ಉಡುಪಿ ನ್ಯಾಯಾಲಯಕ್ಕೆ ಬಾಂಬ್ ಬೆದರಿಕೆ ಇ-ಮೇಲ್; ಹುಸಿ ಸಂದೇಶ ಶಂಕೆ, ಪ್ರಕರಣ ದಾಖಲು
ಉಡುಪಿ ನ್ಯಾಯಾಲಯಕ್ಕೆ ಬಾಂಬ್ ಬೆದರಿಕೆ ಸಂಶಯಿತ ಹುಸಿ ಕರೆ ಎನ್ನುವುದನ್ನು ಪೊಲೀಸರು ದೃಢಪಡಿಸಿದ್ದಾರೆ. ನ್ಯಾಯಾಲಯ ಹಾಗೂ ಆವರಣದಲ್ಲಿ ತೀವ್ರ ತಪಾಸಣೆ ನಡೆಸಿದ್ದು ಯಾವುದೇ ಸಂಶಯಾಸ್ಪದ ಸ್ವತ್ತುಗಳು ಪತ್ತೆಯಾಗಿಲ್ಲ.
ಉಡುಪಿ ಹಾಗೂ ತಂಜಾವೂರು ನ್ಯಾಯಾಲಯಗಳ ನ್ಯಾಯಾಧೀಶರ ಚೇಂಬರ್ ಮತ್ತು ಶೌಚಾಲಯಗಳಲ್ಲಿ ಆರ್‌ಡಿಎಕ್ಸ್ 2+2 ಬಾಂಬ್‌ಗಳನ್ನು ಇರಿಸಲಾಗಿದ್ದು, ಸೋಮವಾರ ಮಧ್ಯಾಹ್ನ 2 ಗಂಟೆಗೆ ಏಕಕಾಲದಲ್ಲಿ ಸ್ಫೋಟಗೊಳ್ಳಲಿವೆ ಎಂದು ಬೆದರಿಕೆ ಹಾಕಿರುವ ಇ-ಮೇಲ್ ಬಂದಿತ್ತು.
ಟಿಎನ್‌ಎಲ್ ಎಸ್. ಮಾರನ್ ಎಂಬ ಹೆಸರಿನಲ್ಲಿ ಕಳುಹಿಸಲಾದ ಇ-ಮೇಲ್‌ನಲ್ಲಿ, ಉದಯನಿಧಿ ಸ್ಟಾಲಿನ್ ಎಂಬಾತನು 2023ರಲ್ಲಿ ನಿರ್ಭಯಾ ಎಂಬ ಮಹಿಳೆಯ ಮೇಲೆ ಅತ್ಯಾಚಾರ ಮತ್ತು ಕಿರುಕುಳ ಎಸಗಿದ್ದಾನೆ ಎಂದು ಆರೋಪಿಸಲಾಗಿದೆ. ಈ ಸಂಬಂಧದ ಸಾಕ್ಷ್ಯಗಳು ಎಡಬ್ಲುಪಿಎಸ್ ಹಾಗೂ ಕೇರಳ ಪೊಲೀಸರ ಬಳಿ ಇವೆ ಎಂದು ಮೇಲ್‌ನಲ್ಲಿ ಉಲ್ಲೇಖಿಸಲಾಗಿದೆ.
ಅಲ್ಲದೆ, ಚೆನ್ನೈನ ಸವೇರಾ ಹೋಟೆಲ್‌ನಲ್ಲಿ ನಡೆದ ಘಟನೆಗಳು ಹಾಗೂ ವಿವಿಧ ಮಹಿಳಾ ಹಕ್ಕುಗಳ ಸಂಘಟನೆಗಳಿಗೆ ಸಲ್ಲಿಸಲಾದ ದೂರುಗಳ ಕುರಿತು ಕೇರಳ ಪೊಲೀಸರೊಂದಿಗೆ ಎಡಬ್ಲುಪಿಎಸ್ ಮಾಹಿತಿ ಸಂಗ್ರಹಿಸಿದೆ. ಆದಾಗ್ಯೂ, ಆರೋಪಿಯ ವಿರುದ್ಧ ಯಾವುದೇ ಕ್ರಮ ಕೈಗೊಳ್ಳದೆ ಮಹಿಳೆಗೆ ನ್ಯಾಯ ದೊರಕಿಲ್ಲ ಎಂದು ಇ-ಮೇಲ್‌ನಲ್ಲಿ ಆರೋಪಿಸಲಾಗಿದೆ.
ಈ ಹಿನ್ನೆಲೆಯಲ್ಲಿ ದಕ್ಷಿಣ ಭಾರತದ ನಕ್ಸಲೈಟ್ ಘಟಕಗಳು ವ್ಯವಸ್ಥೆಯ ವಿರುದ್ಧದ ಧಿಕ್ಕಾರದ ಸಂಕೇತವಾಗಿ ನ್ಯಾಯಾಲಯ ಹಾಗೂ ನ್ಯಾಯಾಧೀಶರನ್ನು ಗುರಿಯಾಗಿಸಿ ದಾಳಿ ನಡೆಸಲು ನಿರ್ಧರಿಸಿವೆ ಎಂದು ಬೆದರಿಕೆ ಹಾಕಲಾಗಿದೆ. ಇ-ಮೇಲ್‌ನ ಕೊನೆಯಲ್ಲಿ “ಇಂಕಿಲಾಬ್ ಜಿಂದಾಬಾದ್” ಎಂದು ಉಲ್ಲೇಖಿಸಲಾಗಿದೆ.
ಭದ್ರತಾ ದೃಷ್ಟಿಯಿಂದ ನ್ಯಾಯಾಲಯ ಆವರಣದಲ್ಲಿ ಪರಿಶೀಲನೆ ನಡೆಸಲಾಗಿದ್ದು, ಯಾವುದೇ ಅನುಮಾನಾಸ್ಪದ ವಸ್ತುಗಳು ಪತ್ತೆಯಾಗಿಲ್ಲ. ಪ್ರಾಥಮಿಕ ತನಿಖೆಯಲ್ಲಿ ಇದು ಹುಸಿ ಬೆದರಿಕೆ ಇ-ಮೇಲ್ ಆಗಿರುವ ಸಾಧ್ಯತೆ ವ್ಯಕ್ತವಾಗಿರುವುದರಿಂದ ನ್ಯಾಯಾಲಯದ ಕಲಾಪವನ್ನು ಎಂದಿನಂತೆ ಮುಂದುವರಿಸಲು ಅವಕಾಶ ಕಲ್ಪಿಸಲಾಯಿತು.
ಈ ಕುರಿತು ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಇ-ಮೇಲ್ ಕಳುಹಿಸಿದ ವ್ಯಕ್ತಿಯ ಪತ್ತೆಗೆ ಪೊಲೀಸರು ತನಿಖೆ ಆರಂಭಿಸಿದ್ದಾರೆ. ಅಧಿಕಾರಿಗಳು ಬೆದರಿಕೆ ಸಂದೇಶದ ಮೂಲವನ್ನು ಪತ್ತೆಹಚ್ಚಲು ಸೈಬರ್ ತಜ್ಞರ ಸಹಾಯ ಪಡೆಯುತ್ತಿದ್ದಾರೆ.
