ಆಳ್ವಾಸ್ ಪ್ರಗತಿ-2026: ಆ.7 ಮತ್ತು 8ರಂದು ಬೃಹತ್ ಉಚಿತ ಉದ್ಯೋಗ ಮೇಳ
Wednesday, July 22, 2026
ದೇಶದ ಯುವಜನರ ಉದ್ಯೋಗ ಕನಸುಗಳಿಗೆ ಬಲ ತುಂಬುತ್ತಿರುವ ರಾಜ್ಯದ ಪ್ರತಿಷ್ಠಿತ ಉಚಿತ ಉದ್ಯೋಗ ಮೇಳ 'ಆಳ್ವಾಸ್ ಪ್ರಗತಿ-2026'**ಯ 16ನೇ ಆವೃತ್ತಿಯು ಆಗಸ್ಟ್ 7 ಮತ್ತು 8ರಂದು ಮೂಡುಬಿದಿರೆಯ ಆಳ್ವಾಸ್ ವಿದ್ಯಾಗಿರಿ ಕ್ಯಾಂಪಸ್ನಲ್ಲಿ ನಡೆಯಲಿದೆ ಎಂದು ಆಳ್ವಾಸ್ ಕಾಲೇಜಿನ ಪ್ರಾಂಶುಪಾಲ ಡಾ. ಕುರಿಯನ್ ತಿಳಿಸಿದ್ದಾರೆ.
ಉಡುಪಿಯಲ್ಲಿ ಅವರು ಸುದ್ದಿಗೋಷ್ಟಿಯಲ್ಲಿ ಮಾತನಾಡಿದರು. 2007ರಿಂದ ನಿರಂತರವಾಗಿ ಆಯೋಜಿಸಲಾಗುತ್ತಿರುವ ಆಳ್ವಾಸ್ ಪ್ರಗತಿ, ಉದ್ಯೋಗಾಕಾಂಕ್ಷಿಗಳು ಮತ್ತು ವಿವಿಧ ಕ್ಷೇತ್ರಗಳ ಪ್ರತಿಷ್ಠಿತ ಕಂಪನಿಗಳನ್ನು ಒಂದೇ ವೇದಿಕೆಯಲ್ಲಿ ಸಂಪರ್ಕಿಸುವ ವಿಶ್ವಾಸಾರ್ಹ ಉದ್ಯೋಗ ಮೇಳವಾಗಿ ಗುರುತಿಸಿಕೊಂಡಿದೆ. ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಸಾಮಾಜಿಕ ಹೊಣೆಗಾರಿಕೆ ಯೋಜನೆಯ ಅಂಗವಾಗಿ ಈ ಮೇಳವನ್ನು ಸಂಪೂರ್ಣ ಉಚಿತವಾಗಿ ಆಯೋಜಿಸಲಾಗುತ್ತಿದ್ದು, ಗ್ರಾಮೀಣ ಹಾಗೂ ಹಿಂದುಳಿದ ಭಾಗಗಳ ಯುವಜನರಿಗೆ ಗುಣಮಟ್ಟದ ಉದ್ಯೋಗಾವಕಾಶ ಕಲ್ಪಿಸುವುದು ಇದರ ಪ್ರಮುಖ ಉದ್ದೇಶವಾಗಿದೆ ಎಂದರು.
ಈ ವರ್ಷದ ಉದ್ಯೋಗ ಮೇಳದಲ್ಲಿ ಈಗಾಗಲೇ 276ಕ್ಕೂ ಹೆಚ್ಚು ಕಂಪನಿಗಳು ನೋಂದಾಯಿಸಿಕೊಂಡಿದ್ದು, 350ಕ್ಕೂ ಅಧಿಕ ಕಂಪನಿಗಳು ಭಾಗವಹಿಸುವ ನಿರೀಕ್ಷೆಯಿದೆ. ಸುಮಾರು 15,860ಕ್ಕೂ ಹೆಚ್ಚು ಉದ್ಯೋಗಾವಕಾಶಗಳು ವಿವಿಧ ಕ್ಷೇತ್ರಗಳಲ್ಲಿ ಲಭ್ಯವಿರಲಿವೆ. ಐಟಿ/ಐಟಿಇಎಸ್, ಉತ್ಪಾದನಾ, ಬ್ಯಾಂಕಿಂಗ್ ಮತ್ತು ಹಣಕಾಸು, ಆರೋಗ್ಯ, ಔಷಧ, ಮಾಧ್ಯಮ, ಎಲೆಕ್ಟ್ರಾನಿಕ್ಸ್, ದೂರಸಂಪರ್ಕ, ನಿರ್ಮಾಣ, ಆತಿಥ್ಯ ಹಾಗೂ ಮಾರಾಟ ಮತ್ತು ಚಿಲ್ಲರೆ ವ್ಯಾಪಾರ ಸೇರಿದಂತೆ ವಿವಿಧ ಕ್ಷೇತ್ರಗಳ ಪ್ರಮುಖ ಸಂಸ್ಥೆಗಳು ನೇಮಕಾತಿ ನಡೆಸಲಿವೆ. ಇನ್ಫೋಸಿಸ್ ಬಿಪಿಎಂ, ಟೆಕ್ ಮಹೀಂದ್ರ ಬಿಪಿಒ, ಟಾಟಾ ಎಲೆಕ್ಟ್ರಾನಿಕ್ಸ್, ಟೊಯೋಟಾ ಕಿರ್ಲೋಸ್ಕರ್, ಮಹೀಂದ್ರ ಫೈನಾನ್ಸ್, ಎಎನ್ಝಡ್, ಇಎಕ್ಸ್ಎಲ್, ಕಾನ್ಸೆಂಟ್ರಿಕ್ಸ್, ಟೆಲಿಪರ್ಫಾರ್ಮೆನ್ಸ್, ಉಜ್ಜೀವನ್ ಸ್ಮಾಲ್ ಫಿನಾನ್ಸ್ ಬ್ಯಾಂಕ್, ವೊಕ್ಹಾರ್ಟ್ ಆಸ್ಪತ್ರೆ, ಸಕ್ರಾ ವರ್ಲ್ಡ್ ಆಸ್ಪತ್ರೆ, ಅಪೋಲೋ ಆಸ್ಪತ್ರೆ, ಏರ್ಟೆಲ್, ಜಿಯೋ ಸೇರಿದಂತೆ ಹಲವು ಪ್ರತಿಷ್ಠಿತ ಸಂಸ್ಥೆಗಳು ಭಾಗವಹಿಸಲಿವೆ ಎಂದರು.
ಡಿಪ್ಲೊಮಾ ಹಾಗೂ ಐಟಿಐ ಅಭ್ಯರ್ಥಿಗಳಿಗೆ ಗಲ್ಫ್ ರಾಷ್ಟ್ರಗಳಲ್ಲಿ ಉದ್ಯೋಗಾವಕಾಶಗಳೂ ಲಭ್ಯವಿದ್ದು, ಮಹಿಳಾ ಅಭ್ಯರ್ಥಿಗಳಿಗಾಗಿ ಟಾಟಾ ಎಲೆಕ್ಟ್ರಾನಿಕ್ಸ್ ವಿಶೇಷ ನೇಮಕಾತಿ ಅಭಿಯಾನ ಹಮ್ಮಿಕೊಂಡಿದೆ. ಕೆಲವು ಸಂಸ್ಥೆಗಳು ವಾರ್ಷಿಕ ₹5 ಲಕ್ಷದಿಂದ ₹8 ಲಕ್ಷದವರೆಗೆ ವೇತನ ಪ್ಯಾಕೇಜ್ ಹೊಂದಿರುವ ಹುದ್ದೆಗಳನ್ನೂ ಪ್ರಕಟಿಸಿವೆ. ಪದವಿ, ಸ್ನಾತಕೋತ್ತರ, ಬಿಇ/ಬಿಟೆಕ್, ಡಿಪ್ಲೊಮಾ, ಐಟಿಐ, ನರ್ಸಿಂಗ್, ವೈದ್ಯಕೀಯ, ಪ್ಯಾರಾ ಮೆಡಿಕಲ್ ಸೇರಿದಂತೆ ವಿವಿಧ ವಿದ್ಯಾರ್ಹತೆ ಹೊಂದಿರುವ ಅಭ್ಯರ್ಥಿಗಳು ಹಾಗೂ ಫ್ರೆಶರ್ಸ್ ಮತ್ತು ಅನುಭವಿಗಳು ಉದ್ಯೋಗ ಮೇಳದಲ್ಲಿ ಭಾಗವಹಿಸಬಹುದು.
