-->
ಬೈಂದೂರು ವ್ಯಾಪ್ತಿಯ ಪ್ರೌಢಶಾಲಾ ಮುಖ್ಯೋಪಾಧ್ಯಾಯರ ಸಮಾಲೋಚನಾ ಸಭೆ

ಬೈಂದೂರು ವ್ಯಾಪ್ತಿಯ ಪ್ರೌಢಶಾಲಾ ಮುಖ್ಯೋಪಾಧ್ಯಾಯರ ಸಮಾಲೋಚನಾ ಸಭೆ


ಉಡುಪಿ ಯಕ್ಷಶಿಕ್ಷಣ ಟ್ರಸ್ಟ್ ವತಿಯಿಂದ ಬೈಂದೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಪ್ರೌಢಶಾಲಾ ಮುಖ್ಯೋಪಾಧ್ಯಾಯರ ಸಮಾಲೋಚನಾ ಸಭೆಯು ಶಾಸಕ ಗುರುರಾಜ ಗಂಟಿಹೊಳೆ ಅವರ ಅಧ್ಯಕ್ಷತೆಯಲ್ಲಿ ಕುಂದಾಪುರ ತಾಲೂಕು ಪಂಚಾಯತ್ ಸಭಾಂಗಣದಲ್ಲಿ ನಡೆಯಿತು.


ಸಭೆಯಲ್ಲಿ ಮಾತನಾಡಿದ ಯಕ್ಷ ಶಿಕ್ಷಣ ಟ್ರಸ್ಟ್‌ನ ಕಾರ್ಯದರ್ಶಿ ಮುರಲಿ ಕಡೆಕಾರ್, ಉಡುಪಿ ಜಿಲ್ಲೆಯ ನಾಲ್ಕು ವಿಧಾನಸಭಾ ಕ್ಷೇತ್ರಗಳ ವ್ಯಾಪ್ತಿಯ ಪ್ರೌಢಶಾಲೆಗಳಲ್ಲಿ ನಡೆಯುತ್ತಿರುವ ಯಕ್ಷಶಿಕ್ಷಣ ತರಬೇತಿಯ ಸ್ವರೂಪ ಹಾಗೂ ಶಾಲೆಗಳಲ್ಲಿ ಅದರ ಪರಿಣಾಮಕಾರಿ ಅನುಷ್ಠಾನಕ್ಕಾಗಿ ಮುಖ್ಯೋಪಾಧ್ಯಾಯರು ಗಮನಿಸಬೇಕಾದ ಅಂಶಗಳ ಕುರಿತು ಮಾಹಿತಿ ನೀಡಿದರು. ಯಕ್ಷಶಿಕ್ಷಣವು ವಿದ್ಯಾರ್ಥಿಗಳ ಕಲಿಕೆ, ವ್ಯಕ್ತಿತ್ವ ವಿಕಸನ ಹಾಗೂ ಸಾಂಸ್ಕೃತಿಕ ಅರಿವಿಗೆ ಪೂರಕವಾಗಿರುವ ಮಹತ್ವದ ಕಾರ್ಯಕ್ರಮವಾಗಿದ್ದು, ಶಿಕ್ಷಣದ ಜೊತೆಗೆ ಸಂಸ್ಕೃತಿಯ ಮೌಲ್ಯಗಳನ್ನು ಬೆಳೆಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತಿದೆ ಎಂದು ಹೇಳಿದರು.

ಅಧ್ಯಕ್ಷತೆ ವಹಿಸಿ ಮಾತನಾಡಿದ ಶಾಸಕ ಗುರುರಾಜ ಗಂಟಿಹೊಳೆ, ಯಕ್ಷಗಾನ ಕಲಾರಂಗದ ಸಮಾಜಮುಖಿ ಕಾರ್ಯಗಳನ್ನು ಶ್ಲಾಘಿಸಿದರು. ಯಕ್ಷಶಿಕ್ಷಣ ಟ್ರಸ್ಟ್‌ನ ಉದ್ದೇಶಗಳು ಯಶಸ್ವಿಯಾಗಲು ಶಾಲಾ ಮುಖ್ಯೋಪಾಧ್ಯಾಯರು ಹಾಗೂ ಶಿಕ್ಷಕರ ಸಕ್ರಿಯ ಸಹಭಾಗಿತ್ವ ಅತ್ಯಂತ ಅಗತ್ಯವಾಗಿದೆ ಎಂದು ಅವರು ಅಭಿಪ್ರಾಯಪಟ್ಟರು.

ಸಭೆಯಲ್ಲಿ ಕುಂದಾಪುರ ಕ್ಷೇತ್ರ ಶಿಕ್ಷಣಾಧಿಕಾರಿ ಶೋಭಾ ಶೆಟ್ಟಿ, ಯಕ್ಷಶಿಕ್ಷಣ ಟ್ರಸ್ಟ್‌ನ ಟ್ರಸ್ಟಿ ನಾರಾಯಣ ಹೆಗಡೆ ಉಪಸ್ಥಿತರಿದ್ದರು.

ಬೈಂದೂರು ಕ್ಷೇತ್ರ ಶಿಕ್ಷಣಾಧಿಕಾರಿ ನಾಗೇಶ ನಾಯಕ ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. 

ಈ ಶೈಕ್ಷಣಿಕ ವರ್ಷದಲ್ಲಿ ಬೈಂದೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ 19 ಪ್ರೌಢಶಾಲೆಗಳಲ್ಲಿ ಯಕ್ಷಶಿಕ್ಷಣ ತರಬೇತಿ ಕಾರ್ಯಕ್ರಮವನ್ನು ನಡೆಸಲು ಯೋಜಿಸಲಾಗಿದೆ ಎಂದು ಸಭೆಯಲ್ಲಿ ತಿಳಿಸಲಾಯಿತು. ಯಕ್ಷಗಾನ ಕಲೆಯ ಸಂರಕ್ಷಣೆ ಹಾಗೂ ವಿದ್ಯಾರ್ಥಿಗಳಲ್ಲಿ ಸಾಂಸ್ಕೃತಿಕ ಮೌಲ್ಯಗಳ ಬೆಳೆಸುವ ನಿಟ್ಟಿನಲ್ಲಿ ಈ ಯೋಜನೆ ಮಹತ್ವದ ಹೆಜ್ಜೆಯಾಗಿದೆ ಎಂದು ಅಭಿಪ್ರಾಯ ವ್ಯಕ್ತವಾಯಿತು.

Ads on article

Advertise in articles 1

advertising articles 2

Advertise under the article