀಡುವುದಾಗಿ ಕೆಲವು ವ್ಯಕ್ತಿಗಳು ಆಮಿಷ ಒಡ್ಡಿದ್ದರು ಎಂದು ಆರೋಪಿಸಿದ್ದಾನೆ. ಈ ಸಂಚಿನ ಭಾಗವಾಗಿ ಮಹೇಶ್ ಶೆಟ್ಟಿ ತಿಮರೋಡಿ, ಗಿರೀಶ್ ಮಟ್ಟಣ್ಣವರ್, ವಿಠಲಗೌಡ ಹಾಗೂ ಜಯಂತ್ ಎಂಬವರ ಹೆಸರನ್ನು ಉಲ್ಲೇಖಿಸಿರುವುದಾಗಿ ತಿಳಿದುಬಂದಿದೆ.
ತಾನು ನಿಜವಾದ ಆರೋಪಿಗಳ ಹೆಸರುಗಳನ್ನು ತನಿಖಾ ಅಧಿಕಾರಿಗಳಿಗೆ ತಿಳಿಸಿದ್ದರೂ, ವಿಶೇಷ ತನಿಖಾ ತಂಡ (SIT) ಅವರ ವಿರುದ್ಧ ಯಾವುದೇ ಪರಿಣಾಮಕಾರಿ ಕ್ರಮ ಕೈಗೊಂಡಿಲ್ಲ ಎಂದು ಚಿನ್ನಯ್ಯ ತನ್ನ ಅರ್ಜಿಯಲ್ಲಿ ಅಸಮಾಧಾನ ವ್ಯಕ್ತಪಡಿಸಿದ್ದಾನೆ. ಪ್ರಕರಣದ ತನಿಖೆ ಯಾವ ಹಂತದಲ್ಲಿದೆ ಎಂಬ ಮಾಹಿತಿಯನ್ನು ನ್ಯಾಯಾಲಯದ ಮೂಲಕ ಪಡೆಯಲು ಆತ ಮನವಿ ಸಲ್ಲಿಸಿದ್ದಾನೆ.
ಇದಲ್ಲದೆ, ಅರ್ಜಿಯಲ್ಲಿ ‘ಪ್ರಕಾಶ್ ರಾಜ್’ ಎಂಬ ಹೆಸರಿನ ವ್ಯಕ್ತಿಯ ಉಲ್ಲೇಖವೂ ಕುತೂಹಲಕ್ಕೆ ಕಾರಣವಾಗಿದೆ. ತನ್ನೊಂದಿಗೆ ತಮಿಳಿನಲ್ಲಿ ಮಾತನಾಡಿದ್ದ ಈ ವ್ಯಕ್ತಿ, “ಬುರುಡೆ ಗ್ಯಾಂಗ್ ಹೇಳಿದಂತೆ ನಡೆದುಕೊಂಡರೆ ನಿನ್ನನ್ನು ನಾನು ಅಪ್ಪಿಕೊಳ್ಳುತ್ತೇನೆ. ಜೂನ್ 29ರಂದು ಬಂದು ನಿನ್ನನ್ನು ಭೇಟಿ ಮಾಡುತ್ತೇನೆ” ಎಂದು ಹೇಳಿದ್ದಾನೆ ಎಂದು ಚಿನ್ನಯ್ಯ ಆರೋಪಿಸಿದ್ದಾನೆ. ಆದರೆ ಈ ‘ಪ್ರಕಾಶ್ ರಾಜ್’ ಯಾರು, ಪ್ರಕರಣದೊಂದಿಗೆ ಅವರ ಸಂಬಂಧ ಏನು ಎಂಬುದನ್ನು ಅರ್ಜಿಯಲ್ಲಿ ಸ್ಪಷ್ಟಪಡಿಸಿಲ್ಲ.
ಚಿನ್ನಯ್ಯ ಸಲ್ಲಿಸಿರುವ ಅರ್ಜಿಯನ್ನು ಗಂಭೀರವಾಗಿ ಪರಿಗಣಿಸಿರುವ ಹೈಕೋರ್ಟ್, ಪ್ರಕರಣದ ತನಿಖೆಯ ಪ್ರಗತಿ ಮತ್ತು ಸದ್ಯದ ಸ್ಥಿತಿಗತಿ ಕುರಿತು ಮಾಹಿತಿ ನೀಡುವಂತೆ ರಾಜ್ಯ ಸರ್ಕಾರ ಹಾಗೂ SITಗೆ ನೋಟಿಸ್ ಜಾರಿ ಮಾಡಿದೆ. ಜೊತೆಗೆ ಪ್ರಕರಣದ ಮುಂದಿನ ವಿಚಾರಣೆಯನ್ನು ಜೂನ್ 29ಕ್ಕೆ ನಿಗದಿಪಡಿಸಿದೆ.