ಆಗುಂಬೆ ಘಾಟ್‌ಗೆ ಸಚಿವ ಸತೀಶ್ ಜಾರಕಿಹೊಳಿ ಭೇಟಿ: ಅಧಿಕಾರಿಗಳೊಂದಿಗೆ ಚರ್ಚೆ (Video)
ಕರ್ನಾಟಕದ ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಅವರು ಇಂದು ಆಗುಂಬೆ ಘಾಟ್‌ಗೆ ಭೇಟಿ ನೀಡಿ ರಸ್ತೆ ಪರಿಸ್ಥಿತಿ ಹಾಗೂ ಅಭಿವೃದ್ಧಿ ಸಾಧ್ಯತೆಗಳ ಕುರಿತು ಪರಿಶೀಲನೆ ನಡೆಸಿದರು.
ಆಗುಂಬೆ ಘಾಟ್‌ನ ಸೂರ್ಯಾಸ್ತ ವೀಕ್ಷಣಾ ಸ್ಥಳದಿಂದ ಘಾಟ್ ಪ್ರದೇಶವನ್ನು ವೀಕ್ಷಿಸಿ, ಅಲ್ಲಿನ ಭೌಗೋಳಿಕ ಪರಿಸ್ಥಿತಿ, ರಸ್ತೆ ಸ್ಥಿತಿಗತಿ ಹಾಗೂ ಭವಿಷ್ಯದ ಕಾಮಗಾರಿಗಳ ಕುರಿತು ಲೋಕೋಪಯೋಗಿ ಇಲಾಖೆಯ ಇಂಜಿನಿಯರ್‌ಗಳೊಂದಿಗೆ ಸಮಾಲೋಚನೆ ನಡೆಸಿದರು.
ಆಗುಂಬೆ ಘಾಟ್‌ನಲ್ಲಿ ಟನಲ್ ನಿರ್ಮಾಣ ಹಾಗೂ ಡಬಲ್ ರಸ್ತೆ ಮಾಡುವ ವಿಚಾರದ ಕುರಿತು ಪ್ರತಿಕ್ರಿಯಿಸಿದ ಸಚಿವರು, “ಟನಲ್ ಮಾಡಬೇಕು ಎನ್ನುವ ವಿಚಾರದ ಬಗ್ಗೆ ಇದುವರೆಗೆ ಯಾವುದೇ ಅಂತಿಮ ನಿರ್ಧಾರ ಕೈಗೊಂಡಿಲ್ಲ. ಡಬಲ್ ರಸ್ತೆ ನಿರ್ಮಾಣಕ್ಕೆ ಸಂಬಂಧಿಸಿದಂತೆ ವನ್ಯಜೀವಿ ಇಲಾಖೆ ಹಾಗೂ ಅರಣ್ಯ ಇಲಾಖೆಯ ಅನುಮತಿ ಸೇರಿದಂತೆ ಹಲವು ಸಮಸ್ಯೆಗಳಿವೆ. ಸಂಬಂಧಪಟ್ಟ ಇಲಾಖೆಗಳ ಅಧಿಕಾರಿಗಳೊಂದಿಗೆ ಚರ್ಚಿಸಿ ಮುಂದಿನ ನಿರ್ಧಾರ ಕೈಗೊಳ್ಳಲಾಗುವುದು” ಎಂದು ತಿಳಿಸಿದರು.
ಘಾಟ್ ರಸ್ತೆಗಳ ಅಭಿವೃದ್ಧಿ ಕುರಿತು ಮಾತನಾಡಿದ ಅವರು, “ಸಕಲೇಶಪುರ ಘಾಟ್‌ನ ಸಮಸ್ಯೆಯನ್ನು ಮೂರು ವರ್ಷಗಳ ಅವಧಿಯಲ್ಲಿ ಸರಿಪಡಿಸಲಾಗಿದೆ. ಚಾರ್ಮಾಡಿ ಘಾಟ್ ದುರಸ್ತಿ ಕಾಮಗಾರಿಗೆ ಸಂಬಂಧಿಸಿದಂತೆ ಟೆಂಡರ್ ಪ್ರಕ್ರಿಯೆ ನಡೆದಿದೆ” ಎಂದರು.
ಆಗುಂಬೆ ಘಾಟ್ ಅಭಿವೃದ್ಧಿ ವಿಚಾರದಲ್ಲಿ ಮೊದಲು ಹೆಬ್ರಿ ಮತ್ತು ಕಾರ್ಕಳ ಭಾಗದ ಅಧಿಕಾರಿಗಳೊಂದಿಗೆ ಚರ್ಚಿಸಲಾಗುವುದು. ನಂತರ ಬೆಂಗಳೂರಿನಲ್ಲಿ ಈ ಕುರಿತು ಅಂತಿಮ ತೀರ್ಮಾನ ತೆಗೆದುಕೊಳ್ಳಲಾಗುವುದು ಎಂದು ಸಚಿವರು ಹೇಳಿದರು.
ಕೇಂದ್ರ ಸರ್ಕಾರ ಆಗುಂಬೆ ಘಾಟ್ ಟನಲ್ ನಿರ್ಮಾಣಕ್ಕೆ ಟೆಂಡರ್ ಕರೆದಿರುವ ವಿಚಾರದ ಕುರಿತು ಪ್ರತಿಕ್ರಿಯಿಸಿದ ಸಚಿವರು, “ಕೇಂದ್ರ ಸರ್ಕಾರ ಟೆಂಡರ್ ಕರೆದಿದೆ, ಆದರೆ ಇದುವರೆಗೆ ಯಾರೂ ಟೆಂಡರ್ ಅರ್ಜಿ ಸಲ್ಲಿಸಿಲ್ಲ. ಡಿಪಿಆರ್ ಸೇರಿದಂತೆ ಇತರ ವಿಚಾರಗಳ ಬಗ್ಗೆ ಇನ್ನೂ ಸ್ಪಷ್ಟತೆ ಇಲ್ಲ” ಎಂದು ಹೇಳಿದರು.
ಆಗುಂಬೆ ಘಾಟ್ ರಸ್ತೆ ಅಗಲೀಕರಣ ಹಾಗೂ ಸುಧಾರಣೆಯ ಸಾಧ್ಯತೆಗಳನ್ನು ಪರಿಶೀಲಿಸುವ ಉದ್ದೇಶದಿಂದ ಭೇಟಿ ನೀಡಿರುವುದಾಗಿ ಸಚಿವರು ತಿಳಿಸಿದರು. ಘಾಟ್ ಪ್ರದೇಶದ ಪರಿಸರ ಸಂರಕ್ಷಣೆ ಹಾಗೂ ರಸ್ತೆ ಅಭಿವೃದ್ಧಿಯ ನಡುವೆ ಸಮತೋಲನ ಕಾಯ್ದುಕೊಂಡು ಮುಂದಿನ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ಹೇಳಿದರು.
.jpeg)
