ಬಿಲ್ಲವ ಸಮಾಜದ ಅವಹೇಳನ: ಮಹಿಳೆ ವಿರುದ್ದ ಕ್ರಮಕೈಗೊಳ್ಳದಿದ್ದರೆ ಹೋರಾಟ- ಪ್ರವೀಣ್ ಪೂಜಾರಿ ಎಚ್ಚರಿಕೆ
ಸಾಮಾಜಿಕ ಜಾಲತಾಣದಲ್ಲಿ ಬಿಲ್ಲವ ಸಮುದಾಯದ ಬಗ್ಗೆ ಅವಹೇಳನಕಾರಿ ಹೇಳಿಕೆಗಳನ್ನು ಹರಿಬಿಡುತ್ತಿರುವ ಅನಿತಾ ಕಾಸರಗೋಡು ಎಂಬ ಮಹಿಳೆ ವಿರುದ್ಧ ತಕ್ಷಣ ಕಾನೂನು ಕ್ರಮ ಕೈಗೊಳ್ಳುವಂತೆ ಉಡುಪಿ ಜಿಲ್ಲಾ ಬಿಲ್ಲವ ಯುವ ವೇದಿಕೆ ಆಗ್ರಹಿಸಿದೆ.
ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಉಡುಪಿ ಜಿಲ್ಲಾ ಬಿಲ್ಲವ ಯುವ ವೇದಿಕೆ ಅಧ್ಯಕ್ಷ ಪ್ರವೀಣ್ ಪೂಜಾರಿ, ಬ್ರಹ್ಮಶ್ರೀ ನಾರಾಯಣ ಗುರು ಅವರ ಸಮಾನತೆ ಮತ್ತು ಸೌಹಾರ್ದತೆಯ ತತ್ವಗಳನ್ನು ಅನುಸರಿಸುತ್ತಿರುವ ಬಿಲ್ಲವ ಸಮುದಾಯದ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಅವಹೇಳನಕಾರಿ ಮತ್ತು ಪ್ರಚೋದನಕಾರಿ ಹೇಳಿಕೆಗಳನ್ನು ಪ್ರಕಟಿಸಲಾಗುತ್ತಿದೆ. ಸಮಾಜಗಳ ಮಧ್ಯೆ ವೈಮನಸ್ಸು ಮತ್ತು ಸಂಘರ್ಷ ಉಂಟುಮಾಡುವ ರೀತಿಯ ಹೇಳಿಕೆಗಳು ಸಾರ್ವಜನಿಕ ಶಾಂತಿ ಹಾಗೂ ಸಾಮರಸ್ಯಕ್ಕೆ ಧಕ್ಕೆ ತರುವ ಸಾಧ್ಯತೆಯಿದ್ದು, ಸಂಬಂಧಪಟ್ಟ ಇಲಾಖೆಗಳು ಸ್ವಯಂಪ್ರೇರಿತವಾಗಿ ಪ್ರಕರಣ ದಾಖಲಿಸಿ ಸೂಕ್ತ ಕಾನೂನು ಕ್ರಮ ಕೈಗೊಳ್ಳುವ ಅವಕಾಶವಿದ್ದರೂ ಇದುವರೆಗೆ ಯಾವುದೇ ಕ್ರಮ ಜರುಗಿಲ್ಲ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಉಡುಪಿ ಹಾಗೂ ದಕ್ಷಿಣ ಕನ್ನಡ ಜಿಲ್ಲೆ ವ್ಯಾಪ್ತಿಯ ಜನಪ್ರತಿನಿಧಿಗಳಾದ ಶಾಸಕರು ಮತ್ತು ಸಂಸದರು ಈ ವಿಚಾರದಲ್ಲಿ ಸ್ಪಷ್ಟ ನಿಲುವು ವ್ಯಕ್ತಪಡಿಸದೇ ಇರುವುದರಿಂದ ಬಿಲ್ಲವ ಸಮುದಾಯದಲ್ಲಿ ಬೇಸರ ಉಂಟಾಗಿದೆ ಎಂದು ತಿಳಿಸಿದ್ದಾರೆ.
ಸಂಬಂಧಪಟ್ಟ ಪೊಲೀಸ್ ಇಲಾಖೆ ಶೀಘ್ರವಾಗಿ ನಿಷ್ಪಕ್ಷಪಾತ ತನಿಖೆ ನಡೆಸಿ ಕಾನೂನುಬದ್ಧ ಕ್ರಮ ಕೈಗೊಂಡು ನ್ಯಾಯ ಒದಗಿಸಬೇಕು. ಇಲ್ಲವಾದಲ್ಲಿ ಜಿಲ್ಲೆಯ ಎಲ್ಲಾ ಬಿಲ್ಲವ ಸಂಘ–ಸಂಸ್ಥೆಗಳು ಹಾಗೂ ಸಮಾಜದ ಮುಖಂಡರು ಒಗ್ಗಟ್ಟಾಗಿ ಪ್ರತಿಭಟನೆ ಮತ್ತು ಹೋರಾಟದ ಮಾರ್ಗವನ್ನು ಅನುಸರಿಸಲಿದ್ದಾರೆ ಎಂದು ಎಚ್ಚರಿಕೆ ನೀಡಿದ್ದಾರೆ.