ನೀಟ್ ಮರುಪರೀಕ್ಷೆ ಹಿನ್ನೆಲೆ: ಜೂ.22ರವರೆಗೆ ದೇಶಾದ್ಯಂತ ಟೆಲಿಗ್ರಾಂ ತಾತ್ಕಾಲಿಕ ನಿಷೇಧ
ದೇಶದಲ್ಲಿ ಭಾರೀ ಚರ್ಚೆಗೆ ಕಾರಣವಾಗಿರುವ ರಾಷ್ಟ್ರೀಯ ಅರ್ಹತಾ ಹಾಗೂ ಪ್ರವೇಶ ಪರೀಕ್ಷೆ (NEET) ಮರುಪರೀಕ್ಷೆಗೆ ಮುನ್ನ ಕೇಂದ್ರ ಸರ್ಕಾರ ಮಹತ್ವದ ಹಾಗೂ ಕಟ್ಟುನಿಟ್ಟಿನ ಕ್ರಮ ಕೈಗೊಂಡಿದೆ. ಪ್ರಶ್ನೆಪತ್ರಿಕೆ ಸೋರಿಕೆ, ನಕಲಿ ಸಾಕ್ಷ್ಯಗಳ ಸೃಷ್ಟಿ ಹಾಗೂ ಸಾಮಾಜಿಕ ಮಾಧ್ಯಮಗಳ ದುರ್ಬಳಕೆಯನ್ನು ತಡೆಯುವ ಉದ್ದೇಶದಿಂದ ಜೂನ್ 22ರವರೆಗೆ ದೇಶಾದ್ಯಂತ ಜನಪ್ರಿಯ ಮೆಸೇಜಿಂಗ್ ಆಪ್ ‘ಟೆಲಿಗ್ರಾಂ’ ಅನ್ನು ತಾತ್ಕಾಲಿಕವಾಗಿ ನಿಷೇಧಿಸಿ ಆದೇಶ ಹೊರಡಿಸಲಾಗಿದೆ.
ರಾಷ್ಟ್ರೀಯ ಪರೀಕ್ಷಾ ಸಂಸ್ಥೆ ನೀಡಿದ ತುರ್ತು ಶಿಫಾರಸಿನ ಮೇರೆಗೆ ಕೇಂದ್ರ ಮಾಹಿತಿ ತಂತ್ರಜ್ಞಾನ ಮತ್ತು ಸಂವಹನ ಸಚಿವಾಲಯವು ಮಾಹಿತಿ ತಂತ್ರಜ್ಞಾನ ಕಾಯ್ದೆಯ ಸೆಕ್ಷನ್ 69A ಅಡಿಯಲ್ಲಿ ಈ ಕ್ರಮ ಜಾರಿಗೊಳಿಸಿದೆ ಎಂದು ತಿಳಿದುಬಂದಿದೆ.
ಕೇವಲ ಟೆಲಿಗ್ರಾಂ ಸೇವೆಯ ತಾತ್ಕಾಲಿಕ ನಿರ್ಬಂಧವಷ್ಟೇ ಅಲ್ಲದೆ, ಜೂನ್ 30ರವರೆಗೆ ಅದರ ಪ್ರಮುಖ ವೈಶಿಷ್ಟ್ಯವಾದ ‘ಮೆಸೇಜ್ ಎಡಿಟಿಂಗ್’ ಸೌಲಭ್ಯವನ್ನು ಸಂಪೂರ್ಣ ಸ್ಥಗಿತಗೊಳಿಸುವಂತೆ ಸೂಚಿಸಲಾಗಿದೆ. ಈಗಾಗಲೇ ಪ್ರಕಟಗೊಂಡಿರುವ ಸಂದೇಶಗಳನ್ನು ನಂತರ ಸಂಪಾದಿಸಿ “ಪ್ರಶ್ನೆಪತ್ರಿಕೆ ಮೊದಲೇ ಸೋರಿಕೆಯಾಗಿದೆ” ಎಂಬ ರೀತಿಯ ನಕಲಿ ಸಾಕ್ಷ್ಯಗಳನ್ನು ಸೃಷ್ಟಿಸುವ ಮೂಲಕ ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರಲ್ಲಿ ಗೊಂದಲ ಉಂಟುಮಾಡುವ ಖಾಸಗಿ ಜಾಲಗಳಿಗೆ ಕಡಿವಾಣ ಹಾಕುವ ಉದ್ದೇಶದಿಂದ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಮೂಲಗಳು ತಿಳಿಸಿವೆ.
ಕಳೆದ ಕೆಲವು ವಾರಗಳಿಂದ ಟೆಲಿಗ್ರಾಂನಲ್ಲಿ ‘Paper Leaked NEET’, ‘Re-NEET 2026’, ‘Private Mafia’ ಹಾಗೂ ‘REE NEET MAFIAA’ ಎಂಬ ಹೆಸರಿನ ಹಲವು ಚಾನೆಲ್‌ಗಳು ಬಹಿರಂಗವಾಗಿ ಕಾರ್ಯನಿರ್ವಹಿಸುತ್ತಿದ್ದು, ಅವು ವಿದ್ಯಾರ್ಥಿಗಳು ಮತ್ತು ಪೋಷಕರನ್ನು ದಾರಿ ತಪ್ಪಿಸುವ ರೀತಿಯ ಮಾಹಿತಿ ಹರಡುತ್ತಿವೆ ಎಂಬ ಆರೋಪಗಳು ಕೇಳಿಬಂದಿದ್ದವು. ಈ ಕುರಿತು ಎನ್‌ಟಿಎ ಮತ್ತು ಶಿಕ್ಷಣ ಸಚಿವಾಲಯವು ಸರ್ಕಾರಕ್ಕೆ ಸೂಕ್ತ ಸಾಕ್ಷ್ಯಾಧಾರಗಳನ್ನು ಸಲ್ಲಿಸಿ ಕ್ರಮಕ್ಕೆ ಮನವಿ ಮಾಡಿದ್ದವು ಎಂದು ತಿಳಿದುಬಂದಿದೆ.
ದೇಶದ ಅತಿದೊಡ್ಡ ವೈದ್ಯಕೀಯ ಪ್ರವೇಶ ಪರೀಕ್ಷೆಯಾದ ನೀಟ್‌ನ ಪಾರದರ್ಶಕತೆ ಮತ್ತು ವಿಶ್ವಾಸಾರ್ಹತೆಯನ್ನು ಕಾಪಾಡುವ ಉದ್ದೇಶದಿಂದ ಕೇಂದ್ರ ಸರ್ಕಾರ ಈ ಮಹತ್ವದ ಆದೇಶ ಜಾರಿಗೊಳಿಸಿದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.