ಕರಾವಳಿಗೆ 7 ದಿನ ಆರೆಂಜ್ ಅಲರ್ಟ್: ಅಗತ್ಯ ಮುನ್ನೆಚ್ಚರಿಕೆ ವಹಿಸಲು ಜಿಲ್ಲಾಡಳಿತ ಮನವಿ
ಕರಾವಳಿ ಭಾಗದಲ್ಲಿ ನಾಳೆಯಿಂದ ಭಾರೀ ಮಳೆ ಸುರಿಯಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಹಾಗೂ ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ ಮುನ್ಸೂಚನೆ ನೀಡಿದೆ. ಹಾಗಾಗಿ ಕರಾವಳಿ ಭಾಗದಲ್ಲಿ ಜೂನ್ 30ರಿಂದ ಜುಲೈ 6ರವರೆಗೆ ಆರೆಂಜ್ ಅಲರ್ಟ್ ಘೋಷಿಸಲಾಗಿದೆ.
ಈ ಅವಧಿಯಲ್ಲಿ ಜಿಲ್ಲೆಯಾದ್ಯಂತ ಬಿರುಗಾಳಿ ಸಹಿತ ಭಾರೀ ಮಳೆಯಾಗುವ ಸಾಧ್ಯತೆ ಇರುವುದರಿಂದ ಸಾರ್ವಜನಿಕರು ಎಚ್ಚರಿಕೆ ವಹಿಸುವಂತೆ ಉಡುಪಿ ಜಿಲ್ಲಾಡಳಿತ ಮನವಿ ಮಾಡಿದೆ. ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರವು ಸಾರ್ವಜನಿಕರು, ಮಕ್ಕಳು, ಕಾರ್ಮಿಕರು, ರೈತರು, ಪ್ರವಾಸಿಗರು ಹಾಗೂ ಮೀನುಗಾರರಿಗೆ ಅಗತ್ಯ ಮುನ್ನೆಚ್ಚರಿಕಾ ಕ್ರಮಗಳನ್ನು ಪಾಲಿಸುವಂತೆ ಸೂಚಿಸಿದೆ. ಮಳೆ, ಗಾಳಿ ಹಾಗೂ ಸಿಡಿಲಿನ ಸಂದರ್ಭದಲ್ಲಿ ಹೊರಗಡೆ ಓಡಾಟ ಮಾಡದೆ ಸುರಕ್ಷಿತ ಕಟ್ಟಡಗಳಲ್ಲಿ ಆಶ್ರಯ ಪಡೆಯಬೇಕು. ರೈತರು ಸಿಡಿಲು ಹಾಗೂ ಭಾರೀ ಮಳೆಯ ಸಮಯದಲ್ಲಿ ಕೃಷಿ ಚಟುವಟಿಕೆಗಳಿಂದ ದೂರವಿರಬೇಕು. ನದಿ, ಹೊಳೆ, ಕೆರೆ ಹಾಗೂ ಸಮುದ್ರ ತೀರ ಪ್ರದೇಶಗಳಿಗೆ ಸಾರ್ವಜನಿಕರು ಮತ್ತು ಪ್ರವಾಸಿಗರು ತೆರಳದಂತೆ ಎಚ್ಚರಿಕೆ ನೀಡಲಾಗಿದೆ. ಮೀನುಗಾರರು ಸಮುದ್ರಕ್ಕೆ ಇಳಿಯಬಾರದು ಎಂದು ಸೂಚಿಸಲಾಗಿದೆ.
ಮಕ್ಕಳು ಹಾಗೂ ಸಾರ್ವಜನಿಕರು ಅಪಾಯಕಾರಿ ಮರಗಳು, ವಿದ್ಯುತ್ ಕಂಬಗಳು ಹಾಗೂ ತುಂಡಾದ ವಿದ್ಯುತ್ ತಂತಿಗಳ ಸಮೀಪ ಹೋಗಬಾರದು. ಹಳೆಯ ಅಥವಾ ದುರ್ಬಲ ಕಟ್ಟಡಗಳು ಹಾಗೂ ಮರಗಳ ಕೆಳಗೆ ಆಶ್ರಯ ಪಡೆಯುವುದನ್ನು ತಪ್ಪಿಸಬೇಕು. ಕಟ್ಟಡಗಳ ಮೇಲಿರುವ ಅಪಾಯಕಾರಿ ಕೊಂಬೆಗಳನ್ನು ಮುಂಚಿತವಾಗಿ ತೆರವುಗೊಳಿಸಿಕೊಳ್ಳುವಂತೆ ಸಲಹೆ ನೀಡಲಾಗಿದೆ.
