-->
ಕಾರಿನೊಳಗೆ ಪೆಟ್ರೋಲ್ ಬಾಂಬ್ ಸ್ಪೋಟಿಸಿ ಭಗ್ನ ಪ್ರೇಮಿ ಸಜೀವ ದಹನ; ಯುವತಿ, ಕಾರು ಚಾಲಕ ಪವಾಡ ಸದೃಶ ಪಾರು

ಕಾರಿನೊಳಗೆ ಪೆಟ್ರೋಲ್ ಬಾಂಬ್ ಸ್ಪೋಟಿಸಿ ಭಗ್ನ ಪ್ರೇಮಿ ಸಜೀವ ದಹನ; ಯುವತಿ, ಕಾರು ಚಾಲಕ ಪವಾಡ ಸದೃಶ ಪಾರು


ಚಲಿಸುತ್ತಿದ್ದ ಕಾರಿನಲ್ಲಿ ಯುವತಿಗೆ ಚಾಕುವಿನಿಂದ ಇರಿದ 
ಭಗ್ನ ಪ್ರೇಮಿ ಯುವಕನೊಬ್ಬ, ಬಳಿಕ ಕಾರಿನೊಳಗೆ ಪೆಟ್ರೋಲ್ ಬಾಂಬ್ ಸ್ಪೋಟಿಸಿಕೊಂಡ ಸಜೀವ ದಹನವಾಗಿರುವ ಘಟನೆ ತುಮಕೂರು ಜಿಲ್ಲೆಯ ಶಿರಾ ತಾಲೂಕಿನ ಜೋಗಿಹಳ್ಳಿ ಬಳಿ ನಿನ್ನೆ ಸಂಜೆ ನಡೆದಿದೆ. 

ಘಟನೆಯಲ್ಲಿ ಬೆಂಗಳೂರಿನ ನಾಗೇಂದ್ರ (30) ಎಂಬಾತ ಕಾರಿನಲ್ಲೇ ಸುಟ್ಟು ಕರಕಲಾಗಿದ್ದು, ಆತನೊಂದಿಗೆ ಕಾರಿನಲ್ಲಿ ಪ್ರಯಾಣ ಬೆಳೆಸಿದ್ದ ರಮ್ಯಾ ಉಲ್ಲಾಸ್ (23) ಎಂಬ ಯುವತಿ ಗಂಭೀರ ಗಾಯಗಳೊಂದಿಗೆ ಪ್ರಾಣಾಪಾಯದಿಂದ ಪಾರಾಗಿದ್ದಾರೆ. 

ಬೆಂಗಳೂರಿನ ಸಂಜಯ್ ಗಾಂಧಿ ಆಸ್ಪತ್ರೆಯಲ್ಲಿ ಒಟಿ ಟೆಕ್ನಿಷಿಯನ್ ಆಗಿ ಕೆಲಸ ಮಾಡುತ್ತಿದ್ದ ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ತಾಲೂಕಿನ ಅಗಸೂರು ಗ್ರಾಮದ ರಮ್ಯಾ ಉಲ್ಲಾಸ್ ಹಾಗೂ ನಾಗೇಂದ್ರ ಅವರು ಬೆಂಗಳೂರಿನಿಂದ ಅಂಕೋಲಾಕ್ಕೆ ಖಾಸಗಿಯಾಗಿ ತೆರಳಲು ಊಬರ್ ಆ್ಯಪ್ ಮೂಲಕ ಕಾರೊಂದನ್ನು ಬುಕ್ ಮಾಡಿದ್ದರು. ಚಾಲಕನೊಂದಿಗೆ ಇವರಿಬ್ಬರು ಕಾರಿನಲ್ಲಿ ಪ್ರಯಾಣ ಬೆಳೆಸಿದ್ದರು. ಆದರೆ, ಕಾರು ತುಮಕೂರು ದಾಟುತ್ತಿದ್ದಂತೆ ನಾಗೇಂದ್ರ ಹಾಗೂ ರಮ್ಯಾ ನಡುವೆ ಯಾವುದೋ ವೈಯಕ್ತಿಕ ವಿಚಾರಕ್ಕೆ ಕಾರಿನಲ್ಲೇ ಭಾರೀ ಜಗಳ ಆರಂಭವಾಗಿದೆ. 

