-->
 ಡಿವೈಡರ್ ಗೆ ಕಾರು ಡಿಕ್ಕಿ: ಚಾಲಕ ಸಾವು, ಮೂವರು ಗಂಭೀರ

ಡಿವೈಡರ್ ಗೆ ಕಾರು ಡಿಕ್ಕಿ: ಚಾಲಕ ಸಾವು, ಮೂವರು ಗಂಭೀರ


ಕಾರೊಂದು ಚಾಲಕನ ನಿಯಂತ್ರಣ ತಪ್ಪಿ ಡಿವೈಡರ್ ಗೆ ಢಿಕ್ಕಿ ಹೊಡೆದು ಚಾಲಕ ಮೃತಪಟ್ಟ ಘಟನೆ ಮಂಗಳೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯ ಮಾಣಿ ಸಮೀಪದ ಗಡಿಯಾರ ಎಂಬಲ್ಲಿ ನಡೆದಿದೆ.

ಹಾಸನ ಮೂಲದ ಲಕ್ಷ್ಮೀಕಾಂತ್ ಮೃತಪಟ್ಟ ಚಾಲಕ. ಕಾರಿನಲ್ಲಿದ್ದ ರಂಜಿತ್, ದರ್ಶನ್ ಮತ್ತು ಶೋಭಾ ಎಂಬುವವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಗಾಯಾಗಳನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಹಾಸನ ಮೂಲದ ಈ ನಾಲ್ವರು ಬುಧವಾರ ಮಧ್ಯಾಹ್ನ ಕಾರಿನಲ್ಲಿ ಮಂಗಳೂರು ಕಡೆಗೆ ಸಂಚರಿಸುತ್ತಿದ್ದರು. ಕಾರು ಗಡಿಯಾರ ಸಮೀಪದ ತಿರುವಿನಲ್ಲಿ ತಲುಪುತ್ತಿದ್ದಂತೆ ಒಮ್ಮೆಲೇ ಚಾಲಕ ಲಕ್ಷ್ಮೀಕಾಂತ್ ಅವರ ನಿಯಂತ್ರಣ ತಪ್ಪಿ ರಸ್ತೆ ವಿಭಾಜಕಕ್ಕೆ ಢಿಕ್ಕಿ ಹೊಡೆದಿದೆ. ಢಿಕ್ಕಿಯ ರಭಸಕ್ಕೆ ಕಾರು ಹೆದ್ದಾರಿಯಲ್ಲೇ ಹಲವು ಪಲ್ಟಿ ಹೊಡೆದಿದ್ದು, ಸಂಪೂರ್ಣವಾಗಿ ನುಜ್ಜುಗುಜ್ಜಾಗಿದೆ. 

ಸ್ಥಳೀಯ ನಿವಾಸಿಗಳು ಕೂಡಲೇ ನುಜ್ಜುಗುಜ್ಜಾಗಿದ್ದ ಕಾರಿನ ಕಬ್ಬಿಣದ ಅವಶೇಷಗಳ ನಡುವೆ ಸಿಲುಕಿಕೊಂಡಿದ್ದ ನಾಲ್ವರನ್ನು ಹರಸಾಹಸಪಟ್ಟು ಹೊರಗೆ ತೆಗೆದಿದ್ದಾರೆ. ತಕ್ಷಣವೇ ಅವರನ್ನು ಸ್ಥಳೀಯ ಆಸ್ಪತ್ರೆಗೆ ಸಾಗಿಸಲಾಯಿತಾದರೂ, ಗಾಯಾಳುಗಳ ಸ್ಥಿತಿ ಗಂಭೀರವಾಗಿದ್ದರಿಂದ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ರವಾನಿಸಲಾಗಿದೆ.

ಘಟನಾ ಸ್ಥಳಕ್ಕೆ ವಿಟ್ಲ ಪೊಲೀಸ್ ಠಾಣೆಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಅಪಘಾತದ ಹಿನ್ನೆಲೆಯಲ್ಲಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಕೆಲಕಾಲ ವಾಹನ ಸಂಚಾರ ಸಂಪೂರ್ಣ ಸ್ಥಗಿತಗೊಂಡಿತ್ತು. 


Ads on article

Advertise in articles 1

advertising articles 2

Advertise under the article