ಪ್ರಿಯಾಂಕ್ ಖರ್ಗೆಗೆ ಇಸ್ಲಾಮಿ ಮತೀಯ ಸಂಘಟನೆಗಳನ್ನು ಪ್ರಶ್ನಿಸುವ ಧೈರ್ಯವಿದೆಯೇ?: ಯಶ್ಪಾಲ್ ಸುವರ್ಣ
ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರ್‌ಎಸ್‌ಎಸ್)ದ ನೋಂದಣಿ ಕುರಿತು ಪ್ರಶ್ನೆ ಮಾಡುವ ರಾಜ್ಯ ಗೃಹ ಸಚಿವ ಪ್ರಿಯಾಂಕ್ ಖರ್ಗೆಗೆ ಸಮಾಜದ ಶಾಂತಿ ಮತ್ತು ಸುವ್ಯವಸ್ಥೆಗೆ ಧಕ್ಕೆ ತರುವ ಇಸ್ಲಾಮಿಕ್ ಮತೀಯ ಸಂಘಟನೆಗಳನ್ನು ಪ್ರಶ್ನಿಸುವ ಧೈರ್ಯ ಇದೆಯೇ ಎಂದು ಉಡುಪಿ ಶಾಸಕ ಯಶ್ ಪಾಲ್ ಸುವರ್ಣ ಪ್ರಶ್ನಿಸಿದ್ದಾರೆ.
ಭಾರತ ಸ್ವಾತಂತ್ರ್ಯ ರಾಷ್ಟ್ರವಾಗಿ ಗುರುತಿಸಿಕೊಳ್ಳುವ ಮುನ್ನವೇ ರಾಷ್ಟ್ರೀಯತೆಯ ತಳಹದಿಯಲ್ಲಿ ಸ್ಥಾಪನೆಯಾಗಿ ನೂರು ವರ್ಷಗಳ ಇತಿಹಾಸ ಹೊಂದಿರುವ ಆರ್‌ಎಸ್‌ಎಸ್ ದೇಶಸೇವೆಯಲ್ಲಿ ಮಹತ್ವದ ಪಾತ್ರ ವಹಿಸಿದೆ. ಸ್ವಾತಂತ್ರ್ಯ ಹೋರಾಟ, ತುರ್ತು ಪರಿಸ್ಥಿತಿ ಹಾಗೂ ಪ್ರಕೃತಿ ವಿಕೋಪಗಳ ಸಂದರ್ಭಗಳಲ್ಲಿ ಆರ್‌ಎಸ್‌ಎಸ್‌ನ ಲಕ್ಷಾಂತರ ಕಾರ್ಯಕರ್ತರು ಜೀವದ ಹಂಗು ತೊರೆದು ರಾಷ್ಟ್ರಸೇವೆಯಲ್ಲಿ ತೊಡಗಿಸಿಕೊಂಡಿದ್ದಾರೆ. ವ್ಯಕ್ತಿ ನಿರ್ಮಾಣದ ಮೂಲಕ ರಾಷ್ಟ್ರ ನಿರ್ಮಾಣದ ಸಂಕಲ್ಪದೊಂದಿಗೆ ಕಾರ್ಯನಿರ್ವಹಿಸುತ್ತಿರುವ ಸಂಘಟನೆಯ ಘನತೆಗೆ ಧಕ್ಕೆ ತರುವ ಮೂಲಕ ಕಾಂಗ್ರೆಸ್ ಪಕ್ಷದ ರಾಷ್ಟ್ರೀಯತೆ ವಿರೋಧಿ ನಿಲುವನ್ನು ಪ್ರಿಯಾಂಕ್ ಖರ್ಗೆ ಮತ್ತೊಮ್ಮೆ ಪ್ರದರ್ಶಿಸಿದ್ದಾರೆ ಎಂದು ಅವರು ಆರೋಪಿಸಿದರು.