ನಾಗೇಂದ್ರ ತಾನು ಮೊದಲೇ ಪ್ಲಾನ್ ಮಾಡಿ ತಂದಿದ್ದ ಚಾಕುವಿನಿಂದ ರಮ್ಯಾ ಅವರ ತಲೆ ಹಾಗೂ ದೇಹದ ಭಾಗಕ್ಕೆ ಮನಸೋಇಚ್ಛೆ ಚುಚ್ಚಿದ್ದಾನೆ. ಈ ವೇಳೆ ಯುವತಿ ಕಾರಿನಲ್ಲಿ ನಾಗೇಂದ್ರ ಬಾಂಬ್ ತಂದಿರುವುದಾಗಿ ಡ್ರೈವರ್ ಗೆ ಸೂಚನೆ ನೀಡಿ, ಚಲಿಸುವ ಕಾರಿನಿಂದ ಯುವತಿ ಹೊರಗೆ ಹಾರಿದ್ದು, ಯುವತಿ ಕೆಳಗೆ ಬಿದ್ದಿದ್ದನ್ನು ಕಂಡು ಗಾಬರಿಗೊಂಡ ವಾಹನ ಚಾಲಕ ತಕ್ಷಣವೇ ಕಾರನ್ನು ರಸ್ತೆ ಪಕ್ಕಕ್ಕೆ ನಿಲ್ಲಿಸಿ ಇಳಿದಿದ್ದಾನೆ. ಚಾಲಕ ಕೆಳಗೆ ಇಳಿಯುತ್ತಿದ್ದಂತೆಯೇ ನಾಗೇಂದ್ರ ಒಳಗಿನಿಂದ ಕಾರಿನ ಎಲ್ಲಾ ಡೋರ್‌ಗಳನ್ನು ಸೆಂಟ್ರಲ್ ಲಾಕ್ ಮಾಡಿಕೊಂಡಿದ್ದಾನೆ. ಡೋರ್ ಲಾಕ್ ಮಾಡಿಕೊಂಡ ಕೆಲವೇ ಕ್ಷಣಗಳಲ್ಲಿ ಕಾರಿನೊಳಗೆ ಭಾರಿ ಪ್ರಮಾಣದ ಸ್ಫೋಟ ಸಂಭವಿಸಿದ್ದು, ಇಡೀ ಕಾರು ಧಗಧಗನೆ ಹೊತ್ತಿ ಉರಿಯಲಾರಂಭಿಸಿದೆ. ನಾಗೇಂದ್ರ ತಾನು ಮೊದಲೇ ಸಿದ್ಧಪಡಿಸಿಕೊಂಡು ತಂದಿದ್ದ ‘ಪೆಟ್ರೋಲ್ ಬಾಂಬ್’ ಕಾರಿನೊಳಗೆ ಬ್ಲಾಸ್ಟ್ ಆಗಿದೆ.  ಬೆಂಕಿ ಇಡೀ ಕಾರನ್ನು ಆವರಿಸಿದ್ದರಿಂದ ನಾಗೇಂದ್ರನಿಗೆ ಹೊರಬರಲು ಸಾಧ್ಯವಾಗದೆ ಕಾರಿನೊಳಗೇ ಸಜೀವ ದಹನವಾಗಿದ್ದಾನೆ. ರಾಷ್ಟ್ರೀಯ ಹೆದ್ದಾರಿಯಲ್ಲೇ ಕಾರು ಹೊತ್ತಿ ಉರಿದು ಭಸ್ಮವಾಗಿದೆ.

ಯುವತಿ ಆತನನ್ನು ವಿವಾಹವಾಗಲು ಒಪ್ಪದಿದ್ದುದೇ ಈ ಘಟನೆಗೆ ಕಾರಣ ಎನ್ನಲಾಗಿದೆ.

ಘಟನೆಯ ಮಾಹಿತಿ ತಿಳಿಯುತ್ತಿದ್ದಂತೆ ತುಮಕೂರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಶೋಕ್ ಅವರು ಉನ್ನತ ಅಧಿಕಾರಿಗಳ ತಂಡದೊಂದಿಗೆ ಜೋಗಿಹಳ್ಳಿ ಬಳಿಯ ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಇತ್ತ ಕಾರಿನಿಂದ ಜಿಗಿದು ತೀವ್ರ ರಕ್ತಸ್ರಾವ ಹಾಗೂ ಗಾಯಗಳಾಗಿದ್ದ ರಮ್ಯಾ ಉಲ್ಲಾಸ್ ಅವರನ್ನು ತುಮಕೂರು ಜಿಲ್ಲಾಸ್ಪತ್ರೆಗೆ ರವಾನಿಸಲಾಗಿದ್ದು, ತುರ್ತು ನಿಗಾ ವಿಭಾಗದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

Ads on article

Advertise in articles 1

advertising articles 2

Advertise under the article