-->
ಯುವತಿಗೆ ವಂಚನೆ ಪ್ರಕರಣ: ರಾಜೀಸಂಧಾನಕ್ಕೆ ಹಾಜರಾಗಲು ಆರೋಪಿಗೆ ಹೈಕೋರ್ಟ್ ಸೂಚನೆ

ಯುವತಿಗೆ ವಂಚನೆ ಪ್ರಕರಣ: ರಾಜೀಸಂಧಾನಕ್ಕೆ ಹಾಜರಾಗಲು ಆರೋಪಿಗೆ ಹೈಕೋರ್ಟ್ ಸೂಚನೆ


ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನ ಬಿಜೆಪಿ ಮುಖಂಡರೊಬ್ಬರ ಪುತ್ರ ಕೃಷ್ಣ ಜೆ. ರಾವ್ ವಿರುದ್ಧ ದಾಖಲಾಗಿರುವ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಕರಣವನ್ನು ರಾಜಿ ಸಂಧಾನದ ಮೂಲಕ ಇತ್ಯರ್ಥಪಡಿಸಿಕೊಳ್ಳುವ ಪ್ರಸ್ತಾಪವನ್ನು ಕರ್ನಾಟಕ ಹೈಕೋರ್ಟ್ ಪರಿಗಣಿಸಿದೆ.

ತಮ್ಮ ವಿರುದ್ಧ ದಾಖಲಾಗಿರುವ ಅತ್ಯಾಚಾರ ಪ್ರಕರಣದ ತನಿಖೆಗೆ ತಡೆ ಕೋರಿ ಕೃಷ್ಣ ಜೆ. ರಾವ್ ಸಲ್ಲಿಸಿರುವ ರಿಟ್ ಅರ್ಜಿಯ ವಿಚಾರಣೆ ಬುಧವಾರ ಕರ್ನಾಟಕ ಹೈಕೋರ್ಟ್‌ನ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಏಕಸದಸ್ಯ ಪೀಠದ ಮುಂದೆ ನಡೆಯಿತು.

ವಿಚಾರಣೆ ವೇಳೆ ಆರೋಪಿ ಪರ ಹಾಜರಾಗಿದ್ದ ಹಿರಿಯ ವಕೀಲ ಪಿ.ಪಿ. ಹೆಗ್ಡೆ, ಪ್ರಕರಣವನ್ನು ರಾಜಿ ಸಂಧಾನದ ಮೂಲಕ ಇತ್ಯರ್ಥಪಡಿಸಿಕೊಳ್ಳಲು ಕಕ್ಷಿದಾರರು ಸಿದ್ಧರಿದ್ದು, ಈ ಸಂಬಂಧದ ಪ್ರಸ್ತಾಪವನ್ನು ನ್ಯಾಯಾಲಯ ಪರಿಗಣಿಸಬೇಕೆಂದು ಮನವಿ ಮಾಡಿದರು.

ಈ ಮನವಿಯನ್ನು ಪರಿಗಣಿಸಿದ ನ್ಯಾಯಪೀಠವು, ಪ್ರಕರಣಕ್ಕೆ ಸಂಬಂಧಿಸಿದ ಸಂತ್ರಸ್ತೆ, ಆರೋಪಿ ಹಾಗೂ ಇತರೆ ಪ್ರಮುಖ ವ್ಯಕ್ತಿಗಳು ಜೂನ್ 19ರಂದು ಹೈಕೋರ್ಟ್ ಮಧ್ಯಸ್ಥಿಕೆ ಕೇಂದ್ರಕ್ಕೆ ಕಡ್ಡಾಯವಾಗಿ ಹಾಜರಾಗುವಂತೆ ಸೂಚಿಸಿದೆ. ಜೊತೆಗೆ ಪ್ರಕರಣದ ಮುಂದಿನ ವಿಚಾರಣೆಯನ್ನು ಜೂನ್ 30ಕ್ಕೆ ಮುಂದೂಡಿದೆ.

ಇದೇ ವೇಳೆ ಸಂತ್ರಸ್ತೆಯ ಜೀವನಾಂಶಕ್ಕೆ ಸಂಬಂಧಿಸಿದಂತೆ ನ್ಯಾಯಾಲಯ ಮಹತ್ವದ ನಿರ್ದೇಶನ ನೀಡಿದೆ. ಈಗಾಗಲೇ ಹೈಕೋರ್ಟ್‌ನಲ್ಲಿ ಠೇವಣಿ ಇಡಲಾಗಿರುವ ಮೊದಲ ತಿಂಗಳ ಜೀವನಾಂಶ ಪರಿಹಾರ ಮೊತ್ತ ₹75,000 ಅನ್ನು ತಕ್ಷಣವೇ ಸಂತ್ರಸ್ತೆಗೆ ಪಾವತಿಸುವಂತೆ ರಿಜಿಸ್ಟ್ರಿಗೆ ಸೂಚಿಸಿದೆ.

ಅಲ್ಲದೆ, ಎರಡನೇ ತಿಂಗಳ ಜೀವನಾಂಶ ಪರಿಹಾರ ಮೊತ್ತವಾದ ₹75,000 ಅನ್ನು ಮುಂದಿನ ನಾಲ್ಕು ದಿನಗಳೊಳಗೆ ನ್ಯಾಯಾಲಯದಲ್ಲಿ ಕಡ್ಡಾಯವಾಗಿ ಠೇವಣಿ ಇಡಬೇಕೆಂದು ಆರೋಪಿ ಕೃಷ್ಣ ಜೆ. ರಾವ್‌ಗೆ ನ್ಯಾಯಾಲಯ ಕಟ್ಟುನಿಟ್ಟಿನ ಆದೇಶ ನೀಡಿದೆ.

Ads on article

Advertise in articles 1

advertising articles 2

Advertise under the article