ರಾಷ್ಟ್ರೀಯ ಸ್ವಯಂಸೇವಕ ಸಂಘದ ಕಾರ್ಯವೈಖರಿ ಹಾಗೂ ಸಾಮಾಜಿಕ ಬದ್ಧತೆ ಬಗ್ಗೆ ಸಮಾಜದಲ್ಲಿ ಅನುಮಾನ ಮೂಡಿಸುವ ರೀತಿಯ ಹೇಳಿಕೆಗಳನ್ನು ನೀಡುವ ಮೂಲಕ ಮತೀಯವಾದಿ ಹಾಗೂ ರಾಷ್ಟ್ರವಿರೋಧಿ ಶಕ್ತಿಗಳನ್ನು ಓಲೈಕೆ ಮಾಡಲು ರಾಜ್ಯದ ಗೃಹ ಸಚಿವರೇ ಮುಂದಾಗಿರುವುದು ದುರದೃಷ್ಟಕರ ಎಂದು ಯಶ್ ಪಾಲ್ ಸುವರ್ಣ ಹೇಳಿದ್ದಾರೆ.
ಕಾಂಗ್ರೆಸ್ ಪಕ್ಷವು ರಾಷ್ಟ್ರೀಯತೆ ಮತ್ತು ದೇಶಭಕ್ತ ಸಂಘಟನೆಗಳ ಬಗ್ಗೆ ಸದಾ ಕೆಂಗಣ್ಣಿನಿಂದ ನೋಡುವ ಮನೋಭಾವ ಹೊಂದಿದ್ದು, ಪ್ರಿಯಾಂಕ್ ಖರ್ಗೆ ಅದನ್ನೇ ಮುಂದುವರಿಸಿಕೊಂಡು ಬರುತ್ತಿದ್ದಾರೆ ಎಂದು ಟೀಕಿಸಿದರು.
ರಾಜ್ಯದ ವಿವಿಧ ಭಾಗಗಳಲ್ಲಿ ಮಸೀದಿಗಳು ಹಾಗೂ ಮದರಸಾಗಳು ಕಾನೂನು ನಿಯಮಗಳನ್ನು ಉಲ್ಲಂಘಿಸಿ ನಿರ್ಮಾಣವಾಗುತ್ತಿದ್ದರೂ ಸರ್ಕಾರ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ. ಆದರೆ ಹಿಂದೂ ಸಮಾಜದ ನೈತಿಕ ಸ್ಥೈರ್ಯವನ್ನು ಕುಗ್ಗಿಸುವ ರೀತಿಯ ಹೇಳಿಕೆಗಳನ್ನು ನೀಡಲಾಗುತ್ತಿದೆ ಎಂದು ಅವರು ಆರೋಪಿಸಿದರು.
ರಾಜ್ಯ ಸರ್ಕಾರದ ಜನವಿರೋಧಿ ನೀತಿಗಳ ವಿರುದ್ಧ ಸಾರ್ವಜನಿಕರಲ್ಲಿ ವ್ಯಾಪಕ ಆಕ್ರೋಶ ವ್ಯಕ್ತವಾಗುತ್ತಿರುವ ಹಿನ್ನೆಲೆಯಲ್ಲಿ, ಪ್ರಿಯಾಂಕ್ ಖರ್ಗೆ ಇಂತಹ ಹೇಳಿಕೆಗಳ ಮೂಲಕ ಜನರ ಗಮನ ಬೇರೆಡೆ ಸೆಳೆಯಲು ಪ್ರಯತ್ನಿಸುತ್ತಿದ್ದಾರೆ. ಆದರೆ ರಾಷ್ಟ್ರೀಯವಾದಿ ಚಿಂತನೆಯ ಸಮಾಜ ಆರ್‌ಎಸ್‌ಎಸ್ ವಿರುದ್ಧದ ಇಂತಹ ಹೇಳಿಕೆಗಳಿಗೆ ತಕ್ಕ ಉತ್ತರ ನೀಡಲಿದೆ ಎಂದು ಯಶ್ ಪಾಲ್ ಸುವರ್ಣ ತಿಳಿಸಿದ್ದಾರೆ.