ನಿರಂತರ ಮಳೆಯಿಂದ ಭೂಕುಸಿತ ಸಂಭವಿಸುವ ಪ್ರದೇಶಗಳಲ್ಲಿ ವಾಸಿಸುವವರು ತಹಶೀಲ್ದಾರರ ಕಚೇರಿ ಅಥವಾ ಗ್ರಾಮ ಪಂಚಾಯತ್ ಅಧಿಕಾರಿಗಳನ್ನು ಸಂಪರ್ಕಿಸಿ ಅಗತ್ಯವಿದ್ದಲ್ಲಿ ಮುಂಚಿತವಾಗಿಯೇ ಕಾಳಜಿ ಕೇಂದ್ರಗಳಿಗೆ ಸ್ಥಳಾಂತರಗೊಳ್ಳುವಂತೆ ಸೂಚಿಸಲಾಗಿದೆ. ದುರ್ಬಲ ಮನೆಗಳಲ್ಲಿ ವಾಸಿಸುವವರೂ ಸುರಕ್ಷತೆಯ ದೃಷ್ಟಿಯಿಂದ ಕಾಳಜಿ ಕೇಂದ್ರಗಳಲ್ಲಿ ಆಶ್ರಯ ಪಡೆಯಬಹುದು.
ಜಿಲ್ಲಾ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳು, ನೋಡಲ್ ಅಧಿಕಾರಿಗಳು ಮತ್ತು ಸ್ಥಳೀಯ ಸಂಸ್ಥೆಗಳ ವಿಪತ್ತು ನಿರ್ವಹಣಾ ಸಮಿತಿಯ ಸದಸ್ಯರು ತುರ್ತು ಪರಿಸ್ಥಿತಿಯನ್ನು ಎದುರಿಸಲು ಸನ್ನದ್ಧರಾಗಿದ್ದು, ಸಾರ್ವಜನಿಕರು ವದಂತಿಗಳಿಗೆ ಕಿವಿಗೊಡದೆ ಜಿಲ್ಲಾಡಳಿತದ ಅಧಿಕೃತ ಮಾಹಿತಿಯನ್ನು ಮಾತ್ರ ನಂಬುವಂತೆ ಮನವಿ ಮಾಡಲಾಗಿದೆ.
ತುರ್ತು ಸಹಾಯಕ್ಕಾಗಿ ಸಂಪರ್ಕಿಸಿ:
ಜಿಲ್ಲಾ ವಿಪತ್ತು ನಿರ್ವಹಣಾ ಕಂಟ್ರೋಲ್ ರೂಂ (ಶುಲ್ಕರಹಿತ): 1077
ದೂರವಾಣಿ: 0820-2574802
ತಹಶೀಲ್ದಾರರ ಕಚೇರಿ ಸಹಾಯವಾಣಿ ಸಂಖ್ಯೆಗಳು:
0820-2520417
08254-230357
08258-230201
ಜಿಲ್ಲಾಡಳಿತವು ಸಾರ್ವಜನಿಕರ ಸುರಕ್ಷತೆಗೆ ಮೊದಲ ಆದ್ಯತೆಯಾಗಿದ್ದು, ಮುಂದಿನ ಏಳು ದಿನಗಳ ಕಾಲ ಎಲ್ಲರೂ ಮುನ್ನೆಚ್ಚರಿಕಾ ಕ್ರಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಿ ಸುರಕ್ಷಿತವಾಗಿರಬೇಕು ಎಂದು ಮನವಿ ಮಾಡಿದೆ.