ನನ್ನ ಹಾಗೂ ಮೋದಿ ಸಂಬಂಧ ಕೊನೆಗೊಳ್ಳುವುದಿಲ್ಲ: ಹೆಚ್.ಡಿ ದೇವೇಗೌಡ
ಒಂದು ರಾಜ್ಯಸಭೆ ಸ್ಥಾನದಿಂದ ನನ್ನ ಹಾಗೂ ಪ್ರಧಾನಿ ಮೋದಿ ಅವರ ಸಂಬಂಧ ಕೊನೆಗೊಳ್ಳುವುದಿಲ್ಲ. ನನ್ನ ಅಂತಿಮ ಕಾಲದವರೆಗೂ ಮೋದಿ ಅವರೊಂದಿನ ಸಂಬಂಧ ಇರುತ್ತದೆ. ಎನ್‌ಡಿಎ ಜೊತೆ ನಾವು ಮುಂದುವರೆಯುತ್ತೇವೆ ಎಂದು ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡರು ತಿಳಿಸಿದ್ದಾರೆ.
ಬಿಜೆಪಿ ರಾಜ್ಯಸಭೆ ಸ್ಥಾನ ನೀಡದ ಹಿನ್ನೆಲೆ ಕಾಂಗ್ರೆಸ್ ಟೀಕೆ ಮಾಡುತ್ತಿರುವ ಕುರಿತು ಜೆಪಿ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ದೇವೇಗೌಡರು, ರಾಜ್ಯಸಭೆ ಸದಸ್ಯನಾಗಿ ಮುಂದುವರಿಯಬೇಕೆಂಬ ಆಸೆ ಇದ್ದಿದ್ದರೆ ದೆಹಲಿಗೆ ತೆರಳಿ ಬಿಜೆಪಿ ಕೇಂದ್ರ ನಾಯಕರೊಂದಿಗೆ ಮಾತುಕತೆ ನಡೆಸಬಹುದಾಗಿತ್ತು. ಆದರೆ ಈ ವಿಚಾರವಾಗಿ ತಾವು ಯಾವುದೇ ಕೇಂದ್ರ ನಾಯಕರನ್ನು ಸಂಪರ್ಕಿಸಿಲ್ಲ ಎಂದು ಹೇಳಿದರು.
ಕಳೆದ ಹತ್ತು ವರ್ಷಗಳಿಂದ ಪ್ರಧಾನಿ ಮೋದಿ ಅವರೊಂದಿಗೆ ವೈಯಕ್ತಿಕ ಸ್ನೇಹ ಮತ್ತು ಉತ್ತಮ ಸಂಬಂಧ ಹೊಂದಿದ್ದೇನೆ. ಕೇವಲ ಒಂದು ರಾಜ್ಯಸಭೆ ಸ್ಥಾನಕ್ಕಾಗಿ ಆ ಸಂಬಂಧವನ್ನು ಕಡಿದುಕೊಳ್ಳುವುದಿಲ್ಲ. ದೇಶ-ವಿದೇಶಗಳಲ್ಲಿ ಮೋದಿ ಅವರನ್ನು ಪ್ರಭಾವಿ ನಾಯಕನಾಗಿ ಗುರುತಿಸಲಾಗಿದೆ. ಅವರೊಂದಿಗೆ ಇರುವ ವೈಯಕ್ತಿಕ ಬಾಂಧವ್ಯ ಮುಂದೆಯೂ ಹಾಗೆಯೇ ಇರುತ್ತದೆ ಎಂದು ದೇವೇಗೌಡರು ತಿಳಿಸಿದರು.
ರಾಜ್ಯದ ಯಾವುದೇ ಪ್ರಮುಖ ಸಮಸ್ಯೆ ಎದುರಾದರೂ ಪ್ರಧಾನಿ ಮೋದಿ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸುತ್ತೇನೆ. ನನ್ನ ಜೀವನದ ಕೊನೆಯವರೆಗೂ ಎನ್‌ಡಿಎ ಮೈತ್ರಿಯೊಂದಿಗೆ ಸಾಗುತ್ತೇನೆ ಎಂದು ಅವರು ಹೇಳಿದರು.
"ಒಂದು ರಾಜ್ಯಸಭೆ ಸ್ಥಾನ ಸಿಗಲಿಲ್ಲ ಎಂಬ ಕಾರಣಕ್ಕೆ ನನ್ನ ಹಾಗೂ ಮೋದಿ ಅವರ ನಡುವಿನ ಸಂಬಂಧ ಮುರಿದುಹೋಗಿದೆ ಎಂದು ಯಾರೂ ಭಾವಿಸಬಾರದು. ನಾವು ಎನ್‌ಡಿಎ ಜೊತೆಯಲ್ಲೇ ಇರುತ್ತೇವೆ. ಕುಮಾರಸ್ವಾಮಿ ಕೇಂದ್ರ ಸಚಿವರಾಗಿ ಮುಂದುವರಿಯಲಿದ್ದಾರೆ" ಎಂದು ಹೇಳುವ ಮೂಲಕ ಕಾಂಗ್ರೆಸ್ ಟೀಕೆಗಳಿಗೆ ತಿರುಗೇಟು ನೀಡಿದರು.
ಇದೇ ವೇಳೆ ಪಕ್ಷ ಸಂಘಟನೆಗೆ ತಮ್ಮ ಸಂಪೂರ್ಣ ಶಕ್ತಿಯನ್ನು ಮೀಸಲಿಡುವುದಾಗಿ ತಿಳಿಸಿದ ದೇವೇಗೌಡರು, ಯಾವುದೇ ಹುದ್ದೆ ಇಲ್ಲದಿದ್ದರೂ ಪಕ್ಷದ ಬೆಳವಣಿಗೆಗಾಗಿ ಕೆಲಸ ಮಾಡುತ್ತೇನೆ ಎಂದರು. ಆರೋಗ್ಯ ಸಮಸ್ಯೆಗಳ ನಡುವೆಯೂ ವೀಲ್‌ಚೇರ್‌ನಲ್ಲಿ ಸಂಸತ್ತಿಗೆ ತೆರಳಿ ರಾಜ್ಯ ಹಾಗೂ ದೇಶದ ವಿಚಾರಗಳ ಕುರಿತು ಧೈರ್ಯವಾಗಿ ಮಾತನಾಡಿದ್ದೇನೆ ಎಂದು ಹೇಳಿದರು.
ಸ್ಥಳೀಯ ಸಂಸ್ಥೆಗಳ ಚುನಾವಣೆಗಳು ಹಾಗೂ ಪಕ್ಷ ಸಂಘಟನೆ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುವುದಾಗಿ ತಿಳಿಸಿದ ಅವರು, ರಾಜ್ಯ ಮತ್ತು ದೇಶದ ಹಿತದೃಷ್ಟಿಯಿಂದ ತಮ್ಮ ಶಕ್ತಿ ಮೀರಿ ಸೇವೆ ಸಲ್ಲಿಸುವುದಾಗಿ ಹೇಳಿದರು. "ಎಲ್ಲಿ ನನ್ನ ಅಗತ್ಯವಿದೆಯೋ ಅಲ್ಲಿ ನಾನು ಇರುತ್ತೇನೆ. ಪಕ್ಷ ಹಾಗೂ ರಾಜ್ಯದ ಅಭಿವೃದ್ಧಿಗಾಗಿ ನಿರಂತರವಾಗಿ ಕೆಲಸ ಮಾಡುತ್ತೇನೆ" ಎಂದು ದೇವೇಗೌಡರು ಹೇಳಿದರು.