ವಿಶೇಷ ಮತದಾರರ ಪಟ್ಟಿ ಪರಿಷ್ಕರಣೆ: ಮನೆ ಮನೆಗೆ ತೆರಳಿ ನಿಖರ ಮಾಹಿತಿ ಸಂಗ್ರಹಿಸಿ– ಕಿರಣ್ ಕುಮಾರ್ ಕೊಡ್ಗಿ
ಭಾರತೀಯ ಜನತಾ ಪಾರ್ಟಿ ನೇತೃತ್ವದಲ್ಲಿ ಕುಂದಾಪುರ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ ಕೆದೂರು, ಬಸ್ರೂರು, ಬಳ್ಕೂರು, ಕೋಣಿ, ಆನಗಳ್ಳಿ ಹಾಗೂ ಕುಂದಾಪುರ ನಗರದ ಬಿಜೆಪಿ ಕಚೇರಿಯಲ್ಲಿ ವಿಶೇಷ ಮತದಾರರ ಪಟ್ಟಿ ಪರಿಷ್ಕರಣೆ ಕುರಿತು ಮಾಹಿತಿ ಕಾರ್ಯಗಾರಗಳು ಸೋಮವಾರ ನಡೆಯಿತು.
ಕುಂದಾಪುರ ನಗರದ ಕಾರ್ಯಗಾರವನ್ನು ಉದ್ಘಾಟಿಸಿ ಮಾತನಾಡಿದ ಕುಂದಾಪುರ ವಿಧಾನಸಭಾ ಕ್ಷೇತ್ರದ ಶಾಸಕ ಎ. ಕಿರಣ್ ಕುಮಾರ್ ಕೊಡ್ಗಿ, ಮತದಾರರ ಪಟ್ಟಿ ಪ್ರಜಾಪ್ರಭುತ್ವದ ಮೂಲ ಆಧಾರವಾಗಿದ್ದು, ಒಬ್ಬ ಅರ್ಹ ಮತದಾರನ ಹೆಸರೂ ಕೈಬಿಡದಂತೆ ಬಿ.ಎಲ್.ಎ-2 ಕಾರ್ಯಕರ್ತರು ಮನೆ ಮನೆಗೆ ತೆರಳಿ ನಿಖರ ಮಾಹಿತಿ ಸಂಗ್ರಹಿಸುವಂತೆ ಕರೆ ನೀಡಿದರು.
ಬಿಜೆಪಿ ಕ್ಷೇತ್ರಾಧ್ಯಕ್ಷ ಸುರೇಶ್ ಶೆಟ್ಟಿ ಗೋಪಾಡಿ ಮಾತನಾಡಿ, ಚುನಾವಣಾ ಆಯೋಗದ ಮಾರ್ಗಸೂಚಿಯಂತೆ ಮತದಾರರ ಪಟ್ಟಿ ಪರಿಷ್ಕರಣೆ ಕಾರ್ಯವನ್ನು ಅಚ್ಚುಕಟ್ಟಾಗಿ ನಡೆಸಬೇಕಿದ್ದು, ವಿಶೇಷವಾಗಿ ಯುವ ಮತದಾರರ ನೋಂದಣಿಗೆ ಹೆಚ್ಚಿನ ಒತ್ತು ನೀಡುವಂತೆ ತಿಳಿಸಿದರು.
ಎಸ್‌ಐಆರ್ ಕುಂದಾಪುರ ಮಂಡಲ ಪ್ರಭಾರಿ ಶ್ಯಾಮಲ ಕುಂದರ್ ಕಾರ್ಯಕರ್ತರಿಗೆ ಮಾರ್ಗದರ್ಶನ ನೀಡಿ, ಹೊಸ ಮತದಾರರ ಸೇರ್ಪಡೆ, ವಿಳಾಸ ಬದಲಾವಣೆ, ಹೆಸರು ಹಾಗೂ ಇತರೆ ವಿವರಗಳ ತಿದ್ದುಪಡಿ ಮತ್ತು ಮರಣ ಹೊಂದಿದವರ ಹೆಸರುಗಳನ್ನು ಮತದಾರರ ಪಟ್ಟಿಯಿಂದ ತೆಗೆದುಹಾಕುವ ಪ್ರಕ್ರಿಯೆಯನ್ನು ಫಾರ್ಮ್-6, 7 ಹಾಗೂ 8ರ ಮೂಲಕ ಹೇಗೆ ನಡೆಸಬೇಕು ಎಂಬುದರ ಕುರಿತು ವಿವರಿಸಿದರು. ನಿಗದಿತ ಕಾಲಮಿತಿಯೊಳಗೆ ಕಾರ್ಯ ಪೂರ್ಣಗೊಳಿಸುವಂತೆ ಸೂಚಿಸಿದರು.
ಕಾರ್ಯಕ್ರಮದಲ್ಲಿ ಮಂಡಲ ನಿಕಟ ಪೂರ್ವ ಅಧ್ಯಕ್ಷ ಶಂಕರ ಅಂಕದಕಟ್ಟೆ, ಪ್ರಧಾನ ಕಾರ್ಯದರ್ಶಿಗಳಾದ ಸತೀಶ್ ಪೂಜಾರಿ ವಕ್ವಾಡಿ ಹಾಗೂ ಸುಧೀರ್ ಕೆ.ಎಸ್., ಜಿಲ್ಲಾ ಕಾರ್ಯದರ್ಶಿ ಸದಾನಂದ ಬಳ್ಕೂರು, ಬಿ.ಎಲ್.ಎ-1 ಕುಂದಾಪುರ ಸಂಚಾಲಕ ರಾಜೇಶ್ ಶೆಟ್ಟಿ, ಮಂಡಲ ಉಪಾಧ್ಯಕ್ಷ ಸುನೀಲ್ ಶೆಟ್ಟಿ ಹೇರಿಕುದ್ರು, ತಾಲೂಕು ಪಂಚಾಯತ್ ಮಾಜಿ ಅಧ್ಯಕ್ಷ ಭಾಸ್ಕರ್ ಬಿಲ್ಲವ, ರಾಜೇಶ್ ಕಾವೇರಿ, ಪುರಸಭೆಯ ಮಾಜಿ ಸದಸ್ಯರು ಸೇರಿದಂತೆ ಪಕ್ಷದ ವಿವಿಧ ಮುಖಂಡರು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.
