36 ವರ್ಷಗಳಿಂದ ತಲೆಮರೆಸಿಕೊಂಡಿದ್ದ ವಾರಂಟ್ ಆರೋಪಿ ಬಂಧನ
ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ 1990ರಲ್ಲಿ ದಾಖಲಾಗಿದ್ದ ಪ್ರಕರಣದಲ್ಲಿ ಭಾಗಿಯಾಗಿದ್ದು, ಸುಮಾರು 36 ವರ್ಷಗಳಿಂದ ನ್ಯಾಯಾಲಯಕ್ಕೆ ಹಾಜರಾಗದೇ ತಲೆಮರೆಸಿಕೊಂಡಿದ್ದ ಎಲ್‌ಪಿಸಿ ವಾರಂಟ್ ಆರೋಪಿ ನೂರುಲ್ಲ (66) ಎಂಬಾತನನ್ನು ಉಡುಪಿ ನಗರ ಪೊಲೀಸರು ಬಂಧಿಸಿದ್ದಾರೆ.
1990ರ ಜೂನ್ 21ರಂದು ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಕರ್ನಾಟಕ ಅರಣ್ಯ ಕಾಯ್ದೆಯಡಿ ಪ್ರಕರಣ ದಾಖಲಾಗಿತ್ತು. ಪ್ರಕರಣದ ಆರೋಪಿ ಹಾವೇರಿ ಜಿಲ್ಲೆಯ ಹಿರೇಕೆರೂರು ತಾಲೂಕಿನ ನೂರುಲ್ಲನನ್ನು 1990ರ ಜೂನ್ 22ರಂದು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿತ್ತು. ಬಳಿಕ ನ್ಯಾಯಾಲಯವು ಜುಲೈ 6ರವರೆಗೆ ನ್ಯಾಯಾಂಗ ಬಂಧನ ವಿಧಿಸಿತ್ತು.
ನಂತರ ಆರೋಪಿ ಜಾಮೀನು ಪಡೆದು ಬಿಡುಗಡೆಯಾದ ಬಳಿಕ ನ್ಯಾಯಾಲಯಕ್ಕೆ ಹಾಜರಾಗದೇ ತಲೆಮರೆಸಿಕೊಂಡಿದ್ದ. ಈ ಹಿನ್ನೆಲೆಯಲ್ಲಿ ಆತನ ವಿರುದ್ಧ ಎಲ್‌ಪಿಸಿ ವಾರಂಟ್ ಜಾರಿಗೊಳಿಸಲಾಗಿತ್ತು.
ಉಡುಪಿ ನಗರ ಠಾಣೆಯ ಪ್ರಭಾರ ನಿರೀಕ್ಷಕ ಮಹೇಶ್ ಪ್ರಸಾದ್ ಅವರ ಮಾರ್ಗದರ್ಶನದಲ್ಲಿ, ಪಿಎಸ್‌ಐಗಳಾದ ಭರತೇಶ ಕಂಕಣವಾಡಿ, ಈರಣ್ಣ ಶಿರಗುಂಪಿ, ರತ್ನಾಕರ ಕೆ. ಹಾಗೂ ಸಿಬ್ಬಂದಿಗಳಾದ ಪ್ರಸನ್ನ ಸಿ., ಜೀವನ್ ಕುಮಾರ್ ಮತ್ತು ಹೇಮಂತ್ ಕುಮಾರ್ ಅವರನ್ನೊಳಗೊಂಡ ಪೊಲೀಸ್ ತಂಡ ಕಾರ್ಯಾಚರಣೆ ನಡೆಸಿತು. ಹಾವೇರಿ ಜಿಲ್ಲೆಯ ಹಿರೇಕೆರೂರು ತಾಲೂಕಿನ ನಿಟ್ಟೂರು ಗ್ರಾಮದಲ್ಲಿ ಆರೋಪಿಯನ್ನು ಪತ್ತೆಹಚ್ಚಿ ಬಂಧಿಸಲಾಯಿತು.
ಬಂಧಿತ ಆರೋಪಿಯನ್ನು ನ್ಯಾಯಾಧೀಶರ ಮುಂದೆ ಹಾಜರುಪಡಿಸಲಾಗಿದ್ದು, ನ್ಯಾಯಾಲಯವು ಆರೋಪಿಗೆ ನ್ಯಾಯಾಂಗ ಬಂಧನ ವಿಧಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆ.