-->
 ನಮೂನೆ 11ಎ, 11ಬಿ ತಿದ್ದುಪಡಿ ಸೇವೆ ಪುನರಾರಂಭಕ್ಕೆ ಶಾಸಕ ಯಶ್ಪಾಲ್ ಸುವರ್ಣ ಆಗ್ರಹ

ನಮೂನೆ 11ಎ, 11ಬಿ ತಿದ್ದುಪಡಿ ಸೇವೆ ಪುನರಾರಂಭಕ್ಕೆ ಶಾಸಕ ಯಶ್ಪಾಲ್ ಸುವರ್ಣ ಆಗ್ರಹ


ಕಳೆದ ಹಲವು ವಾರಗಳಿಂದ ಸ್ಥಗಿತಗೊಂಡಿರುವ ನಮೂನೆ 11ಎ ಮತ್ತು 11ಬಿ ತಿದ್ದುಪಡಿ ಸೇವೆಯನ್ನು ತಕ್ಷಣ ಪುನರಾರಂಭಿಸುವಂತೆ ಕಂದಾಯ ಸಚಿವ ಈಶ್ವರ್ ಖಂಡ್ರೆ ಅವರಿಗೆ ಉಡುಪಿ ಶಾಸಕ ಯಶ್ ಪಾಲ್ ಸುವರ್ಣ ಅವರು ಪತ್ರ ಬರೆದು ಆಗ್ರಹಿಸಿದ್ದಾರೆ.

ಗ್ರಾಮ ಪಂಚಾಯತ್ ಗಳಿಂದ ನೀಡಲಾಗುವ ನಮೂನೆ 11ಎ ಹಾಗೂ 11ಬಿಗಳಲ್ಲಿ ಕಣ್ತಪ್ಪಿನಿಂದ ಉಂಟಾಗುವ ಸಣ್ಣಪುಟ್ಟ ದೋಷಗಳನ್ನು ಈವರೆಗೆ ಗ್ರಾಮ ಪಂಚಾಯತ್ ಗಳ ಮೂಲಕ ಆನ್‌ಲೈನ್‌ನಲ್ಲಿ ತಾಲೂಕು ಪಂಚಾಯತ್ ಕಾರ್ಯನಿರ್ವಹಣಾಧಿಕಾರಿಗಳ ಅನುಮೋದನೆ ಪಡೆದು ತಿದ್ದುಪಡಿ ಮಾಡಲಾಗುತ್ತಿತ್ತು. ಆದರೆ, ಕಳೆದ ಮೂರು ವಾರಗಳಿಂದ ಕಾರ್ಯನಿರ್ವಹಣಾಧಿಕಾರಿಗಳ ಲಾಗಿನ್‌ನಲ್ಲಿ ಈ ಸೇವೆಯನ್ನು ತಂತ್ರಾಂಶದಲ್ಲಿ ಸ್ಥಗಿತಗೊಳಿಸಿರುವುದರಿಂದ ಸಾರ್ವಜನಿಕರು ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ ಎಂದು ಶಾಸಕರು ತಿಳಿಸಿದ್ದಾರೆ.

ತಾಂತ್ರಿಕ ಸಮಸ್ಯೆಯಿಂದ ನಮೂನೆಗಳಲ್ಲಿನ ದೋಷಗಳನ್ನು ಸರಿಪಡಿಸಲು ಸಾಧ್ಯವಾಗುತ್ತಿಲ್ಲ. ಇದರಿಂದ ನಿವೇಶನ ಹಾಗೂ ಮನೆಗಳ ನೋಂದಣಿ ಪ್ರಕ್ರಿಯೆಗಳು ವಿಳಂಬವಾಗುತ್ತಿದ್ದು, ಸಾರ್ವಜನಿಕರು ಅನಗತ್ಯ ಸಂಕಷ್ಟಕ್ಕೆ ಒಳಗಾಗುವಂತಾಗಿದೆ. ವಿಶೇಷವಾಗಿ ಪರರಾಜ್ಯ ಹಾಗೂ ವಿದೇಶಗಳಿಂದ ತಮ್ಮ ಆಸ್ತಿ ಸಂಬಂಧಿತ ಕೆಲಸಗಳಿಗಾಗಿ ಆಗಮಿಸಿರುವವರು ಸಹ ಈ ಸಮಸ್ಯೆಯಿಂದಾಗಿ ಕಾಯುವ ಪರಿಸ್ಥಿತಿ ಎದುರಿಸುತ್ತಿದ್ದಾರೆ.

ಈ ಹಿನ್ನೆಲೆಯಲ್ಲಿ ಸಮಸ್ಯೆಯನ್ನು  ಸಂಬಂಧಿತ ಇಲಾಖೆಯ ಸಚಿವರು ಹಾಗೂ ಅಧಿಕಾರಿಗಳ ಗಮನಕ್ಕೆ ತಂದಿರುವ ಶಾಸಕ ಯಶ್ ಪಾಲ್ ಸುವರ್ಣ ಅವರು, ಸಾರ್ವಜನಿಕ ಹಿತದೃಷ್ಟಿಯಿಂದ ನಮೂನೆ 11ಎ ಮತ್ತು 11ಬಿ ತಿದ್ದುಪಡಿ ಸೇವೆಯನ್ನು ಯಾವುದೇ ವಿಳಂಬವಿಲ್ಲದೆ ಪುನರಾರಂಭಿಸುವಂತೆ ರಾಜ್ಯ ಸರ್ಕಾರಕ್ಕೆ ಒತ್ತಾಯಿಸಿದ್ದಾರೆ.

Ads on article

Advertise in articles 1

advertising articles 2

Advertise under the article