-->
ಸ್ವರ್ಣೋದ್ಯಮಿಯ ದರೋಡೆ ಪ್ರಕರಣ: ಮಹತ್ವದ ಸುಳಿವು ಲಭ್ಯ,  ತನಿಖೆ ಚುರುಕು

ಸ್ವರ್ಣೋದ್ಯಮಿಯ ದರೋಡೆ ಪ್ರಕರಣ: ಮಹತ್ವದ ಸುಳಿವು ಲಭ್ಯ, ತನಿಖೆ ಚುರುಕು


ಮಂಗಳೂರಿನ ಬೈಕಂಪಾಡಿ ಸಮೀಪ ಸ್ವರ್ಣೋದ್ಯಮಿಯೊಬ್ಬರ ಕಾರು ಅಡ್ಡಗಟ್ಟಿ ದರೋಡೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿ ಸುರತ್ಕಲ್ ಪೊಲೀಸರು ತನಿಖೆಯನ್ನು ಚುರುಕುಗೊಳಿಸಿದ್ದಾರೆ. ಪ್ರಕರಣದಲ್ಲಿ ಭಾಗಿಯಾಗಿರುವ ದುಷ್ಕರ್ಮಿಗಳ ಕುರಿತು ಮಹತ್ವದ ಸುಳಿವು ಲಭ್ಯವಾಗಿದ್ದು, ಆರೋಪಿಗಳ ಬಂಧನಕ್ಕಾಗಿ ಪೊಲೀಸರು ಕಾರ್ಯಾಚರಣೆ ಆರಂಭಿಸಿದ್ದಾರೆ.

ಸಾಂಗ್ಲಿ ಮೂಲದ ಚಿನ್ನದಂಗಡಿ ಮಾಲೀಕ ವಿಕಾಸ್ ಅವರು ತಮ್ಮ ಪತ್ನಿ ಹಾಗೂ ಮಗನೊಂದಿಗೆ ಸಾಂಗ್ಲಿಯಿಂದ ಪಯನ್ನೂರಿನತ್ತ ಕಾರಿನಲ್ಲಿ ಪ್ರಯಾಣಿಸುತ್ತಿದ್ದ ವೇಳೆ, ಸುಮಾರು ಏಳು ಮಂದಿ ದುಷ್ಕರ್ಮಿಗಳ ತಂಡ ಬೈಕಂಪಾಡಿ ಸಮೀಪ ಕಾರನ್ನು ಅಡ್ಡಗಟ್ಟಿ ತಡೆದಿದೆ.

ಬಳಿಕ ಉದ್ಯಮಿ ವಿಕಾಸ್ ಅವರನ್ನು ಕಾರಿನಿಂದ ಕೆಳಗಿಳಿಸಿದ ಆರೋಪಿಗಳು, ಅವರ ಪತ್ನಿ ಮತ್ತು ಮಗನನ್ನು ಅದೇ ಕಾರಿನಲ್ಲಿ ಅಪಹರಿಸಿ ಸ್ಥಳದಿಂದ ಪರಾರಿಯಾಗಿದ್ದಾರೆ. ನಂತರ ಪಣಂಬೂರು ಬೀಚ್ ರಸ್ತೆಯ ನಿರ್ಜನ ಪ್ರದೇಶಕ್ಕೆ ಕರೆದೊಯ್ದು ತಾಯಿ-ಮಗನಿಗೆ ಬೆದರಿಕೆ ಹಾಕಿ, ಅವರ ಬಳಿಯಿದ್ದ ಬ್ಯಾಗ್‌ನಲ್ಲಿದ್ದ ಸುಮಾರು 180 ಗ್ರಾಂ ತೂಕದ ಲಕ್ಷಾಂತರ ರೂಪಾಯಿ ಮೌಲ್ಯದ ಚಿನ್ನಾಭರಣ ಹಾಗೂ ಇತರೆ ಬೆಲೆಬಾಳುವ ವಸ್ತುಗಳನ್ನು ದೋಚಿದ್ದಾರೆ.

ಆದರೆ ಮಹಿಳೆ ಧರಿಸಿದ್ದ ಚಿನ್ನಾಭರಣವನ್ನು ಆರೋಪಿಗಳು ಕಸಿದುಕೊಂಡಿಲ್ಲ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ದರೋಡೆ ಬಳಿಕ ತಾಯಿ-ಮಗನನ್ನು ರಸ್ತೆಯಲ್ಲೇ ಬಿಟ್ಟು, ಉದ್ಯಮಿಯ ಕಾರಿನೊಂದಿಗೆ ದುಷ್ಕರ್ಮಿಗಳು ಪರಾರಿಯಾಗಿದ್ದಾರೆ.

ಈ ಸಂಬಂಧ ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ವಿವಿಧ ಆಯಾಮಗಳಲ್ಲಿ ತನಿಖೆ ಮುಂದುವರಿದಿದೆ. ಆರೋಪಿಗಳ ಚಲನವಲನ ಕುರಿತು ಪ್ರಮುಖ ಸುಳಿವುಗಳು ಲಭ್ಯವಾಗಿರುವ ಹಿನ್ನೆಲೆಯಲ್ಲಿ ಶೀಘ್ರದಲ್ಲೇ ಬಂಧನ ಸಾಧ್ಯತೆ ಇದೆ ಎಂದು ಪೊಲೀಸರು ತಿಳಿಸಿದ್ದಾರೆ.

Ads on article

Advertise in articles 1

advertising articles 2

Advertise under the article