-->
 ಜು.15: ಉಡುಪಿಯಲ್ಲಿ ‘ವಂದೇ ಮಾತರಂ’ 150ನೇ ವರ್ಷದ ಸಂಭ್ರಮ: ಯುವ ರಂಗೋತ್ಸವ

ಜು.15: ಉಡುಪಿಯಲ್ಲಿ ‘ವಂದೇ ಮಾತರಂ’ 150ನೇ ವರ್ಷದ ಸಂಭ್ರಮ: ಯುವ ರಂಗೋತ್ಸವ


ಕೇಂದ್ರ ಸರ್ಕಾರದ ಸಂಸ್ಕೃತಿ ಸಚಿವಾಲಯದ ಅಧೀನದಲ್ಲಿರುವ ನವದೆಹಲಿಯ ಕೇಂದ್ರ ಸಂಗೀತ ನಾಟಕ ಅಕಾಡೆಮಿಯ ಆಶ್ರಯದಲ್ಲಿ ‘ವಂದೇ ಮಾತರಂ’ 150ನೇ ವರ್ಷದ ಸಂಭ್ರಮ ಹಾಗೂ ಕವಿ ಚಕ್ರವರ್ತಿ ಕಾಳಿದಾಸ ಜಯಂತಿ ಅಂಗವಾಗಿ ರಾಷ್ಟ್ರವ್ಯಾಪಿ ರಾಷ್ಟ್ರೀಯ ನಾಟಕೋತ್ಸವ ಜುಲೈ 15ರಂದು ದೇಶಾದ್ಯಂತ ಏಕಕಾಲದಲ್ಲಿ ನಡೆಯಲಿದೆ. ಅದರಂತೆ ಉಡುಪಿಯ ಎಂಜಿಎಂ ಕಾಲೇಜಿನ ಮುದ್ದಣ ಮಂಟಪದಲ್ಲಿ  ಜುಲೈ 15ರಂದು ರಂಗಭೂಮಿ ಉಡುಪಿ ಹಾಗೂ ಮಹಾತ್ಮ ಗಾಂಧಿ ಮೆಮೋರಿಯಲ್ ಕಾಲೇಜು ಉಡುಪಿ ಇದರ ಸಹಭಾಗಿತ್ವದಲ್ಲಿ ‘ವಂದೇ ಮಾತರಂ’ ಉತ್ಸವ ಹಾಗೂ ಯುವ ರಂಗೋತ್ಸವ ಹಾಗೂ ಸ್ವಾತಂತ್ರ್ಯ ಶರಧಿ ಕನ್ನಡ ನಾಟಕ ಪ್ರದರ್ಶನಗೊಳ್ಳಲಿದೆ ಎಂದು ಉಡುಪಿ ರಂಗಭೂಮಿಯ ಪ್ರಧಾನ ಕಾರ್ಯದರ್ಶಿ ಪ್ರದೀಪ್ ಚಂದ್ರ ಕುತ್ಪಾಡಿ ತಿಳಿಸಿದ್ದಾರೆ. 

ಅವರು ಉಡುಪಿಯಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದರು. ದೇಶಪ್ರೇಮ, ಸಂಸ್ಕೃತಿ ಹಾಗೂ ಭಾರತೀಯ ರಂಗಭೂಮಿಯ ಪರಂಪರೆಯನ್ನು ಜನಸಾಮಾನ್ಯರಿಗೆ ತಲುಪಿಸುವ ಉದ್ದೇಶದಿಂದ ದೇಶದಾದ್ಯಂತ 150ಕ್ಕೂ ಅಧಿಕ ರಂಗಪ್ರಯೋಗಗಳನ್ನು ಆಯೋಜಿಸಲಾಗಿದೆ. 39ಕ್ಕೂ ಹೆಚ್ಚು ಭಾಷೆ ಮತ್ತು ಉಪಭಾಷೆಗಳಲ್ಲಿ ಈ ರಂಗೋತ್ಸವ ನಡೆಯಲಿದ್ದು, ‘ಒಂದು ದೇಶ–ಒಂದು ಆಚರಣೆ’ ಎಂಬ ಭಾವೈಕ್ಯತೆಯ ಸಂದೇಶ ಸಾರಲಿದೆ. ಸುಮಾರು 4 ಸಾವಿರಕ್ಕೂ ಅಧಿಕ ರಂಗಕರ್ಮಿಗಳು ಭಾಗವಹಿಸಲಿದ್ದು, 150ಕ್ಕೂ ಹೆಚ್ಚು ಸಂಸ್ಥೆಗಳು ಸಹಭಾಗಿತ್ವ ವಹಿಸಿವೆ. 20 ಲಕ್ಷಕ್ಕೂ ಹೆಚ್ಚು ಪ್ರೇಕ್ಷಕರನ್ನು ತಲುಪುವ ಗುರಿಯೊಂದಿಗೆ ಯುವಜನರಲ್ಲಿ ರಂಗಭೂಮಿ ಹಾಗೂ ಭಾರತೀಯ ಸಂಸ್ಕೃತಿಯ ಬಗ್ಗೆ ಜಾಗೃತಿ ಮೂಡಿಸುವ ಉದ್ದೇಶದಿಂದ ಕಾರ್ಯಕ್ರಮ ರೂಪಿಸಲಾಗಿದೆ.

