ಉಡುಪಿ ಸರ್ವಿಸ್ ಬಸ್ ನಿಲ್ದಾಣದ ಅವ್ಯವಸ್ಥೆ ಪರಿಶೀಲಿಸಿದ ಪ್ರಸಾದ್ ರಾಜ್ ಕಾಂಚನ್
Monday, June 08, 2026
ಉಡುಪಿ ನಗರದ ಸರ್ವಿಸ್ ಬಸ್ ನಿಲ್ದಾಣದಲ್ಲಿ ಮಳೆ ನೀರು ಸೋರಿಕೆಯಿಂದ ಪ್ರಯಾಣಿಕರು ಹಾಗೂ ವ್ಯಾಪಾರಿಗಳು ತೀವ್ರ ತೊಂದರೆ ಅನುಭವಿಸುತ್ತಿರುವ ಹಿನ್ನೆಲೆಯಲ್ಲಿ ಕಾಂಗ್ರೆಸ್ ಮುಖಂಡ ಪ್ರಸಾದ್ ರಾಜ್ ಕಾಂಚನ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಬಸ್ ನಿಲ್ದಾಣಕ್ಕೆ ಭೇಟಿ ನೀಡಿದ ಅವರು ಪ್ರಯಾಣಿಕರು ಹಾಗೂ ಅಂಗಡಿ ಮಾಲೀಕರೊಂದಿಗೆ ಮಾತುಕತೆ ನಡೆಸಿ ಸಮಸ್ಯೆಗಳ ಕುರಿತು ಮಾಹಿತಿ ಪಡೆದರು. ಮಳೆಯ ಸಂದರ್ಭದಲ್ಲಿ ಬಸ್ ನಿಲ್ದಾಣದ ಒಳಭಾಗದಲ್ಲಿ ನೀರು ಸೋರಿಕೆಯಾಗುತ್ತಿರುವುದರಿಂದ ಪ್ರಯಾಣಿಕರಿಗೆ ಕುಳಿತುಕೊಳ್ಳಲು ಹಾಗೂ ಸುರಕ್ಷಿತವಾಗಿ ಸಂಚರಿಸಲು ಅಡಚಣೆ ಉಂಟಾಗುತ್ತಿದೆ ಎಂದು ಸಾರ್ವಜನಿಕರು ದೂರಿದರು.
ಈ ವೇಳೆ ಮಾತನಾಡಿದ ಪ್ರಸಾದ್ ರಾಜ್ ಕಾಂಚನ್, ಸಾರ್ವಜನಿಕರ ಸಮಸ್ಯೆಗಳನ್ನು ಈಗಾಗಲೇ ನಗರಸಭೆ ಆಯುಕ್ತರ ಗಮನಕ್ಕೆ ತರಲಾಗಿದ್ದು, ತಕ್ಷಣ ಅಗತ್ಯ ದುರಸ್ತಿ ಹಾಗೂ ನಿರ್ವಹಣಾ ಕ್ರಮ ಕೈಗೊಳ್ಳುವಂತೆ ಮನವಿ ಮಾಡಲಾಗಿದೆ ಎಂದು ತಿಳಿಸಿದರು.
ಇದಲ್ಲದೆ, ಬಸ್ ನಿಲ್ದಾಣದ ಆವರಣದಲ್ಲಿ ಬಸ್‌ಗಳನ್ನು ಅನಗತ್ಯವಾಗಿ ನಿಲ್ಲಿಸುವುದರಿಂದ ಅಂಗಡಿಗಳಿಗೆ ಗ್ರಾಹಕರು ಬಾರದ ಪರಿಸ್ಥಿತಿ ನಿರ್ಮಾಣವಾಗಿದ್ದು, ವ್ಯಾಪಾರಿಗಳಿಗೆ ಆರ್ಥಿಕ ನಷ್ಟ ಉಂಟಾಗುತ್ತಿದೆ ಎಂದು ಅಂಗಡಿ ಮಾಲೀಕರು ಅಳಲು ತೋಡಿಕೊಂಡಿದ್ದಾರೆ ಎಂದರು. ಈ ಕುರಿತು ಪೊಲೀಸ್ ಇಲಾಖೆಯ ಅಧಿಕಾರಿಗಳಿಗೂ ಮಾಹಿತಿ ನೀಡಲಾಗಿದ್ದು, ಸೂಕ್ತ ಪರಿಶೀಲನೆ ನಡೆಸಿ ಸಮಸ್ಯೆ ಪರಿಹರಿಸುವಂತೆ ಕೋರಲಾಗಿದೆ ಎಂದು ಹೇಳಿದರು.
ಉಡುಪಿ ನಗರದ ಪ್ರಮುಖ ಸಾರ್ವಜನಿಕ ಸೌಲಭ್ಯವಾಗಿರುವ ಸರ್ವಿಸ್ ಬಸ್ ನಿಲ್ದಾಣದ ಅವ್ಯವಸ್ಥೆ ಬಗ್ಗೆ ಜನಪ್ರತಿನಿಧಿಗಳು ಹಾಗೂ ಸಂಬಂಧಪಟ್ಟ ಅಧಿಕಾರಿಗಳು ಹೆಚ್ಚಿನ ಗಮನ ಹರಿಸಬೇಕಾಗಿದೆ. ಪ್ರಯಾಣಿಕರು ಮತ್ತು ವ್ಯಾಪಾರಿಗಳ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಕಲ್ಪಿಸಲು ಸಂಬಂಧಪಟ್ಟ ಇಲಾಖೆಗಳು ತ್ವರಿತ ಕ್ರಮ ಕೈಗೊಳ್ಳಬೇಕು ಎಂದು ಪ್ರಸಾದ್ ರಾಜ್ ಕಾಂಚನ್ ಒತ್ತಾಯಿಸಿದರು.
ಸ್ಥಳೀಯರು ಕೂಡ ಬಸ್ ನಿಲ್ದಾಣದ ಮೂಲಭೂತ ಸೌಕರ್ಯಗಳನ್ನು ಸುಧಾರಿಸಿ, ಮಳೆಗಾಲದ ತೊಂದರೆಗಳನ್ನು ನಿವಾರಿಸುವಂತೆ ಆಗ್ರಹಿಸಿದ್ದಾರೆ.
.jpeg)
.jpeg)