-->
ಉಡುಪಿ: ರಾ.ಹೆ ಕಾಮಗಾರಿಗಳ ಪರಿಶೀಲನೆ: ಅಗತ್ಯ ಅಭಿವೃದ್ಧಿ ಕಾರ್ಯಗಳಿಗೆ ಶಾಸಕ ಯಶ್ಪಾಲ್ ಸೂಚನೆ

ಉಡುಪಿ: ರಾ.ಹೆ ಕಾಮಗಾರಿಗಳ ಪರಿಶೀಲನೆ: ಅಗತ್ಯ ಅಭಿವೃದ್ಧಿ ಕಾರ್ಯಗಳಿಗೆ ಶಾಸಕ ಯಶ್ಪಾಲ್ ಸೂಚನೆ


ರಾಷ್ಟ್ರೀಯ ಹೆದ್ದಾರಿ 169Aರ ಉಡುಪಿ ಕರಾವಳಿ ಬೈಪಾಸ್‌ನಿಂದ ಮಣಿಪಾಲ ಸಿಂಡಿಕೇಟ್ ಸರ್ಕಲ್‌ವರೆಗೆ ಕೈಗೊಳ್ಳಬೇಕಾದ ವಿವಿಧ ಅಭಿವೃದ್ಧಿ ಕಾಮಗಾರಿಗಳ ಕುರಿತು ಶಾಸಕ ಯಶ್ ಪಾಲ್ ಸುವರ್ಣ ಅವರು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಹಾಗೂ ಉಡುಪಿ ನಗರಸಭೆ ಅಧಿಕಾರಿಗಳೊಂದಿಗೆ ಸ್ಥಳ ಪರಿಶೀಲನೆ ನಡೆಸಿದರು.


ಪರಿಶೀಲನೆ ವೇಳೆ ಕರಾವಳಿ ಜಂಕ್ಷನ್‌ನಿಂದ ಬನ್ನಂಜೆ ನಾರಾಯಣ ಗುರು ಸರ್ಕಲ್‌ವರೆಗೆ ರಸ್ತೆಯ ಎರಡೂ ಬದಿಗಳಲ್ಲಿ ಚರಂಡಿ ನಿರ್ಮಾಣ, ಬನ್ನಂಜೆ ಜಂಕ್ಷನ್ ಅಭಿವೃದ್ಧಿ, ಇಂಟರ್‌ಲಾಕ್ ಮರು ಅಳವಡಿಕೆ, ಕಡಿಯಾಳಿ–ಕುಂಜಿಬೆಟ್ಟು ಪ್ರದೇಶದಲ್ಲಿ ಚರಂಡಿ ನಿರ್ಮಾಣ, ಶಾರದಾ ಕಲ್ಯಾಣ ಮಂಟಪ ಜಂಕ್ಷನ್ ಅಭಿವೃದ್ಧಿ ಸೇರಿದಂತೆ ಹಲವು ಕಾಮಗಾರಿಗಳ ಅಗತ್ಯತೆಯನ್ನು ಅಧಿಕಾರಿಗಳ ಗಮನಕ್ಕೆ ತಂದರು.


ಅಲ್ಲದೆ ಎಂ.ಜಿ.ಎಂ. ಕಾಲೇಜು ಬಳಿಯಿಂದ ಇಂದ್ರಾಳಿ ರೈಲ್ವೆ ನಿಲ್ದಾಣ ರಸ್ತೆಯವರೆಗೆ ಇಂಟರ್‌ಲಾಕ್ ಅಳವಡಿಕೆ, ಲಕ್ಷ್ಮೀಂದ್ರನಗರದಲ್ಲಿ ವ್ಯವಸ್ಥಿತ ಚರಂಡಿ ನಿರ್ಮಾಣ, ಇಂದ್ರಾಳಿ ಸೇತುವೆ ಸಮೀಪ ಶಾಲೆಗೆ ಸಂಪರ್ಕ ಕಲ್ಪಿಸುವ ಸರ್ವಿಸ್ ರಸ್ತೆ ನಿರ್ಮಾಣ ಹಾಗೂ ಅಗತ್ಯ ಸ್ಥಳಗಳಲ್ಲಿ ಬಸ್ ಶೆಲ್ಟರ್ ನಿರ್ಮಾಣಕ್ಕೆ ತಕ್ಷಣ ಅಂದಾಜು ಪಟ್ಟಿ ತಯಾರಿಸಿ ಪ್ರಸ್ತಾವನೆ ಸಲ್ಲಿಸುವಂತೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳಿಗೆ ಸೂಚಿಸಿದರು.

ಉಡುಪಿ ನಗರಸಭೆಯ ಮೂಲಕ ಈಗಾಗಲೇ ಮಂಜೂರಾಗಿರುವ ಎಂ.ಜಿ.ಎಂ. ಕಾಲೇಜು ಮುಂಭಾಗ ಹಾಗೂ ಇಂದ್ರಾಳಿ ರೈಲ್ವೆ ಮೇಲ್ಸೇತುವೆ ಸಮೀಪ ಪಾದಚಾರಿ ಮೇಲ್ಸೇತುವೆ ನಿರ್ಮಾಣ ಕಾಮಗಾರಿಯನ್ನು ಶೀಘ್ರ ಆರಂಭಿಸುವಂತೆ ನಗರಸಭೆ ಪೌರಾಯುಕ್ತರಿಗೆ ನಿರ್ದೇಶನ ನೀಡಿದರು.

ಪರಿಶೀಲನಾ ಸಭೆಯಲ್ಲಿ ಉಡುಪಿ ನಗರಸಭೆಯ ಮಾಜಿ ಅಧ್ಯಕ್ಷ ಪ್ರಭಾಕರ ಪೂಜಾರಿ, ಮಾಜಿ ಸದಸ್ಯ ಹರೀಶ್ ರಾಮ್ ಬನ್ನಂಜೆ, ಬಾಲಕೃಷ್ಣ ಶೆಟ್ಟಿ ನಿಟ್ಟೂರು, ಗಿರೀಶ್ ಅಂಚನ್, ಟಿ.ಜಿ. ಹೆಗ್ಡೆ, ಸ್ಥಳೀಯ ಮುಖಂಡರಾದ ಸತೀಶ್ ಕುಲಾಲ್ ಕಡಿಯಾಳಿ, ಸತೀಶ್ ಭಾಗವತ್, ಧನ್ಯವಂತ ಪ್ರಭು ಬನ್ನಂಜೆ, ನಗರಸಭೆ ಪೌರಾಯುಕ್ತ ಮಹಾಂತೇಶ ಹಂಗರಗಿ, ಇಂಜಿನಿಯರ್ ಕಾರ್ತಿಕ್ ಹಾಗೂ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳಾದ ಮಂಜನ್ ಗೌಡ, ನವೀನ್ ರಾಜ್ ಮತ್ತು ಶಶಿಧರ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.

Ads on article

Advertise in articles 1

advertising articles 2

Advertise under the article