ಕರ್ನಾಟಕದಲ್ಲಿ ಬೆಂಗಳೂರು ಜೊತೆಗೆ ಉಡುಪಿಯನ್ನು ಈ ವಿಶೇಷ ಉತ್ಸವಕ್ಕೆ ಆಯ್ಕೆ ಮಾಡಿರುವುದು ಜಿಲ್ಲೆಯ ಹೆಮ್ಮೆಯ ಸಂಗತಿಯಾಗಿದೆ. ಕಾರ್ಯಕ್ರಮದ ಸಂಪೂರ್ಣ ಉಸ್ತುವಾರಿಯನ್ನು ಆರು ದಶಕಗಳ ಇತಿಹಾಸ ಹೊಂದಿರುವ ಉಡುಪಿ ರಂಗಭೂಮಿ ಸಂಸ್ಥೆಗೆ ವಹಿಸಿರುವುದು ಸಂಸ್ಥೆಯ ಕಲಾಸೇವೆಗೆ ಸಂದ ಗೌರವವಾಗಿದೆ.

ಜುಲೈ 15ರಂದು ಸಂಜೆ 5.30ಕ್ಕೆ ಉಡುಪಿಯ ಎಂಜಿಎಂ ಕಾಲೇಜಿನ ಮುದ್ದಣ ಮಂಟಪದಲ್ಲಿ ನಡೆಯುವ ಸಮಾರಂಭವನ್ನು ಉಡುಪಿ ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ. ಖಾದರ್ ಉದ್ಘಾಟಿಸಲಿದ್ದಾರೆ. ಕಾರ್ಯಕ್ರಮದಲ್ಲಿ ಉಡುಪಿ ಲೋಕಸಭಾ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ, ಜಿಲ್ಲೆಯ ಶಾಸಕರಾದ ವಿ. ಸುನಿಲ್ ಕುಮಾರ್, ಯಶ್ಪಾಲ್ ಎ. ಸುವರ್ಣ, ಗುರ್ಮೆ ಸುರೇಶ್ ಶೆಟ್ಟಿ, ಕಿರಣ್ ಕುಮಾರ್ ಕೊಡ್ಲಿ, ಗುರುರಾಜ ಗಂಟಿಹೊಳೆ, ವಿಧಾನ ಪರಿಷತ್ ಸದಸ್ಯ ಡಾ. ಮಂಜುನಾಥ ಭಂಡಾರಿ, ಜಿಲ್ಲಾಧಿಕಾರಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ, ಮಾಹೆ ಮಣಿಪಾಲದ ಸಹಕುಲಾಧಿಪತಿ ಡಾ. ಹೆಚ್.ಎಸ್. ಬಲ್ಲಾಳ್, ಅಂಬಲಪಾಡಿ ದೇವಸ್ಥಾನದ ಡಾ. ಎನ್.ಬಿ. ವಿಜಯ ಬಲ್ಲಾಳ್, ಎಂಜಿಎಂ ಕಾಲೇಜಿನ ಆಡಳಿತ ಮಂಡಳಿ, ಪ್ರಾಂಶುಪಾಲರು, ರಂಗಭೂಮಿ ಸಂಸ್ಥೆಯ ಪದಾಧಿಕಾರಿಗಳು ಹಾಗೂ ಜಿಲ್ಲೆಯ ವಿವಿಧ ರಂಗತಂಡಗಳು ಮತ್ತು ಸಂಘ-ಸಂಸ್ಥೆಗಳ ಪ್ರತಿನಿಧಿಗಳು ಭಾಗವಹಿಸಲಿದ್ದಾರೆ ಎಂದರು.

ಸುದ್ದಿಗೋಷ್ಠಿಯಲ್ಲಿ ಕೋಶಾಧಿಕಾರಿ ಭೋಜ ಯು. ಹಾಗೂ ಆಡಳಿತ ಮಂಡಳಿ ಸದಸ್ಯ ಗಿರೀಶ್ ಯ್ತಂತ್ರಿ ಉಪಸ್ಥಿತರಿದ್ದರು.

Ads on article

Advertise in articles 1

advertising articles 2

Advertise under the article