ವಿದ್ಯುತ್ ಖಾಸಗೀಕರಣ ವಿರೋಧ: ಸಿಐಟಿಯು ನೇತೃತ್ವದಲ್ಲಿ ಮೆಸ್ಕಾಂಗೆ ಮನವಿ
Tuesday, June 23, 2026
ವಿದ್ಯುತ್ ಕ್ಷೇತ್ರದ ಖಾಸಗೀಕರಣವನ್ನು ವಿರೋಧಿಸಿ ಹಾಗೂ ಟಾಟಾ ಕಂಪನಿಗೆ ವಿದ್ಯುತ್ ವಿತರಣಾ ಲೈಸನ್ಸ್ ನೀಡಬಾರದು ಎಂದು ಆಗ್ರಹಿಸಿ ಸಿಐಟಿಯು (ಸೆಂಟರ್ ಆಫ್ ಇಂಡಿಯನ್ ಟ್ರೇಡ್ ಯೂನಿಯನ್ಸ್) ಉಡುಪಿ ವಲಯ ಸಮಿತಿಯ ನೇತೃತ್ವದಲ್ಲಿ ಇಂದು ಉಡುಪಿಯ ಮೆಸ್ಕಾಂ ಕಚೇರಿಗೆ ಮನವಿ ಸಲ್ಲಿಸಲಾಯಿತು.
ಕರ್ನಾಟಕ ವಿದ್ಯುತ್ ನಿಯಂತ್ರಣ ಆಯೋಗದ ಕಾರ್ಯದರ್ಶಿಗಳಿಗೆ ಉದ್ದೇಶಿಸಿ ಸಲ್ಲಿಸಲಾದ ಆಕ್ಷೇಪಣಾ ಪತ್ರವನ್ನು ಮೆಸ್ಕಾಂ ಸಹಾಯಕ ಇಂಜಿನಿಯರ್ (A.E) ಅವರ ಮೂಲಕ ನೀಡಲಾಯಿತು. ಮನವಿಯನ್ನು ಸಿಐಟಿಯು ಉಡುಪಿ ವಲಯ ಸಮಿತಿ, ಉಡುಪಿ ಜಿಲ್ಲಾ ಕಟ್ಟಡ ಮತ್ತು ನಿರ್ಮಾಣ ಕಾರ್ಮಿಕರ ಸಂಘ, ಕಾರ್ಕಳ ತಾಲೂಕು ಬೀಡಿ ಕಾರ್ಮಿಕರ ಸಂಘ, ಉಡುಪಿ ಜಿಲ್ಲಾ ಜನರಲ್ ವರ್ಕ್ಸ್ ಯೂನಿಯನ್ ಹಾಗೂ ಬೀಡಿ ಎಂಡ್ ಟೋಬ್ಯಾಕೊ ಲೇಬರ್ ಯೂನಿಯನ್ ವತಿಯಿಂದ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಮುಖಂಡರು, ವಿದ್ಯುತ್ ವಿತರಣಾ ಕ್ಷೇತ್ರದ ಖಾಸಗೀಕರಣದಿಂದ ಸಾರ್ವಜನಿಕ ಹಿತಾಸಕ್ತಿ ಹಾಗೂ ಕಾರ್ಮಿಕರ ಹಕ್ಕುಗಳಿಗೆ ಧಕ್ಕೆಯಾಗುವ ಸಾಧ್ಯತೆ ಇದೆ ಎಂದು ಅಭಿಪ್ರಾಯಪಟ್ಟರು. ಅಲ್ಲದೆ, ರಾಜ್ಯದ ವಿದ್ಯುತ್ ವಿತರಣಾ ವ್ಯವಸ್ಥೆಯನ್ನು ಖಾಸಗಿ ಕಂಪನಿಗಳಿಗೆ ಹಸ್ತಾಂತರಿಸುವ ಯಾವುದೇ ಕ್ರಮವನ್ನು ಕೈಬಿಡಬೇಕು ಎಂದು ಒತ್ತಾಯಿಸಿದರು.
ಮನವಿ ಸಲ್ಲಿಸಿದ ನಿಯೋಗದಲ್ಲಿ ಸಿಐಟಿಯು ಉಡುಪಿ ವಲಯ ಸಂಚಾಲಕ ಕವಿರಾಜ್ ಎಸ್. ಕಾಂಚನ್, ಉಡುಪಿ ಜಿಲ್ಲಾ ಕಟ್ಟಡ ಮತ್ತು ನಿರ್ಮಾಣ ಕಾರ್ಮಿಕರ ಸಂಘದ ಅಧ್ಯಕ್ಷ ಸುಭಾಷ್ ಚಂದ್ರ ನಾಯಕ್, ಪ್ರಧಾನ ಕಾರ್ಯದರ್ಶಿ ಶಶಿಧರ್ ಗೊಲ್ಲ, ದಲಿತ ಹಕ್ಕುಗಳ ಸಮಿತಿ ಜಿಲ್ಲಾ ಅಧ್ಯಕ್ಷ ಸಂಜೀವ ಬಲ್ಕೂರು ಹಾಗೂ ಸಂಘಗಳ ಮುಖಂಡರಾದ ಉಮೇಶ್ ಕುಂದರ್, ಸುನೀತಾ ಶೆಟ್ಟಿ, ನಳಿನಿ ಎಸ್., ಸರೋಜ ಎಸ್., ಸಾರಿಕಾ, ಶಾರದ, ಶರ್ಮಿಳಾ, ರಂಗನಾಥ, ಸೀತಾರಾಮ್ ನಾಯಕ್, ರತ್ನಾಕರ್ ಶೆಟ್ಟಿಗಾರ್, ಜಯ ನಾಯಕ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.
