ಅಯೋಧ್ಯೆ ರಾಮಮಂದಿರ ದೇಣಿಗೆ ಅವ್ಯವಹಾರ ಆರೋಪ: ಎಫ್ಐಆರ್ ದಾಖಲು
ಅಯೋಧ್ಯೆ ರಾಮಮಂದಿರ ದೇಣಿಗೆ ನಿರ್ವಹಣೆಯಲ್ಲಿ ಅವ್ಯವಹಾರವಾಗಿದೆ ಎಂದು ಆರೋಪಿಸಿ ರಾಮ ಜನ್ಮಭೂಮಿ ಚಳುವಳಿಯ ಕಾರ್ಯಕರ್ತ ಸಂತೋಷ್ ದುಬೆ ಅವರು ದೂರು ದಾಖಲಿಸಿದ್ದಾರೆ. ಸುಮಾರು ಚಿನ್ನ ಬೆಳ್ಳಿ ವಜ್ರಗಳಿಂದ ಅಲಂಕರಿಸಿದ ಸಾವಿರಾರು ಇಟ್ಟಿಗೆಗಳು ನಾಪತ್ತೆಯಾಗಿವೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್‌ನ ಪ್ರಧಾನ ಕಾರ್ಯದರ್ಶಿ ಚಂಪತ್ ರಾಯ್, ಟ್ರಸ್ಟ್ ಸದಸ್ಯ ಅನಿಲ್ ಮಿಶ್ರಾ, ದೇವಾಲಯದ ಆಡಳಿತಾಧಿಕಾರಿ ಗೋಪಾಲ್ ರಾವ್ ಹಾಗೂ ರಾಮ್ ಶಂಕರ್ ಯಾದವ್ ಅಲಿಯಾಸ್ ಟಿನ್ನು ಯಾದವ್ ವಿರುದ್ಧ ಎಫ್‌ಐಆರ್ ದಾಖಲಿಸಿ ತನಿಖೆ ನಡೆಸುವಂತೆ ಅವರು ಆಗ್ರಹಿಸಿದ್ದಾರೆ.
ಅಯೋಧ್ಯೆಯ ರಾಮ ಜನ್ಮಭೂಮಿ ಪೊಲೀಸ್ ಠಾಣೆಗೆ ಸಲ್ಲಿಸಿದ ದೂರಿನಲ್ಲಿ, ರಾಮ ಮಂದಿರ ಚಳವಳಿಯ ಸಂದರ್ಭದಲ್ಲಿ ದೇಶ-ವಿದೇಶಗಳ ಭಕ್ತರು ದೇಣಿಗೆಯಾಗಿ ನೀಡಿದ್ದ ಅಮೂಲ್ಯ ಇಟ್ಟಿಗೆಗಳು ಕಾಣೆಯಾಗಿವೆ ಎಂದು ದುಬೆ ಆರೋಪಿಸಿದ್ದಾರೆ. ಮಾರಿಷಸ್‌ನಿಂದ ಕಳುಹಿಸಲಾಗಿದ್ದ ವಿಶೇಷ ಇಟ್ಟಿಗೆ ಹಾಗೂ ಮುಂಬೈ ಮೂಲದ ಉದ್ಯಮಿಯೊಬ್ಬರು ವಜ್ರಗಳಿಂದ ಅಲಂಕರಿಸಿ ದಾನ ಮಾಡಿದ್ದ ಇಟ್ಟಿಗೆಯೂ ನಾಪತ್ತೆಯಾಗಿದೆ. ವಿಶ್ವ ಹಿಂದೂ ಪರಿಷತ್ ನ ನಾಯಕ ದಿವಂಗತ ಅಶೋಕ್ ಸಿಂಘಾಲ್ ಅವರು ರಾಮ ಮಂದಿರ ನಿರ್ಮಾಣಕ್ಕಾಗಿ ಭಕ್ತರು ಮತ್ತು ಕರಸೇವಕರಿಗೆ ಇಟ್ಟಿಗೆಗಳನ್ನು ದಾನ ಮಾಡುವಂತೆ ಕರೆ ನೀಡಿದ್ದರು. ಅದರಂತೆ ಚಿನ್ನ, ಬೆಳ್ಳಿ ಹಾಗೂ ಇತರ ಅಮೂಲ್ಯ ಲೋಹಗಳಿಂದ ತಯಾರಿಸಲಾದ ಇಟ್ಟಿಗೆಗಳನ್ನು ದಾನ ಮಾಡಲಾಗಿತ್ತು.