ಜು.4: ಉಡುಪಿ ತುಳುಕೂಟದಿಂದ ‘ಮದೆರೆಂಗಿದರಂಗ್’ ಕಾರ್ಯಕ್ರಮ
ತುಳು ಬದುಕಿನ ವೈಶಿಷ್ಟ್ಯಗಳು, ಸಂಪ್ರದಾಯಗಳು ಹಾಗೂ ಸಾಂಸ್ಕೃತಿಕ ಪರಂಪರೆಯನ್ನು ವಿದ್ಯಾರ್ಥಿಗಳಿಗೆ ಪರಿಚಯಿಸುವ ಉದ್ದೇಶದಿಂದ ಉಡುಪಿ ತುಳುಕೂಟದ ಪ್ರಾಯೋಜಕತ್ವದಲ್ಲಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಯೋಗದೊಂದಿಗೆ ‘ಮದೆರೆಂಗಿದರಂಗ್’ ಕಾರ್ಯಕ್ರಮವು ಜುಲೈ 4ರಂದು ಉಡುಪಿ ಬಡಗಬೆಟ್ಟು ಸೊಸೈಟಿಯ ಮೇಲ್ಭಾಗದಲ್ಲಿರುವ ಜಗನ್ನಾಥ ಸಭಾಭವನದಲ್ಲಿ ಮಧ್ಯಾಹ್ನ 2 ಗಂಟೆಯಿಂದ ನಡೆಯಲಿದೆ.
ಕಾರ್ಯಕ್ರಮದ ಅಂಗವಾಗಿ ಶಾಲಾ ಹಾಗೂ ಕಾಲೇಜು ವಿದ್ಯಾರ್ಥಿಗಳಿಗಾಗಿ ವಿವಿಧ ಸಾಂಪ್ರದಾಯಿಕ ಸ್ಪರ್ಧೆಗಳನ್ನು ಆಯೋಜಿಸಲಾಗಿದೆ.
1ರಿಂದ 5ನೇ ತರಗತಿ ವಿದ್ಯಾರ್ಥಿಗಳಿಗೆ ಎಲೆಯಿಂದ ಪೀಂಪಿರಿ ಊದುವ ಸ್ಪರ್ಧೆ, ಹಲಸಿನ ಬೀಜದ ಸಿಪ್ಪೆ ತೆಗೆಯುವ ಸ್ಪರ್ಧೆ ಹಾಗೂ ತೆಂಗಿನ ಗರಿಯಿಂದ ಆಟಿಕೆ ತಯಾರಿಸುವ ಸ್ಪರ್ಧೆಗಳು ನಡೆಯಲಿವೆ.
6ರಿಂದ 10ನೇ ತರಗತಿ ವಿದ್ಯಾರ್ಥಿಗಳಿಗೆ ಅಂಗೈಗೆ ಮದೆರೆಂಗಿ ಇಡುವ ಸ್ಪರ್ಧೆ, ತುಳುನಾಡಿನ ವಿವಿಧ ಹಣ್ಣುಗಳ ಪರಿಚಯ ಹೇಳುವ ಸ್ಪರ್ಧೆ ಹಾಗೂ ತೆಂಗಿನ ಗರಿಯಿಂದ ಆಟಿಕೆ ತಯಾರಿಸುವ ಸ್ಪರ್ಧೆಗಳನ್ನು ಆಯೋಜಿಸಲಾಗಿದೆ.
ಕಾಲೇಜು ವಿದ್ಯಾರ್ಥಿಗಳಿಗಾಗಿ ಅಂಗೈಗೆ ಮದೆರೆಂಗಿ ಇಡುವ ಸ್ಪರ್ಧೆ, ಕೇಶಾಲಂಕಾರ ಸ್ಪರ್ಧೆ, ಮುಂಡಾಸ್ ಕಟ್ಟುವ ಸ್ಪರ್ಧೆ ಹಾಗೂ ಹೂ ಕಟ್ಟುವ ಸ್ಪರ್ಧೆ ನಡೆಯಲಿದೆ.
ಇದರೊಂದಿಗೆ ಎಲ್ಲಾ ವಿಭಾಗದ ವಿದ್ಯಾರ್ಥಿಗಳಿಗೆ ತುಳು ರಸಪ್ರಶ್ನೆ ಹಾಗೂ ತುಳು ಲಿಪಿಯಲ್ಲಿ ಬರೆಯುವ ಸ್ಪರ್ಧೆಯೂ ಇರಲಿದೆ.
ಮದೆರೆಂಗಿ ಸ್ಪರ್ಧೆಯು ಸಂಪೂರ್ಣ ಸಾಂಪ್ರದಾಯಿಕ ವಿಧಾನದಲ್ಲಿ ನಡೆಯಲಿದ್ದು, ಕೋನ್ ಬಳಸಲು ಅವಕಾಶ ಇರುವುದಿಲ್ಲ. ಸ್ಪರ್ಧಿಗಳು ಮದೆರೆಂಗಿ ಸೊಪ್ಪನ್ನು ಕಡೆದು ತಂದು ಕಡ್ಡಿಯ ಸಹಾಯದಿಂದ ಅಂಗೈ ಮೇಲೆ ವಿನ್ಯಾಸ ಬಿಡಿಸಬೇಕು. ಹೂ ಕಟ್ಟುವ ಸ್ಪರ್ಧೆಯಲ್ಲಿ ಭಾಗವಹಿಸುವವರು ಹೂಗಳನ್ನು ತಾವೇ ತರಬೇಕು. ಎಲ್ಲಾ ಸ್ಪರ್ಧಿಗಳು ಮಧ್ಯಾಹ್ನ 2 ಗಂಟೆಯೊಳಗೆ ಕಾರ್ಯಕ್ರಮದ ಸ್ಥಳದಲ್ಲಿ ಹಾಜರಿರಬೇಕು ಎಂದು ಸಂಘಟಕರು ತಿಳಿಸಿದ್ದಾರೆ.
ಹೆಚ್ಚಿನ ಮಾಹಿತಿಗಾಗಿ 9036483463 ಅಥವಾ 8217687475 ಸಂಖ್ಯೆಯನ್ನು ಸಂಪರ್ಕಿಸಬಹುದಾಗಿದೆ ಎಂದು ಉಡುಪಿ ತುಳುಕೂಟದ ಅಧ್ಯಕ್ಷ ಬಿ. ಜಯಕರ ಶೆಟ್ಟಿ ಇಂದ್ರಾಳಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.