-->
 ಉಡುಪಿ: ಗೋವಾದಿಂದ ನಾಪತ್ತೆಯಾಗಿದ್ದ ವೃದ್ಧರು ಕುಟುಂಬದ ಮಡಿಲಿಗೆ

ಉಡುಪಿ: ಗೋವಾದಿಂದ ನಾಪತ್ತೆಯಾಗಿದ್ದ ವೃದ್ಧರು ಕುಟುಂಬದ ಮಡಿಲಿಗೆ


ಗೋವಾದಿಂದ ದಿಕ್ಕುತಪ್ಪಿ ಉಡುಪಿಗೆ ಬಂದು ಕಾಡಬೆಟ್ಟುವಿನ ಬೆಳಕು ಆಶ್ರಮದಲ್ಲಿ ಪುನರ್ವಸತಿ ಪಡೆದಿದ್ದ ವೃದ್ಧರ ವಾರಸುದಾರರು ಪತ್ತೆಯಾಗಿದ್ದು, ಬಳಿಕ ಅವರನ್ನು ಕುಟುಂಬದವರ ಮಡಿಲಿಗೆ ಸುರಕ್ಷಿತವಾಗಿ ಸೇರಿಸಲಾಗಿದೆ.

ಕಳೆದ ಮೇ 31ರಂದು ಇಂದ್ರಾಳಿ ರೈಲ್ವೇ ನಿಲ್ದಾಣದ ಪ್ರಯಾಣಿಕರ ವಾಹನ ನಿಲುಗಡೆ ಸ್ಥಳದಲ್ಲಿ ಅಸಹಾಯಕ ಸ್ಥಿತಿಯಲ್ಲಿ ಅಪರಿಚಿತ ವೃದ್ಧರು ಕಂಡುಬಂದಿದ್ದರು. ವೃದ್ಧರ ಪರಿಸ್ಥಿತಿಯನ್ನು ಗಮನಿಸಿದ ಸ್ಥಳೀಯರು ಸಮಾಜಸೇವಕ ನಿತ್ಯಾನಂದ ಒಳಕಾಡುವರ ಗಮನಕ್ಕೆ ತಂದಿದ್ದರು. ತಕ್ಷಣ ಸ್ಪಂದಿಸಿದ ಅವರು ರಾಜೇಶ್ ಕಾಪು ಅವರ ಸಹಕಾರದೊಂದಿಗೆ ವೃದ್ಧರಿಗೆ ಕಾಡಬೆಟ್ಟುವಿನ ಬೆಳಕು ಆಶ್ರಮದಲ್ಲಿ ತಾತ್ಕಾಲಿಕ ಪುನರ್ವಸತಿ ವ್ಯವಸ್ಥೆ ಕಲ್ಪಿಸಿದ್ದರು.

ಬೆಳಕು ಆಶ್ರಮವು ವೃದ್ಧರಿಗೆ ಅಗತ್ಯ ಊಟೋಪಚಾರ ಹಾಗೂ ಆರೈಕೆ ಒದಗಿಸಿ ಮಾನವೀಯತೆಯನ್ನು ಮೆರೆದಿತ್ತು. ವಿಚಾರಣೆ ವೇಳೆ ವೃದ್ಧರು ತಮ್ಮ ಹೆಸರು ಮಹಾಬಲ ಶೇರಿಗಾರ ಎಂದು ತಿಳಿಸಿದ್ದರೂ, ನೀಡಿದ ವಿಳಾಸ ಸ್ಪಷ್ಟವಾಗಿರಲಿಲ್ಲ. ಮರೆವು ಕಾಯಿಲೆಯಿಂದ ಬಳಲುತ್ತಿದ್ದ ಕಾರಣ ಅವರು ದಿಕ್ಕುತಪ್ಪಿ ಗೋವಾದಿಂದ ಉಡುಪಿಗೆ ಬಂದಿರುವುದು ಬಳಿಕ ತಿಳಿದುಬಂದಿದೆ.

ಇದೇ ವೇಳೆ, ಮಹಾಬಲ ಶೇರಿಗಾರ ಅವರು ನಾಪತ್ತೆಯಾಗಿರುವ ಕುರಿತು ಅವರ ಕುಟುಂಬಸ್ಥರು ಗೋವಾದಲ್ಲಿ ಈಗಾಗಲೇ ನಾಪತ್ತೆ ಪ್ರಕರಣ ದಾಖಲಿಸಿದ್ದರು. ವಿವಿಧ ಮೂಲಗಳ ಮೂಲಕ ಮಾಹಿತಿ ಸಂಗ್ರಹಿಸಿದ ಬಳಿಕ ವೃದ್ಧರ ವಾರಸುದಾರರನ್ನು ಪತ್ತೆಹಚ್ಚಲು ಸಾಧ್ಯವಾಯಿತು.

ಕುಟುಂಬಸ್ಥರು ಆಶ್ರಮಕ್ಕೆ ಆಗಮಿಸಿ ವೃದ್ಧರನ್ನು ಗುರುತಿಸಿದ್ದು, ಬಳಿಕ ಅವರನ್ನು ಸುರಕ್ಷಿತವಾಗಿ ತಮ್ಮೊಂದಿಗೆ ಕರೆದುಕೊಂಡು ಹೋದರು. ಈ ಮೂಲಕ ಹಲವು ದಿನಗಳಿಂದ ಕುಟುಂಬದಿಂದ ದೂರವಾಗಿದ್ದ ವೃದ್ಧರು ಮತ್ತೆ ತಮ್ಮ ಬಂಧುಗಳ ಮಡಿಲು ಸೇರಿದ್ದಾರೆ.

ಸಮಾಜಸೇವಕರ ತ್ವರಿತ ಸ್ಪಂದನೆ, ಸ್ಥಳೀಯರ ಸಹಕಾರ ಹಾಗೂ ಬೆಳಕು ಆಶ್ರಮದ ಮಾನವೀಯ ಸೇವೆಯಿಂದ ಒಬ್ಬ ವೃದ್ಧರು ಮತ್ತೆ ತಮ್ಮ ಕುಟುಂಬವನ್ನು ಸೇರಲು ಸಾಧ್ಯವಾಗಿದ್ದು, ಈ ಕಾರ್ಯಕ್ಕೆ ಸಾರ್ವಜನಿಕ ವಲಯದಿಂದ ಮೆಚ್ಚುಗೆ ವ್ಯಕ್ತವಾಗಿದೆ.

Ads on article

Advertise in articles 1

advertising articles 2

Advertise under the article