ಕಳೆದ ವರ್ಷದ ಆಳ್ವಾಸ್ ಪ್ರಗತಿಯಲ್ಲಿ 2,873 ಅಭ್ಯರ್ಥಿಗಳಿಗೆ ಸ್ಥಳದಲ್ಲೇ ಉದ್ಯೋಗ ದೊರೆತಿದ್ದು, 3,734 ಮಂದಿ ಮುಂದಿನ ಹಂತದ ನೇಮಕಾತಿಗೆ ಆಯ್ಕೆಯಾಗಿದ್ದರು. ಇದುವರೆಗೆ ಒಟ್ಟು 40,848 ಅಭ್ಯರ್ಥಿಗಳು ಸ್ಥಳದಲ್ಲೇ ಉದ್ಯೋಗ ಪಡೆದಿದ್ದು, 66,432ಕ್ಕೂ ಹೆಚ್ಚು ಅಭ್ಯರ್ಥಿಗಳು ವಿವಿಧ ಸಂಸ್ಥೆಗಳಲ್ಲಿ ಮುಂದಿನ ಹಂತಕ್ಕೆ ಶಾರ್ಟ್ಲಿಸ್ಟ್ ಆಗಿದ್ದಾರೆ.ಹೊರ ಜಿಲ್ಲೆಗಳಿಂದ ಆಗಮಿಸುವ ಅಭ್ಯರ್ಥಿಗಳಿಗೆ ಆಗಸ್ಟ್ 6ರಿಂದ ವಸತಿ ವ್ಯವಸ್ಥೆ ಕಲ್ಪಿಸಲಾಗಿದ್ದು, ಐಟಿಐ ವಿದ್ಯಾರ್ಥಿಗಳಿಗೆ ಉಚಿತ ಬಸ್ ವ್ಯವಸ್ಥೆಯನ್ನೂ ಒದಗಿಸಲಾಗುತ್ತದೆ. ಉದ್ಯೋಗ ಮೇಳದಲ್ಲಿ ಭಾಗವಹಿಸಲು ಆನ್ಲೈನ್ ನೋಂದಣಿ ಕಡ್ಡಾಯವಾಗಿದೆ. ಹೆಚ್ಚಿನ ಮಾಹಿತಿಗಾಗಿ 9611750531, 9741440490, 9008907716 ಅಥವಾ 7975223865 ಸಂಖ್ಯೆಗಳನ್ನು ಸಂಪರ್ಕಿಸಬಹುದು ಎಂದರು.
ಸುದ್ದಿಗೋಷ್ಟಿಯಲ್ಲಿ ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥ ಪ್ರಸಾದ್ ಶೆಟ್ಟಿ, ಆಳ್ವಾಸ್ ಇನ್ಸ್ಟಿಟ್ಯೂಟ್ ಆಫ್ ಇಂಜಿನಿಯರಿಂಗ್ & ಟೆಕ್ನಾಲಜಿಯ ಮೆಕ್ಯಾನಿಕಲ್ ಇಂಜಿನಿಯರಿಂಗ್ ವಿಭಾಗದ ಸಹಾಯಕ ಪ್ರಾಧ್ಯಾಪಕ ಶ್ರೀನಿವಾಸ್ ಸಿ.ಎಸ್ ಹಾಗೂ ಮುಳುಗು ತಜ್ಞ, ಆಳ್ವಾಸ್ ಸಮಾಜಶಾಸ್ತ್ರ ವಿಭಾಗದ ಅಂಬಾಸಿಡರ್ ಈಶ್ವರ್ ಮಲ್ಪೆ ಉಪಸ್ಥಿತರಿದ್ದರು.