-->
SIR ಪ್ರಕ್ರಿಯೆಯಲ್ಲಿ ಅರ್ಹ ಮತದಾರರು ಮತದಾನದ ಹಕ್ಕಿನಿಂದ ವಂಚಿತರಾಗಬಾರದು: ಜಯಪ್ರಕಾಶ್ ಹೆಗ್ಡೆ

SIR ಪ್ರಕ್ರಿಯೆಯಲ್ಲಿ ಅರ್ಹ ಮತದಾರರು ಮತದಾನದ ಹಕ್ಕಿನಿಂದ ವಂಚಿತರಾಗಬಾರದು: ಜಯಪ್ರಕಾಶ್ ಹೆಗ್ಡೆ


ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಮತದಾನ ಪ್ರತಿಯೊಬ್ಬ ಪ್ರಜೆಯ ಸಂವಿಧಾನಬದ್ಧ ಹಕ್ಕಾಗಿದ್ದು, ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (SIR) ಪ್ರಕ್ರಿಯೆಯಲ್ಲಿ ಯಾವುದೇ ಅರ್ಹ ಮತದಾರರು ಮತದಾನದ ಹಕ್ಕಿನಿಂದ ವಂಚಿತರಾಗದಂತೆ ಎಚ್ಚರಿಕೆ ವಹಿಸಬೇಕು ಎಂದು ಮಾಜಿ ಸಂಸದ ಕೆ. ಜಯಪ್ರಕಾಶ್ ಹೆಗ್ಡೆ ಕರೆ ನೀಡಿದ್ದಾರೆ.

SIR ಪ್ರಕ್ರಿಯೆಯ ಉದ್ದೇಶ ಮತದಾರರ ಪಟ್ಟಿಯನ್ನು ಹೆಚ್ಚು ನಿಖರ ಹಾಗೂ ದೋಷರಹಿತಗೊಳಿಸುವುದಾಗಿದೆ. ಆದರೆ ಅರಿವಿನ ಕೊರತೆ ಅಥವಾ ನಿರ್ಲಕ್ಷ್ಯದಿಂದ ಅರ್ಹ ಮತದಾರರ ಹೆಸರುಗಳು ಪಟ್ಟಿಯಿಂದ ಕೈತಪ್ಪುವುದು, ಹೊಸ ಮತದಾರರ ಸೇರ್ಪಡೆ ಆಗದೆ ಉಳಿಯುವುದು, ಅಗತ್ಯ ತಿದ್ದುಪಡಿಗಳು ನಡೆಯದೆ ಹೋಗುವುದು ಅಥವಾ ಅನುಮಾನಾಸ್ಪದ ನೋಂದಣಿಗಳ ಬಗ್ಗೆ ಸಮಯಕ್ಕೆ ಆಕ್ಷೇಪಣೆ ಸಲ್ಲಿಕೆಯಾಗದಂತಹ ಸಮಸ್ಯೆಗಳು ಎದುರಾಗುವ ಸಾಧ್ಯತೆ ಇದೆ ಎಂದು ತಿಳಿಸಿದ್ದಾರೆ.

ಕಾಂಗ್ರೆಸ್ ಪಕ್ಷದ ನಾಯಕತ್ವವು ಬೂತ್ ಮಟ್ಟದ ಏಜೆಂಟ್‌ಗಳಿಗೆ (BLA) ಸಮಗ್ರ ತರಬೇತಿ ನೀಡಿ, ಫಾರ್ಮ್-6, ಫಾರ್ಮ್-7 ಹಾಗೂ ಫಾರ್ಮ್-8 ಬಳಕೆ, ಕರಡು ಮತದಾರರ ಪಟ್ಟಿಯ ಪರಿಶೀಲನೆ, ಆಕ್ಷೇಪಣೆ ಸಲ್ಲಿಸುವ ವಿಧಾನ ಹಾಗೂ ನಿಗದಿತ ಕಾಲಮಿತಿಗಳ ಕುರಿತು ಸಂಪೂರ್ಣ ಮಾಹಿತಿ ನೀಡಬೇಕು ಎಂದು ಅವರು ಹೇಳಿದ್ದಾರೆ. ಬೂತ್ ಮಟ್ಟದಲ್ಲಿ ಮನೆಮನೆ ಸಂಪರ್ಕ ನಡೆಸಿ ಪ್ರತಿಯೊಬ್ಬ ಮತದಾರರ ಹೆಸರು ಹಾಗೂ ವಿವರಗಳನ್ನು ಪರಿಶೀಲಿಸುವ ಕಾರ್ಯವನ್ನು ತಕ್ಷಣ ಆರಂಭಿಸಬೇಕು ಎಂದು ಸೂಚಿಸಿದ್ದಾರೆ.

ಜೂನ್ 30ರಿಂದ ಜುಲೈ 29ರವರೆಗೆ ಪ್ರತಿಯೊಬ್ಬ ಮತದಾರರು ತಮ್ಮ ಬೂತ್‌ನ BLO ಅವರನ್ನು ಸಂಪರ್ಕಿಸಿ Enumeration Form (EF) ಅನ್ನು ಸರಿಯಾದ ಮಾಹಿತಿಯೊಂದಿಗೆ ಭರ್ತಿ ಮಾಡಿ ಸಲ್ಲಿಸಬೇಕು. ಅಗತ್ಯವಿರುವ ಸಂದರ್ಭಗಳಲ್ಲಿ 2002ರ ಮತದಾರರ ಪಟ್ಟಿಯಲ್ಲಿನ ತಮ್ಮ ಅಥವಾ ಪೋಷಕರು ಹಾಗೂ ಅಜ್ಜ-ಅಜ್ಜಿಯರ ಮತದಾರರ ವಿವರಗಳನ್ನು ಒದಗಿಸಬೇಕಾಗಬಹುದು. ಚುನಾವಣಾ ಆಯೋಗ ಸೂಚಿಸಿರುವ 11 ದಾಖಲೆಗಳಲ್ಲಿ ಅಗತ್ಯ ದಾಖಲೆಗಳನ್ನು ಮುಂಚಿತವಾಗಿ ಸಿದ್ಧವಾಗಿಟ್ಟುಕೊಳ್ಳುವಂತೆ ಅವರು ಮನವಿ ಮಾಡಿದ್ದಾರೆ.

ಪ್ರತಿಯೊಬ್ಬ ಮತದಾರರೂ ತಮ್ಮ ಹೆಸರು ಮತದಾರರ ಪಟ್ಟಿಯಲ್ಲಿದೆಯೇ, ಹೆಸರು, ವಿಳಾಸ, ವಯಸ್ಸು, ಫೋಟೋ ಹಾಗೂ ಇತರ ವಿವರಗಳು ಸರಿಯಾಗಿವೆಯೇ ಎಂಬುದನ್ನು ಪರಿಶೀಲಿಸಬೇಕು. ಯಾವುದೇ ತಪ್ಪು ಕಂಡುಬಂದರೆ ತಕ್ಷಣ ಸಂಬಂಧಿತ ಅರ್ಜಿಗಳ ಮೂಲಕ ತಿದ್ದುಪಡಿ ಮಾಡಿಸಿಕೊಳ್ಳಬೇಕು ಎಂದು ಅವರು ಸಲಹೆ ನೀಡಿದ್ದಾರೆ.

ಬೂತ್ ಮಟ್ಟದ ಏಜೆಂಟ್‌ಗಳು ಮತದಾರರ ಪಟ್ಟಿಯನ್ನು ನಿರಂತರವಾಗಿ ಪರಿಶೀಲಿಸಿ, ಹೊಸ ಮತದಾರರ ಸೇರ್ಪಡೆಗೆ ನೆರವಾಗಬೇಕು. ಮೃತರು ಹಾಗೂ ಶಾಶ್ವತವಾಗಿ ಸ್ಥಳಾಂತರಗೊಂಡವರ ವಿವರಗಳನ್ನು ನವೀಕರಿಸುವುದರ ಜೊತೆಗೆ, ಅರ್ಹ ಮತದಾರರ ಹೆಸರುಗಳು ಕೈತಪ್ಪದಂತೆ ನೋಡಿಕೊಳ್ಳಬೇಕು ಹಾಗೂ ಅನುಮಾನಾಸ್ಪದ ಅಥವಾ ಅನರ್ಹ ನೋಂದಣಿಗಳ ವಿರುದ್ಧ ಕಾನೂನುಬದ್ಧ ಆಕ್ಷೇಪಣೆ ಸಲ್ಲಿಸಬೇಕು ಎಂದು ಅವರು ಹೇಳಿದ್ದಾರೆ.

ಮತದಾರರ ಪಟ್ಟಿಯ ರಕ್ಷಣೆ ಚುನಾವಣಾ ದಿನದ ಕೆಲಸವಲ್ಲ; ಅದು ನಿರಂತರವಾಗಿ ನಡೆಯಬೇಕಾದ ಸಂಘಟನಾ ಕಾರ್ಯವಾಗಿದೆ. ಬಲವಾದ BLA ವ್ಯವಸ್ಥೆ, ಜಾಗೃತ ಮತದಾರರು ಹಾಗೂ ಸಕಾಲಿಕ ಪರಿಶೀಲನೆಯ ಮೂಲಕ ಮಾತ್ರ ಮತದಾರರ ಪಟ್ಟಿಯ ನಿಖರತೆಯನ್ನು ಕಾಪಾಡಲು ಸಾಧ್ಯ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ಚುನಾವಣೆ ಗೆಲ್ಲುವ ಸಿದ್ಧತೆ ಮತದಾನದ ದಿನ ಆರಂಭವಾಗುವುದಿಲ್ಲ; ಅದು ಮತದಾರರ ಪಟ್ಟಿಯ ರಕ್ಷಣೆಯಿಂದ ಆರಂಭವಾಗುತ್ತದೆ. ಆದ್ದರಿಂದ ಗ್ರಾಮ ಪಂಚಾಯತ್, ತಾಲ್ಲೂಕು ಪಂಚಾಯತ್, ಜಿಲ್ಲಾ ಪಂಚಾಯತ್, ಪುರಸಭೆ, ಪಟ್ಟಣ ಪಂಚಾಯತ್, ವಿಧಾನಸಭಾ ಹಾಗೂ ಲೋಕಸಭಾ ಅಭ್ಯರ್ಥಿ ಆಕಾಂಕ್ಷಿಗಳು, ಪ್ರತಿಯೊಬ್ಬ BLA, ಕಾರ್ಯಕರ್ತ ಮತ್ತು ಮತದಾರರು SIR ಪ್ರಕ್ರಿಯೆಯನ್ನು ಅತ್ಯಂತ ಗಂಭೀರವಾಗಿ ಪರಿಗಣಿಸಿ ಜವಾಬ್ದಾರಿಯುತವಾಗಿ ಕಾರ್ಯನಿರ್ವಹಿಸಬೇಕು ಎಂದು ಮಾಜಿ ಸಂಸದ ಕೆ. ಜಯಪ್ರಕಾಶ್ ಹೆಗ್ಡೆ ಹೇಳಿದ್ದಾರೆ.

Ads on article

Advertise in articles 1

advertising articles 2

Advertise under the article