ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಾಲಯಕ್ಕೆ ಡಿಸಿಎಂ ಡಾ. ಜಿ. ಪರಮೇಶ್ವರ್ ಭೇಟಿ
Sunday, June 28, 2026
ಕರ್ನಾಟಕ ಸರ್ಕಾರದ ಉಪಮುಖ್ಯಮಂತ್ರಿ ಹಾಗೂ ಕಂದಾಯ ಸಚಿವರಾದ ಡಾ. ಜಿ. ಪರಮೇಶ್ವರ್ ಅವರು ಇಂದು ಬೆಳಗ್ಗೆ ಪತ್ನಿಯೊಂದಿಗೆ ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನಕ್ಕೆ ಭೇಟಿ ನೀಡಿ ಶ್ರೀ ಮೂಕಾಂಬಿಕಾ ದೇವಿಗೆ ವಿಶೇಷ ಪೂಜೆ ಸಲ್ಲಿಸಿದರು. ಬಳಿಕ ಅವರು ಚಂಡಿಕಾ ಹೋಮದಲ್ಲಿ ಪಾಲ್ಗೊಂಡರು.
ದೇವಾಲಯದ ಹಿರಿಯ ಅರ್ಚಕರಾದ ನರಸಿಂಹ ಅಡಿಗ ಹಾಗೂ ಸುಬ್ರಮಣ್ಯ ಅಡಿಗ ಅವರ ನೇತೃತ್ವದಲ್ಲಿ ಚಂಡಿಕಾ ಹೋಮ ಸೇರಿದಂತೆ ಪೂಜಾ ವಿಧಿವಿಧಾನಗಳು ನೆರವೇರಿದವು. ಪೂಜೆ ಬಳಿಕ ದೇವಾಲಯದ ಆಡಳಿತ ಮಂಡಳಿಯ ವತಿಯಿಂದ ಉಪಮುಖ್ಯಮಂತ್ರಿಗಳಿಗೆ ದೇವಿಯ ಪ್ರಸಾದ ಹಾಗೂ ಸ್ಮರಣಿಕೆಯನ್ನು ನೀಡಿ ಗೌರವಿಸಲಾಯಿತು.
ಈ ಸಂದರ್ಭದಲ್ಲಿ ಮಾಜಿ ಸಚಿವ ವಿನಯ್ ಕುಮಾರ್ ಸೊರಕೆ, ಬೈಂದೂರು ಕ್ಷೇತ್ರದ ಮಾಜಿ ಶಾಸಕ ಕೆ. ಗೋಪಾಲ ಪೂಜಾರಿ, ದೇವಾಲಯದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಬಾಬು ಶೆಟ್ಟಿ ತಗ್ಗರ್ಸೆ, ಕಾರ್ಯನಿರ್ವಹಣಾಧಿಕಾರಿ ಪ್ರಶಾಂತ್ ಕುಮಾರ್ ಶೆಟ್ಟಿ, ವ್ಯವಸ್ಥಾಪನಾ ಸಮಿತಿ ಸದಸ್ಯರಾದ ಅಭಿಲಾಷ್ ಪಿ.ವಿ., ಸುರೇಂದ್ರ ಶೆಟ್ಟಿ, ರಘುರಾಮ್ ದೇವಾಡಿಗ, ಸುಧಾ ಕೆ., ಧನಾಕ್ಷಿ ಪೂಜಾರಿ, ಕಾಂಗ್ರೆಸ್ ಮುಖಂಡ ಹರಿಪ್ರಸಾದ್ ರೈ ಸೇರಿದಂತೆ ಪಕ್ಷದ ಮುಖಂಡರು, ಕಾರ್ಯಕರ್ತರು ಹಾಗೂ ಭಕ್ತರು ಉಪಸ್ಥಿತರಿದ್ದರು.

